ನ್ಯಾ. ಶೇಖರ್‌ ಕುಮಾರ್‌ ಯಾದವ್‌ ವಿರುದ್ಧ ವಾಗ್ದಂಡನಾ ನಿರ್ಣಯಕ್ಕೆ ಮುಂದಾದ ಸಿಬಲ್‌ ನೇತೃತ್ವದ ಸಂಸದರು

ವಾಗ್ದಂಡನೆಯ ಪ್ರಸ್ತಾವನೆಗೆ 55 ಸಂಸದರು ಸಹಿ ಹಾಕಿದ್ದು ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿಯೇ ಈ ಗೊತ್ತುವಳಿಯನ್ನು ಮಂಡಿಸಲು ಉದ್ದೇಶಿಸಲಾಗಿದೆ. ಇತ್ತ ಮತ್ತೊಂದೆಡೆ, ಅಲಾಹಾಬಾದ್‌ ಹೈಕೋರ್ಟ್‌ ಯಾದವ್‌ ರೋಸ್ಟರ್‌ಅನ್ನು ಬದಲಾಯಿಸಿದೆ.
Kapil Sibal and Justice Shekhar Yadav
Kapil Sibal and Justice Shekhar Yadav
Published on

ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಇತ್ತೀಚೆಗೆ ಮುಸ್ಲಿಂ ಸಮುದಾಯದ ವಿರುದ್ಧ ಮಾಡಿದ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ವಾಗ್ದಂಡನಾ ನಿರ್ಣಯ ಮಂಡಿಸಲು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿಗೆ ಕಪಿಲ್ ಸಿಬಲ್ ನೇತೃತ್ವದ ಸಂಸದರು (ಸಂಸದರು) ಪ್ರಸ್ತಾವನೆ ಸಲ್ಲಿಸಿದ್ದಾರೆ.

ವಾಗ್ದಂಡನೆಯ ಪ್ರಸ್ತಾವನೆಗೆ 55 ಸಂಸದರು ಸಹಿ ಹಾಕಿದ್ದು ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೇ ಈ ಗೊತ್ತುವಳಿಯನ್ನು ಮಂಡಿಸಲು ಉದ್ದೇಶಿಸಲಾಗಿದೆ.

ನ್ಯಾಯಮೂರ್ತಿ ಯಾದವ್ ಅವರು ಮಾಡಿದ ಭಾಷಣವು ಭಾರತದ ಸಂವಿಧಾನವನ್ನು ಉಲ್ಲಂಘಿಸುವ ದ್ವೇಷ ಭಾಷಣವಾಗಿದ್ದು, ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತದೆ ಎಂದು ಗೊತ್ತುವಳಿ ಮಂಡನೆಗೆ ಕೋರಿರುವ ಪ್ರಸ್ತಾವನೆಯಲ್ಲಿ ಆರೋಪಿಸಲಾಗಿದೆ.

ನ್ಯಾಯಮೂರ್ತಿ ಯಾದವ್ ಅವರು ತಮ್ಮ ಹೇಳಿಕೆಗಳ ಮೂಲಕ ಅಲ್ಪಸಂಖ್ಯಾತರ ವಿರುದ್ಧ ಪಕ್ಷಪಾತ ಮತ್ತು ಪೂರ್ವಾಗ್ರಹವನ್ನು ಪ್ರದರ್ಶಿಸಿದ್ದಾರೆ, ನಿರ್ದಿಷ್ಟವಾಗಿ ಈ ಸಮುದಾಯಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಗೊತ್ತುವಳಿ ಮಂಡನೆ ಕೋರಿಕೆಯಲ್ಲಿ ಹೇಳಲಾಗಿದೆ.

ಅಲ್ಲದೆ, ಏಕರೂಪ ನಾಗರಿಕ ಸಂಹಿತೆಗೆ (UCC) ಸಂಬಂಧಿಸಿದ ರಾಜಕೀಯ ವಿಷಯಗಳ ಕುರಿತು ಸಾರ್ವಜನಿಕವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ, ನ್ಯಾಯಮೂರ್ತಿ ಯಾದವ್ ಅವರು ನ್ಯಾಯಾಂಗ ಜೀವನದ ಮೌಲ್ಯಗಳ ಮರುಸ್ಥಾಪನೆ, 1997 ಅನ್ನು ಉಲ್ಲಂಘಿಸಿದ್ದಾರೆ ಎಂದು ಗೊತ್ತುವಳಿ ಕೋರಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ಅದರಂತೆ, 1968 ರ ನ್ಯಾಯಾಧೀಶರ (ವಿಚಾರಣೆ) ಕಾಯಿದೆಯ ಪ್ರಕಾರ, ದ್ವೇಷ ಭಾಷಣ, ಕೋಮು ಸೌಹಾರ್ದತೆ ಉಲ್ಲಂಘನೆಯ ಆರೋಪಗಳನ್ನು ತನಿಖೆ ಮಾಡಲು ತನಿಖಾ ಸಮಿತಿಯನ್ನು ರಚಿಸುವ ಪ್ರಸ್ತಾವನೆಯನ್ನು ಭಾರತದ ರಾಷ್ಟ್ರಪತಿಗಳಿಗೆ ರವಾನಿಸುವಂತೆ ಸಂಸದರು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್‌ಕರ್‌ ಅವರನ್ನು ಕೋರಲಾಗಿದೆ.

