ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರನ್ನು ಕೊಲ್ಲುವುದಾಗಿ ದೂರವಾಣಿ ಕರೆ ಮೂಲಕ ನಿಂದಿಸಿ ಬೆದರಿಕೆ ಒಡ್ಡಿದ ಆರೋಪದಡಿ ಬಂಧಿತನಾಗಿದ್ದ ವ್ಯಕ್ತಿಯನ್ನು ಮುಂಬೈ ನ್ಯಾಯಾಲಯ ಮಂಗಳವಾರ ಆಗಸ್ಟ್ 20 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
56 ವರ್ಷದ ಆರೋಪಿ ವಿಷ್ಣು ಭೌಮಿಕ್‌ನನ್ನು ಆಗಸ್ಟ್ 15ರಂದು ಬಂಧಿಸಿದ್ದ ಮುಂಬೈ ಪೊಲೀಸರು ಎಸ್‌ಪ್ಲನೇಡ್‌ನಲ್ಲಿರುವ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಕೋರಿದ್ದರು. ಹೆಚ್ಚುವರಿ ಸಿಎಂಎಂ ಎಸ್ ವಿ ದಿನೋಕರ್ ಅವರು ಇಂದು ಆರೋಪಿಯನ್ನು ಪೊಲೀಸ್ ವಶಕ್ಕೆ ನೀಡಿ ಆದೇಶ ಹೊರಡಿಸಿದರು.
ಪ್ರಾಸಿಕ್ಯೂಷನ್ ವಾದದ ಪ್ರಕಾರ, ವೃತ್ತಿಯಲ್ಲಿ ಆಭರಣ ವಿನ್ಯಾಸಕನಾದ ಭೌಮಿಕ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಒಂಬತ್ತು ಬಾರಿ ದೂರವಾಣಿ ಕರೆ ಮಾಡಿ , ಅಂಬಾನಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.
ಕೃತ್ಯದ ಗಂಭೀರತೆಯನ್ನು ಪರಿಗಣಿಸಿ, ಭೌಮಿಕ್ ವಿರುದ್ಧ ಐಪಿಸಿ ಸೆಕ್ಷನ್ 506 (II) (ಸಾವು ಅಥವಾ ಘೋರವಾದ ಹಾನಿ ಉಂಟುಮಾಡುವ ಬೆದರಿಕೆ) ಅಡಿಯಲ್ಲಿ ಅಪರಾಧ ದಾಖಲಿಸಲಾಯಿತು ಕೃತ್ಯದ ಉದ್ದೇಶದ ಬಗ್ಗೆ ತನಿಖೆ ನಡೆಸಲು ಪ್ರಾಸಿಕ್ಯೂಷನ್ 10 ದಿನಗಳ ಕಸ್ಟಡಿಗೆ ಕೋರಿತು.
“ಸ್ವಾತಂತ್ರ್ಯ ದಿನದಂದು ಕರೆ ಮಾಡಲಾಗಿದೆ, ಹೀಗಾಗಿ ಇದರ ಹಿಂದೆ ಕಾರಣ ಮತ್ತು ಉದ್ದೇಶವಿದೆ. ಆರೋಪಿ ಕರೆಯನ್ನು ಬೇರೆ ದಿನ ಏಕೆ ಮಾಡಲಿಲ್ಲ? ಮುಕೇಶ್ ಅಂಬಾನಿ ಅವರಿಗೆ ಬೆದರಿಕೆ ಇದ್ದು ಅವರಿಗೇ ಆರೋಪಿ ಏಕೆ ಕರೆ ಮಾಡಿದ? ಇದು ಗಂಭೀರ ಅಪರಾಧ, ಇದು ಸರಳವಾದ ಪ್ರಕರಣವಲ್ಲ,” ಎಂದು ಪ್ರಾಸಿಕ್ಯೂಟರ್ ವಾದಿಸಿದರು. ಆರೋಪಿಯು ಪುನರಾವರ್ತಿತ ಅಪರಾಧಿ ಎಂದು ತೋರುತ್ತಿದೆ. ಪ್ರಕರಣದಲ್ಲಿ ಯಾರಿಗೆಲ್ಲಾ ನಂಟಿದೆ ಎಂದು ಕಂಡುಹಿಡಿಯಲು ಪೊಲೀಸರು ಸಂಪೂರ್ಣ ತನಿಖೆ ನಡೆಸಲು ಬಯಸಿದ್ದಾರೆ ಎಂದರು.
ಕಸ್ಟಡಿ ವಿರೋಧಿಸಿದ ಪ್ರತಿವಾದಿ ವಕೀಲರು, ಆಸ್ಪತ್ರೆಗೆ ಕರೆ ಮಾಡಲಾಗಿದೆಯೇ ಹೊರತು ಅಂಬಾನಿ ಅವರಿಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮನೋವೈದ್ಯರು ನೀಡಿದ ಪ್ರಮಾಣಪತ್ರವನ್ನು ಸಹ ಮ್ಯಾಜಿಸ್ಟ್ರೇಟ್‌ಗೆ ನೀಡಲಾಯಿತು. ಯಾವುದೇ ಅಹಿತಕರ ಕೃತ್ಯ ಎಸಗುವ ಉದ್ದೇಶ ಆತನಿಗಿರಲಿಲ್ಲ ಎಂದು ಅವರು ಹೇಳಿದರು. ಅಲ್ಲದೆ ಅಪರಾಧದ ಹಿನ್ನೆಲೆ ಆತನಿಗಿರುವುದನ್ನು ಕೂಡ ನಿರಾಕರಿಸಲಾಯಿತು. ಸಂಕ್ಷಿಪ್ತ ವಿಚಾರಣೆಯ ನಂತರ, ಮ್ಯಾಜಿಸ್ಟ್ರೇಟ್ ಆರೋಪಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು.