ಸದನದಲ್ಲಿ ಭಾಷಣ ಇಲ್ಲವೇ ಮತಕ್ಕಾಗಿ ಲಂಚ ಪಡೆದ ಜನಪ್ರತಿನಿಧಿಗಳಿಗೆ ಕಾನೂನು ಕ್ರಮದಿಂದ ರಕ್ಷಣೆ ಇಲ್ಲ: ಸುಪ್ರೀಂ

ಪಿ ವಿ ನರಸಿಂಹ ರಾವ್ ಪ್ರಕರಣದಲ್ಲಿ ನೀಡಲಾಗಿದ್ದ ಭಿನ್ನ ತೀರ್ಪನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಬದಿಗೆ ಸರಿಸಿತು.
ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ

ಸಂಸತ್ ಸದಸ್ಯರು (ಸಂಸದರು) ಮತ್ತು ವಿಧಾನಸಭೆ ಸದಸ್ಯರು (ಶಾಸಕರು) ಲಂಚ ಪಡೆದ ಆರೋಪ ಎದುರಾದಾಗ ಸಂವಿಧಾನದ 105 ಮತ್ತು 194 ನೇ ವಿಧಿಗಳ ಅಡಿಯಲ್ಲಿ ಅವರು ಕಾನೂನು ಕ್ರಮದಿಂದ ಯಾವುದೇ ರಕ್ಷಣೆ ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ.

ಸಂವಿಧಾನದ ವಿಧಿ 105 (2) ಸಂಸತ್ ಸದಸ್ಯರಿಗೆ (ಸಂಸದರು) ಸಂಸತ್ತಿನಲ್ಲಿ ಅಥವಾ ಯಾವುದೇ ಸಂಸದೀಯ ಸಮಿತಿಯಲ್ಲಿ ಹೇಳಿದ ಯಾವುದೇ ವಿಷಯ ಅಥವಾ ಚಲಾಯಿಸಿದ ಯಾವುದೇ ಮತಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮದಿಂದ ರಕ್ಷಣೆ ನೀಡುತ್ತದೆ. ವಿಧಿ 194 (2) ವಿಧಾನ ಮಂಡಲದ ಸದಸ್ಯರಿಗೆ (ಎಂಎಲ್ಎ) ಇದೇ ರೀತಿಯ ರಕ್ಷಣೆ ನೀಡುತ್ತದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣಎಂ ಎಂ ಸುಂದರೇಶ್ಪಿ ಎಸ್ ನರಸಿಂಹ, ಜೆ ಬಿ ಪರ್ದಿವಾಲಾಪಿ ವಿ ಸಂಜಯ್ ಕುಮಾರ್ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಸರ್ವಾನುಮತದ ತೀರ್ಪು ನೀಡಿದೆ.

ಪಿ ವಿ ನರಸಿಂಹರಾವ್‌ ಮತ್ತು ಸರ್ಕಾರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 1998ರಲ್ಲಿ ತಾನು ನೀಡಿದ್ದ ತೀರ್ಪನ್ನ ಸುಪ್ರೀಂ ಕೋರ್ಟ್‌ ಈ ಮೂಲಕ ಬದಿಗೆ ಸರಿಸಿತು. ತೀರ್ಪಿನಲ್ಲಿ ಶಾಸಕರು ಶಾಸಕಾಂಗ ಸದನದಲ್ಲಿ ನಿರ್ದಿಷ್ಟ ರೀತಿಯಲ್ಲಿ ಮತ ಚಲಾಯಿಸಲು ಲಂಚ ಪಡೆದಿದ್ದಕ್ಕಾಗಿ ಕಾನೂನು ಕ್ರಮದಿಂದ ಮುಕ್ತರು ಎಂದು ಆಗ ಅಭಿಪ್ರಾಯಪಡಲಾಗಿತ್ತು.

"ನರಸಿಂಹರಾವ್ ಪ್ರಕರಣದ ತೀರ್ಪಿನ ಬಹುಮತದ ನಿರ್ಧಾರವನ್ನು ವಿಶ್ಲೇಷಿಸಿದಾಗ, ಸಂಸದೀಯ ಸದಸ್ಯರಿಗೆ ರಕ್ಷಣೆ ನೀಡಬಹುದು ಎಂಬ ತೀರ್ಪನ್ನು ನಾವು ಒಪ್ಪದೆ ತಳ್ಳಿಹಾಕುತ್ತಿದ್ದೇವೆ. ಚುನಾಯಿತ ಪ್ರತಿನಿಧಿಗಳು ಲಂಚ ಪಡೆದು ಮತ ಚಲಾವಣೆ ಮಾಡಿದ ಅಥವಾ ಮಾತನಾಡಿದ ಆರೋಪ ಎದುರಿಸುತ್ತಿದ್ದಾಗ ಅವರಿಗೆ ಕಾನೂನು ಪ್ರಕ್ರಿಯೆಯಿಂದ ರಕ್ಷಣೆಯನ್ನು ನೀಡುವ ಈ ತೀರ್ಪು ಸಾರ್ವಜನಿಕ ಹಿತಾಸಕ್ತಿ, ಸಾರ್ವಜನಿಕ ಹಾಗೂ ಸಂಸದೀಯ ಜೀವನದಲ್ಲಿನ ಪ್ರಾಮಾಣಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಒಂದೊಮ್ಮೆ ಈ ತೀರ್ಪನ್ನು ಮರುಪರಿಶೀಲಿಸದಿದ್ದರೆ ತಪ್ಪೊಂದನ್ನು ಶಾಶ್ವತವಾಗಿ ಉಳಿಸುವ ಗಂಭೀರ ಅಪಾಯವಿದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಸಂಸತ್ತಿನಲ್ಲಿ ಅಥವಾ ವಿಧಾನಸಭೆಯಲ್ಲಿ ಹೇಳಲಾದ ಅಥವಾ ಮಾಡಿದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅನುಚ್ಛೇದ 105 (2) ಮತ್ತು 194 (2) ರ ಅಡಿಯಲ್ಲಿ ಶಾಸಕರಿಗೆ ನೀಡಲಾಗುವ ರಕ್ಷಣೆ ಎಂಬುದು ಶಾಸಕಾಂಗ ಸಭೆಯ ಸಾಮೂಹಿಕ ಕಾರ್ಯನಿರ್ವಹಣೆಗೆ ಸಂಬಂಧಿಸಿದೆ ಎಂದು ನ್ಯಾಯಾಲಯ ವಿವರಿಸಿದೆ.

"ಜನಪ್ರತಿನಿಧಿಗಳಿಗೆ ನೀಡುವ ರಕ್ಷಣೆಯು ಸದನದ ಸಾಮೂಹಿಕ ಕಾರ್ಯನಿರ್ವಹಣೆಯೊಂದಿಗೆ ಸಂಬಂಧವನ್ನು ಹೊಂದಿರಬೇಕು ಮತ್ತು ಅವರು ನಿರ್ವಹಿಸಬೇಕಾದ ಶಾಸಕರ ಅಗತ್ಯ ಕಾರ್ಯಗಳೊಂದಿಗೆ ಸಂಬಂಧವನ್ನು ಹೊಂದಿರಬೇಕು. ಸಂಸದೀಯ ಸವಲತ್ತುಗಳಿಂದ ಲಂಚಕ್ಕೆ ರಕ್ಷಣೆ ನೀಡಲಾಗದು ಎಂದು ನಾವು ಭಾವಿಸುತ್ತೇವೆ" ಎಂಬುದಾಗಿ ನ್ಯಾಯಾಲಯ ಹೇಳಿದೆ.

ಈ ನಿಬಂಧನೆಗಳು ಮುಕ್ತ ಚರ್ಚೆಗಳಿಗೆ ಅನುಕೂಲಕರ ವಾತಾವರಣ ಉಳಿಸಿಕೊಳ್ಳುವ ಉದ್ದೇಶ ಹೊಂದಿವೆಯಾದರೂ, ಭಾಷಣ ಮಾಡಲು ಸದಸ್ಯರಿಗೆ ಲಂಚ ನೀಡಿದರೆ ಆಗ ಅಂತಹ ವಾತಾವರಣ ಹದಗೆಡುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಆದ್ದರಿಂದ, ನ್ಯಾಯಾಲಯವು "ಸಂವಿಧಾನದ ಅನುಚ್ಛೇದ 105 (2) ಅಥವಾ 194ರ ಅಡಿಯಲ್ಲಿ ಲಂಚಕ್ಕೆ ರಕ್ಷಣೆ ನೀಡಲಾಗದು" ಎಂದು ಅಭಿಪ್ರಾಯಪಟ್ಟಿತು.

ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್, ಪಿ ಎಸ್ ನರಸಿಂಹ, ಎ ಎಸ್ ಬೋಪಣ್ಣ, ಎಂ ಎಂ ಸುಂದರೇಶ್, ಜೆ ಬಿ ಪರ್ಡಿವಾಲಾ ಹಾಗೂ ಮನೋಜ್ ಮಿಶ್ರಾ
ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್, ಪಿ ಎಸ್ ನರಸಿಂಹ, ಎ ಎಸ್ ಬೋಪಣ್ಣ, ಎಂ ಎಂ ಸುಂದರೇಶ್, ಜೆ ಬಿ ಪರ್ಡಿವಾಲಾ ಹಾಗೂ ಮನೋಜ್ ಮಿಶ್ರಾ

ಸಂವಿಧಾನದ 105 (2) ಮತ್ತು 194 (2) ವಿಧಿಗಳ ಅಡಿಯಲ್ಲಿ ಶಾಸಕರು ಅನುಭವಿಸುವ ಕಾನೂನು ರಕ್ಷಣೆ ಲಂಚ ತೆಗೆದುಕೊಳ್ಳುವ ಕಾನೂನು ಕ್ರಮದಿಂದ ಅವರನ್ನು ರಕ್ಷಿಸುತ್ತದೆಯೇ ಎಂಬ ಪ್ರಶ್ನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ತೀರ್ಪು ಬಂದಿದೆ.

ನ್ಯಾಯಪೀಠ ಅಕ್ಟೋಬರ್ 5ರಂದು ತೀರ್ಪು ಕಾಯ್ದಿರಿಸಿತ್ತು.

ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಅತ್ತಿಗೆ ಸೀತಾ ಸೊರೆನ್ ಅವರು ಸುಪ್ರೀಂ ಕೋರ್ಟ್ನಲ್ ಅರ್ಜಿ ಸಲ್ಲಿಸಿದ್ದರು. ವಿಶೇಷವೆಂದರೆ, ಜಾರಿ ನಿರ್ದೇಶನಾಲಯ (ಇಡಿ) ಅವರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದ ನಂತರ ಹೇಮಂತ್ ಸೊರೆನ್ ಇತ್ತೀಚೆಗೆ ಅಧಿಕಾರ ಕಳೆದುಕೊಂಡಿದ್ದರು.

ಈ ಮಧ್ಯೆ, 2012 ರ ರಾಜ್ಯಸಭಾ ಚುನಾವಣೆಯಲ್ಲಿ ನಿರ್ದಿಷ್ಟ ಅಭ್ಯರ್ಥಿಗೆ ಮತ ಚಲಾಯಿಸಲು ಸೀತಾ ಸೊರೆನ್ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ 2012ರಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಲಾಗಿತ್ತು. ಸೀತಾ ಸೊರೆನ್ ವಿರುದ್ಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಕ್ರಿಮಿನಲ್ ಪಿತೂರಿ ಮತ್ತು ಲಂಚ ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯಡಿ ಯಡಿ ಸಾರ್ವಜನಿಕ ಸೇವಕರಿಂದ ಕ್ರಿಮಿನಲ್ ದುರ್ನಡತೆ ಆರೋಪ ಹೊರಿಸಲಾಗಿತ್ತು.

2014ರಲ್ಲಿ, ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜಾರ್ಖಂಡ್ ಹೈಕೋರ್ಟ್, ಸೀತಾ ತನಗೆ ಲಂಚ ನೀಡಿದ ವ್ಯಕ್ತಿಗೆ ಮತ ಚಲಾಯಿಸಿಲ್ಲ ಎಂದಿತ್ತು.