ನ್ಯಾಯಿಕ ಮೌಲಿಕತೆಗಳನ್ನು ಉಲ್ಲಂಘಿಸಿದ ಆರೋಪಗಳು ಸಾಬೀತಾದರೆ ನ್ಯಾಯಮೂರ್ತಿ ಯಾದವ್ ಅವರನ್ನು ಕಚೇರಿಯಿಂದ ತೆಗೆದುಹಾಕಲು ಸೂಕ್ತ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಹ ಕೋರಲಾಗಿದೆ.

ಎಸ್‌ ಕೆ ಯಾದವ್‌ ರೋಸ್ಟರ್‌ ಬದಲಾವಣೆ

ಮತ್ತೊಂದೆಡೆ, ವಿವಾದಿತ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರ ರೋಸ್ಟರ್‌ನಲ್ಲಿ (ಪ್ರಕರಣಗಳನ್ನು ವಿಷಯಾಧಾರಿತವಾಗಿ ನಿರ್ದಿಷ್ಟ ನ್ಯಾಯಮೂರ್ತಿಗಳ ಮುಂದೆ ವಿಚಾರಣೆಗೆ ಇರಿಸುವ ಪಟ್ಟಿ) ಅಲಹಾಬಾದ್ ಹೈಕೋರ್ಟ್ ಗುರುವಾರ ಮಹತ್ವದ ಬದಲಾವಣೆಯನ್ನು ಪ್ರಕಟಿಸಿದೆ.

ಡಿಸೆಂಬರ್ 16 ರಿಂದ ಜಾರಿಗೆ ಬರಲಿರುವ ರೋಸ್ಟರ್ ಬದಲಾವಣೆಯ ಪ್ರಕಾರ, ನ್ಯಾಯಮೂರ್ತಿ ಯಾದವ್ ಅವರು ಮೊದಲ ಮೇಲ್ಮನವಿಗಳನ್ನು ಮಾತ್ರ ಆಲಿಸಲಿದ್ದಾರೆ - ಜಿಲ್ಲಾ ನ್ಯಾಯಾಲಯಗಳು ನೀಡಿದ ಆದೇಶಗಳಿಂದ ಉದ್ಭವಿಸುವ ಪ್ರಕರಣಗಳನ್ನು, ಅದು ಕೂಡ 2010 ರವರೆಗೆ ಸಲ್ಲಿಕೆಯಾಗಿದ್ದ ಪ್ರಕರಣಗಳನ್ನು ಮಾತ್ರವೇ ಅವರು ಆಲಿಸಲಿದ್ದಾರೆ.

ನ್ಯಾಯಮೂರ್ತಿ ಯಾದವ್ ಅವರು ವಿಎಚ್‌ಪಿ ಆಯೋಜಿಸಿದ್ದ ಸಭೆಯಲ್ಲಿ ಮಾಡಿದ್ದ ಭಾಷಣದ ಬಗ್ಗೆ ಅಲಹಾಬಾದ್ ಹೈಕೋರ್ಟ್‌ನಿಂದ ವರದಿ ಕೇಳಿರುವುದಾಗಿ ಸುಪ್ರೀಂ ಕೋರ್ಟ್ ಸಾರ್ವಜನಿಕವಾಗಿ ಪ್ರಕಟಿಸಿದ ಎರಡು ದಿನಗಳ ನಂತರ ರೋಸ್ಟರ್ ಬದಲಾವಣೆಯಾಗಿದೆ.

ನ್ಯಾಯಮೂರ್ತಿ ಯಾದವ್ ಅವರು ಡಿಸೆಂಬರ್ 8 ರಂದು ತಮ್ಮ ಭಾಷಣದಲ್ಲಿ ಬಹುಸಂಖ್ಯಾತ ಸಮುದಾಯದ ಆಶಯದಂತೆ ಭಾರತ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದರು. ಅವರ ಭಾಷಣದಲ್ಲಿ, ಅವರು "ಕಠ್‌ಮುಲ್ಲಾ" ಎಂಬ ಪದವನ್ನು ಸಹ ಬಳಸಿದ್ದರು, ಇದು ಮುಸ್ಲಿಮರ ವಿರುದ್ಧ ಬಳಸುವ ನಿಂದನೀಯ ಪದವಾಗಿದೆ.

Kannada Bar & Bench
kannada.barandbench.com