ಮಧ್ಯಪ್ರದೇಶ ವಲಸೆ ಕಾರ್ಮಿಕರ ಕಣ್ಣೀರ ಕತೆ: ಕುಟುಂಬ ನಡೆಸಲು ಆಡಳಿತಾತ್ಮಕ ನೆರವು ಬೇಡಿದ ಶೇ. 67 ಮಂದಿ

ಅಧ್ಯಯನವೊಂದು ಮಧ್ಯಪ್ರದೇಶ ವಲಸೆ ಕಾರ್ಮಿಕರ ಕಠೋರ ಬದುಕನ್ನು ತೆರೆದಿಟ್ಟಿದೆ. ಊರಿಗೆ ಮರಳಿದ್ದ ಆ ಕಾರ್ಮಿಕರು ಈಗ ತಮ್ಮ ನೆಲೆ ತೊರೆಯುತ್ತಿರುವುದು ಕೋವಿಡ್‌ ಕೊನೆಯಾಗಲಿದೆ ಎಂಬ ಇಂಗಿತದಿಂದಲ್ಲ, ಇಮ್ಮಡಿಗೊಂಡಿರುವ ನೋವಿನೊಂದಿಗೆ...
ಮಧ್ಯಪ್ರದೇಶ ವಲಸೆ ಕಾರ್ಮಿಕರ ಕಣ್ಣೀರ ಕತೆ: ಕುಟುಂಬ ನಡೆಸಲು ಆಡಳಿತಾತ್ಮಕ ನೆರವು ಬೇಡಿದ ಶೇ. 67 ಮಂದಿ

ಕೋವಿಡ್‌ ಮೊದಲು ಬಲಿ ಪಡೆದದ್ದು ಜೀವಗಳನ್ನು ಎಂದುಕೊಂಡರೆ ಅದು ತಪ್ಪು. ದೊಡ್ಡ ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗ ಆಪೋಶನ ತೆಗೆದುಕೊಂಡಿದ್ದು ಭಾರತದಂತಹ ದೇಶಗಳಲ್ಲಿರುವ ಬಡವರ, ನಿರ್ಗತಿಕರ, ಅಂದಿನ ದುಡಿಮೆಯನ್ನೇ ನೆಚ್ಚಿಕೊಂಡವರ ಜೀವನವನ್ನು. ವ್ಯವಸ್ಥೆ ಕೆಲವೆಡೆ ಸ್ಪಂದಿಸಿದರೆ ಹಲವೆಡೆ ನಿಸ್ಸಹಾಯಕವಾಗಿತ್ತು. ಮತ್ತೂ ಕೆಲ ಸಂದರ್ಭಗಳಲ್ಲಿ ಅಮಾನುಷ ಘಟನೆಗಳಿಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿತು. ಅನೇಕ ನಗರಗಳಲ್ಲಿ ಹೊಟ್ಟೆ- ಬಟ್ಟೆ ನೋಡಿಕೊಳ್ಳುತ್ತಿದ್ದ ಮಂದಿ ಎದ್ದು-ಬಿದ್ದು ಊರು ಸೇರಿದರು. ಆದರೆ ಹಾಗೆ ಊರು ಸೇರಿದವರು ಏನಾದರು? ಅವರಿಗೆ ಕೆಲಸ ದಕ್ಕಿತೆ?, ಹೊಲಗದ್ದೆಗಳು ಕೈ ಬೀಸಿ ಕರೆದವೆ? ಸರ್ಕಾರಗಳು ಉದ್ಯೋಗ ದೊರಕಿಸಿಕೊಟ್ಟವೆ? ಅವರು ಅಲ್ಲಿಯೇ ಇದ್ದಾರೆಯೇ ಅಥವಾ ಉದ್ಯೋಗ ಮಾಡುತ್ತಿದ್ದ ರಾಜ್ಯಗಳಿಗೆ ಮರಳಿದರೆ? ಈ ಪ್ರಶ್ನೆಗಳಿಗೆ ದೊರೆಯುವ ಉತ್ತರ ನಿರ್ದಯವಾದುದು. ಸದ್ಯಕ್ಕೆ ಮಧ್ಯಪ್ರದೇಶದ ಒಂದು ಉದಾಹರಣೆಯನ್ನೇ ಗಮನಿಸಿ:

ತಮ್ಮ ಕುಟುಂಬಗಳನ್ನು ಮುನ್ನಡೆಸಲು ಆ ರಾಜ್ಯದ ಶೇ 67ರಷ್ಟು ವಲಸೆ ಕಾರ್ಮಿಕರು ಆಡಳಿತಾತ್ಮಕ ಬೆಂಬಲ ಯಾಚಿಸಿದ್ದಾರೆ. ಶೇ 56.5% ರಷ್ಟು ಮಂದಿ ನಿರುದ್ಯೋಗಿಗಳಾಗಿಯೇ ಇದ್ದಾರೆ. ಉದ್ಯೋಗ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಶೇ 22ರಷ್ಟು ಮಂದಿ ತಮ್ಮದೇ ಅಥವಾ ಬೇರಾರದೋ ಜಮೀನಿನಲ್ಲಿ ದುಡಿಯುತ್ತಿದ್ದಾರೆ. ಕೆಲವೆಡೆ ಒಂದಿಡೀ ಕುಟುಂಬ ಒಂದೇ ಹೊಲದಲ್ಲಿ ಬೆವರು ಸುರಿಸುತ್ತಿದ್ದು ಅದು ಮರೆಮಾಚಿದ ನಿರುದ್ಯೋಗವನ್ನು ಸಾರುತ್ತಿದೆ.

