
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಜನಕಲೋಟಿ ಗ್ರಾಮದಲ್ಲಿನ ರೈತರೊಬ್ಬರ ಜಮೀನಿನಲ್ಲಿರುವ ಕೃಷಿ ಹೊಂಡದ ನೀರಿಗೆ ರಾಸಾಯನಿಕ ಹಾಕಿ ಸ್ಫೋಟ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್‌ಗೆ ಮಧುಗಿರಿಯ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ.
ಪ್ರತಾಪ್ ಎನ್ ಎಂ ಅಲಿಯಾಸ್ ಡ್ರೋನ್ ಪ್ರತಾಪ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಧುಗಿರಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ ಯಾದವ್ ಪುರಸ್ಕರಿಸಿದ್ದಾರೆ.
ಅರ್ಜಿಯನ್ನು ಪುರಸ್ಕರಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ. ಡ್ರೋನ್ ಪ್ರತಾಪ್ ಪರವಾಗಿ ವಕೀಲ ಮುರಳಿಕೃಷ್ಣ ವಕಾಲತ್ತು ಹಾಕಿದ್ದರು.
ಪ್ರಕರಣದ ಹಿನ್ನೆಲೆ: ತುಮಕೂರು ಜಿಲ್ಲೆಯ ಮಧುಗಿರಿಯ ಐ ಡಿ ಹೋಬಳಿಯ ಜನಕಲೋಟಿ ಗ್ರಾಮದಲ್ಲಿನ ಶ್ರೀರಾಯರ ಬೃಂದಾವನ ಫಾರ್ಮ್ಸ್ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ 15 ದಿನಗಳ ಹಿಂದೆ ಪ್ರತಾಪ್ ಮತ್ತು ಆತನ ಸಹಾಯಕರು ಕಾರಿನಲ್ಲಿ ಬಂದು ಯಾವುದೋ ಸ್ಫೋಟಕವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಉಂಡೆ ಮಾಡಿ ಹೊಂಡಕ್ಕೆ ಎಸೆದಿದ್ದಾರೆ. ಇದರಿಂದ ಸ್ಫೋಟಕ ವಸ್ತು ಜನರು ಭಯಬೀಳುವಂತೆ ಭಯಾನಕವಾಗಿ ಸಿಡಿದಿದ್ದು, ಕೃಷಿ ಹೊಂಡದ ನೀರು ಹೊರಗೆ ಚಿಮ್ಮಿದೆ. ಈ ಸಂದರ್ಭದಲ್ಲಿ ಪ್ರತಾಪ್ ಕೈಗಳಿಗೂ ಗಾಯಗಳಾಗಿವೆ ಎನ್ನಲಾಗಿದೆ. ಮಾನವ ಜೀವಕ್ಕೆ ಮತ್ತು ಆಸ್ತಿ-ಪಾಸ್ತಿಗೆ ಹಾನಿಯಾಗುವಂತೆ ಶ್ರೀ ರಾಯರ ಬೃಂದಾವನ ಫಾರ್ಮ್ಸ್ ಕೃಷಿ ಹೊಂಡದ ನೀರಿನಲ್ಲಿ ಸ್ಫೋಟಕ ಸಿಡಿಸಿದ ಡ್ರೋನ್ ಪ್ರತಾಪ್, ಆತನ ಸಹಾಯಕರು ಹಾಗೂ ಫಾರ್ಮ್ಸ್ ಮಾಲೀಕ ಜಿತೇಂದ್ರ ಜೈನ್ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದ ಗೋಪಾಲಕೃಷ್ಣ ನೀಡಿದ ದೂರಿನ ಅನ್ವಯ ಡಿಸೆಂಬರ್ 12ರಂದು ಮಧುಗುರಿ ತಾಲ್ಲೂಕಿನ ಮಿಡಿಗೇಶಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಪ್ರತಾಪ್, ಅನಾಮಿಕರೊಬ್ಬರು ಹಾಗೂ ಜಿತೇಂದ್ರ ಜೈನ್ ವಿರುದ್ಧ ಸ್ಫೋಟಕ ವಸ್ತುಗಳ ಕಾಯಿದೆ ಸೆಕ್ಷನ್ 3, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 288 (ಮನುಷ್ಯರ ಬದುಕಿಗೆ ಎರವಾಗುವ ಸ್ಫೋಟಕವನ್ನು ಅಜಾಗರೂಕತೆಯಿಂದ ಬಳಸುವುದು) ಅಡಿ ಪ್ರಕರಣ ದಾಖಲಿಸಲಾಗಿದೆ.