ತನ್ನ ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್ ನಿರ್ಧಾರದ ವಿರುದ್ಧ ಸೀತಾ ಮೇಲ್ಮನವಿ ಸಲ್ಲಿಸಿದ ನಂತರ ಪ್ರಕರಣ ಅಂತಿಮವಾಗಿ ಸುಪ್ರೀಂ ಕೋರ್ಟ್ ಅಂಗಳ ತಲುಪಿತ್ತು.

ಇದಕ್ಕೂ ಮುನ್ನ 1998ರಲ್ಲಿ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠವು ಪಿ.ವಿ.ನರಸಿಂಹ ರಾವ್ ವಿರುದ್ಧ ಪ್ರಕರಣದಲ್ಲಿ 105(2)ನೇ ವಿಧಿಯು ಸಂಸದರನ್ನು ಲಂಚದ ಆರೋಪಗಳನ್ನು ಎದುರಿಸದಂತೆ ರಕ್ಷಿಸುತ್ತದೆ ಎಂದು ಹೇಳಿತ್ತು . 3:2 ಬಹುಮತದ ತೀರ್ಪಿನಲ್ಲಿ ವಿಧಿ 105 (2) ಮತದಾನಕ್ಕೆ ಮಾತ್ರವಲ್ಲ, ಮತದಾನದ ಮೇಲೆ ಪ್ರಭಾವ ಬೀರುವ ಲಂಚ ತೆಗೆದುಕೊಳ್ಳುವುದು ಸೇರಿದಂತೆ ಮತದಾನಕ್ಕೆ ಸಂಬಂಧಿಸಿದ ಯಾವುದಕ್ಕೂ ಅನ್ವಯಿಸುತ್ತದೆ ಎಂದು ತರ್ಕಿಸಿತ್ತು.

ಪಿ.ವಿ.ನರಸಿಂಹ ರಾವ್ ಅವರ ತೀರ್ಪನ್ನು ವಿಶಾಲವಾಗಿ ವ್ಯಾಖ್ಯಾನಿಸಬೇಕು, ಇದರಿಂದ ರಾಜಕಾರಣಿಗಳು ಕಾನೂನು ಕ್ರಮಕ್ಕೆ ಹೆದರದೆ ತಮ್ಮ ಮನಸ್ಸು ಬಿಚ್ಚಿ ಮಾತನಾಡಬಹುದು ಎಂದು ಸೀತಾ ಸೊರೇನ್‌ ಸುಪ್ರೀಂ ಕೋರ್ಟ್ ಮುಂದೆ ವಾದಿಸಿದ್ದರು.

ಪಿ.ವಿ.ನರಸಿಂಹ ರಾವ್ ಅವರ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆಯೇ ಎಂದು ನಿರ್ಧರಿಸಲು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 20 ರಂದು ಈ ವಿಷಯವನ್ನು ಏಳು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿದ್ದರು. ಸೀತಾ ಸೊರೆನ್ ಪರವಾಗಿ ಹಿರಿಯ ವಕೀಲ ರಾಜು ರಾಮಚಂದ್ರನ್ ಮತ್ತು ವಕೀಲ ವಿವೇಕ್ ಸಿಂಗ್ ವಾದ ಮಂಡಿಸಿದ್ದರು.

ಹಿರಿಯ ವಕೀಲರಾದ ಪಿ ಎಸ್‌ ಟ್ವಾಲಿಯಾ ಮತ್ತು ಗೌರವ್ ಅಗರ್ವಾಲ್ ಅಮಿಕಸ್‌ ಕ್ಯೂರಿಯಾಗಿದ್ದರು.

ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿದ್ದ ಪಕ್ಷಕಾರರ ಪರವಾಗಿ ಹಿರಿಯ ವಕೀಲರಾದ ಗೋಪಾಲ್ ಶಂಕರನಾರಾಯಣನ್ , ವಿಜಯ್ ಹನ್ಸಾರಿಯಾ ಹಾಗೂ ವಕೀಲ ಅಭಿಮನ್ಯು ಭಂಡಾರಿ ವಹಿಸಿದ್ದರು.

Related Stories

No stories found.
Kannada Bar & Bench
kannada.barandbench.com