(L to R) Rakshita Agarwal, Rohit Sharma, Lakshay
(L to R) Rakshita Agarwal, Rohit Sharma, Lakshay

ರಕ್ಷಿತಾ ಅಗರ್‌ವಾಲ್‌, ರೋಹಿತ್‌ ಶರ್ಮಾ ಎಂಬ ಕಾನೂನು ಪದವೀಧರರು ಲಕ್ಷಯ್‌ ಎಂಬ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಡನೆ ಸೇರಿ ಮಧ್ಯಪ್ರದೇಶಕ್ಕೆ ಮರಳಿದ ವಲಸೆ ಕಾರ್ಮಿಕರ ಕುರಿತು ಸಮೀಕ್ಷಾ ವರದಿಯೊಂದನ್ನು ತಯಾರಿಸಿದ್ದಾರೆ. ಎಂಪಿ ಮೈಗ್ರೆಂಟ್‌ ಪ್ರಾಜೆಕ್ಟ್‌ ಹೆಸರಿನ ಈ ವರದಿ ವಲಸೆ ಕಾರ್ಮಿಕರ ಸದ್ಯದ ಸ್ಥಿತಿಗತಿ ಕುರಿತು ಹಲವು ವಿಚಾರಗಳನ್ನು ಬೆಳಕಿಗೆ ತಂದಿದೆ.

ಮಧ್ಯಪ್ರದೇಶದ 52 ಜಿಲ್ಲೆಗಳ 1500 ವಲಸೆ ಕಾರ್ಮಿಕರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದು ಅವರಲ್ಲಿ 602 ಮಂದಿ ಮಾತ್ರ ಪ್ರಸ್ತುತ ಗಳಿಕೆಯ ವಿವರಗಳನ್ನು ನೀಡಿದ್ದಾರೆ. ಸರಳವಾಗಿ ಹೇಳುವುದಾದರೆ ಈ ಹಿಂದೆ ಉದ್ಯೋಗದಲ್ಲಿದ್ದ ಬಹುತೇಕ ಮಂದಿಗೆ ಮಧ್ಯಪ್ರದೇಶದಲ್ಲಿ ಇನ್ನೂ ಉದ್ಯೋಗಾವಕಾಶ ದೊರೆತಿಲ್ಲ ಎನ್ನುತ್ತದೆ ಅಂಕಿ-ಅಂಶ. ಅಲ್ಲದೆ ಅವರ ಗಳಿಕೆಯ ಕ್ರಮದಲ್ಲಿ ಸಂಪೂರ್ಣ ವ್ಯತ್ಯಾಸವಾಗಿದ್ದು ದಿನಕ್ಕೆ ರೂ 350 ಸರಾಸರಿ ಆದಾಯಗಳಿಸುತ್ತಿದ್ದವರ ಸಂಖ್ಯೆ ಕ್ಷೀಣಿಸಿದೆ. ಇದು ಅವರ ಜೀವನಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಶೇ 40% ಮಂದಿ ರೂ 250ಕ್ಕಿಂತ ಕಡಿಮೆ ಆದಾಯ ಗಳಿಸುತ್ತಿದ್ದು ಕೋವಿಡ್‌ ಆಕ್ರಮಣಕ್ಕೂ ಮೊದಲು ಇಷ್ಟು ಆದಾಯಗಳಿಸುವವರ ಸಂಖ್ಯೆ ಕೇವಲ ಶೇ 8ರಷ್ಟು ಇತ್ತು ಎಂಬುದು ತೀವ್ರ ಕಳವಳಕಾರಿ ಸಂಗತಿ ಎಂದು ವಿವರಿಸುತ್ತದೆ ಅಧ್ಯಯನ ವರದಿ.

ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ 33 ಮಂದಿ ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಕ್ರಮವಾಗಿ ಶೇ 14.5 ಮತ್ತು ಶೇ 13.4 ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರು. ಶೇ 60 ಮಂದಿ ದುಡಿಯುವ ವಯೋಮಾನವಾದ 21ರಿಂದ 30ರ ಪ್ರಾಯದವರು. ಇಂತಹ ದುಡಿಯವ ವರ್ಗದಲ್ಲಿ ಶೇ 89ರಷ್ಟು ಪುರುಷರಿದ್ದಾರೆ. ಪ್ರತಿಕ್ರಿಯೆ ನೀಡಿದ 1409 ಮಂದಿಯಲ್ಲಿ ಶೇ 50ರಷ್ಟು ವಲಸೆ ಕಾರ್ಮಿಕರು ಹೇಳುವಂತೆ ಕನಿಷ್ಠ ಕುಟುಂಬದ 4ರಿಂದ 6 ಮಂದಿ ಇವರ ಆದಾಯವನ್ನೇ ನೆಚ್ಚಿಕೊಂಡಿದ್ದಾರೆ. ಶೇ 12.5% ಮಂದಿ ಕನಿಷ್ಠ 7 ಮಂದಿ ಇರುವ ಕುಟುಂಬದ ಏಕೈಕ ದುಡಿಯುವ ಸದಸ್ಯರಾಗಿದ್ದಾರೆ.

ನರೇಗಾ, ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಮಾತ್ರವಲ್ಲದೆ ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ಮಧ್ಯಪ್ರದೇಶ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ. ನಯಾ ಸವೇರಾ ಯೋಜನೆ, ಎಂಪಿ ಜೀವನಶಕ್ತಿ ಯೋಜನೆ, ಮುಖ್ಯಮಂತ್ರಿ ಜನ ಕಲ್ಯಾಣ್‌ (ಸಂಭಾಳ್) ‌ಯೋಜನೆ ಅವುಗಳಲ್ಲಿ ಕೆಲವು. ಆದರೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 45.31% ಮಂದಿಗೆ ಈ ಯಾವ ಯೋಜನೆಗಳ ಬಗ್ಗೆ ಒಂದಿಷ್ಟೂ ತಿಳಿದಿಲ್ಲ. 706 ಮಂದಿ ಮಾತ್ರ ಆ ಯೋಜನೆಗಳಲ್ಲಿ ಒಂದನ್ನು ಮಾತ್ರ ಬಲ್ಲವರಾಗಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಕಾಲು ಭಾಗದಷ್ಟು ವಲಸೆ ಕಾರ್ಮಿಕರು ಈಗಾಗಲೇ ಮಧ್ಯಪ್ರದೇಶವನ್ನು ತೊರೆದಿದ್ದಾರೆ. ಅವರು ಈ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣ ಮಧ್ಯಪ್ರದೇಶದಲ್ಲಿ ಕೆಲಸ ಇಲ್ಲದಿರುವುದು. ಇದರರ್ಥ ಇನ್ನುಳಿದ ಮುಕ್ಕಾಲು ಭಾಗದಷ್ಟು ಮಂದಿಗೆ ಕೆಲಸ ಇದೆ ಎಂದಲ್ಲ. ಕುಟುಂಬ ಮತ್ತು ಕೋವಿಡ್‌ ಭೀತಿಯಿಂದಾಗಿ ಅವರು ಅಲ್ಲಿಯೇ ಉಳಿದಿದ್ದಾರೆ. ನಿರುದ್ಯೋಗ ಹೆಚ್ಚುತ್ತಿರುವುದು ಮತ್ತು ಸರ್ಕಾರದ ಯೋಜನೆಗಳು ನಿಷ್ಕ್ರಿಯವಾಗಿರುವುದರಿಂದ ಉಳಿದವರು ಶೀಘ್ರವೇ ತಮ್ಮ ರಾಜ್ಯವನ್ನು ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಅವರಾರೂ ಖುಷಿಯಿಂದ ತಮ್ಮ ಊರುಗಳನ್ನು ತೊರೆಯುತ್ತಿಲ್ಲ. ಭವಿಷ್ಯದ ಉದ್ಯೋಗಕ್ಕೆ ಮತ್ತು ಕಾಯಂ ವಾಸಕ್ಕಾಗಿ ಶೇ 51.79% ಮಂದಿ ಮಧ್ಯಪ್ರದೇಶವನ್ನೇ ಬಯಸುತ್ತಾರೆ. ಕೇವಲ ಶೇ 3ರಷ್ಟು ಮಂದಿ ಮಾತ್ರ ಎಲ್ಲಿ ಬೇಕಾದರೂ ಜೀವಿಸಬಲ್ಲವರಾಗಿದ್ದಾರೆ. ಕುಟುಂಬದ ಜೊತೆಗೆ ಬದುಕಬೇಕೆಂಬ ಬಲವಾದ ಹಂಬಲದ ಹೊರತಾಗಿಯೂ ಪ್ರಸ್ತುತ ಔದ್ಯೋಗಿಕ ಸನ್ನಿವೇಶದಿಂದಾಗಿ ಊರುಗಳನ್ನು ತೊರೆಯಲೇಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ ಶೇ 45 ಮಂದಿ.

(ಮುಂದಿನ ಭಾಗದಲ್ಲಿ: ಮಧ್ಯಪ್ರದೇಶ ವಲಸೆ ಕಾರ್ಮಿಕರ ಕುರಿತಂತೆ ಆಳುವ ವರ್ಗದ ಧೋರಣೆ ಏನು?)

Related Stories

No stories found.
Kannada Bar & Bench
kannada.barandbench.com