ಟಿಆರ್‌ಪಿ ಹಗರಣ: ಅರ್ನಾಬ್ ಗೋಸ್ವಾಮಿ ವಿರುದ್ಧದ ಪ್ರಕರಣ ಹಿಂಪಡೆಯಲು ಪೊಲೀಸರಿಗೆ ಮುಂಬೈ ನ್ಯಾಯಾಲಯ ಅನುಮತಿ

ವಿಚಾರಣೆ ಮುಂದುವರೆಸಿದರೆ ಶಿಕ್ಷೆಯೇನೂ ಆಗದು ಬದಲಿಗೆ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತದೆ ಎಂದು ಎಸ್‌ಪಿಪಿ ಶಿಶಿರ್ ಹೀರೆ ಅವರು ನ್ಯಾಯಾಲಯಕ್ಕೆ ಹೇಳಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣ ಹಿಂತೆಗೆದುಕೊಳ್ಳಲು ಅನುಮತಿಸಿತು.
ಅರ್ನಾಬ್ ಗೋಸ್ವಾಮಿ, ಎಸ್‌ಪ್ಲನೇಡ್‌ ನ್ಯಾಯಾಲಯ, ಮುಂಬೈ
ಅರ್ನಾಬ್ ಗೋಸ್ವಾಮಿ, ಎಸ್‌ಪ್ಲನೇಡ್‌ ನ್ಯಾಯಾಲಯ, ಮುಂಬೈ

ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಆರೋಪಿಯಾಗಿರುವ 2020ರ ನಕಲಿ ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್ಸ್‌ (ಟಿಆರ್‌ಪಿ) ಹಗರಣ ಕುರಿತಾದ ಪ್ರಕರಣವನ್ನು ಹಿಂಪಡೆಯಲು ಮುಂಬೈ ಪೊಲೀಸ್‌ ಅಪರಾಧ ವಿಭಾಗಕ್ಕೆ ಮುಂಬೈ ನ್ಯಾಯಾಲಯ ಬುಧವಾರ ಅನುಮತಿ ನೀಡಿದೆ.

ವಿಚಾರಣೆ ಮುಂದುವರೆಸಿದರೆ ಶಿಕ್ಷೆಯೇನೂ ಆಗದು ಬದಲಿಗೆ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ ಪಿಪಿ) ಶಿಶಿರ್ ಹೀರೆ ಅವರು ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಎಸ್‌ಪ್ಲನೇಡ್‌ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಲ್ ಎಸ್ ಪಧೇನ್ ಅವರು ಪ್ರಕರಣ ಹಿಂತೆಗೆದುಕೊಳ್ಳಲು ಅನುಮತಿಸಿದರು.

ಈ ಬೆಳವಣಿಗೆಯ ಕುರಿತು ಹೀರೆ ಅವರು ಬಾರ್ ಅಂಡ್ ಬೆಂಚ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

"...ಪ್ರಕರಣ ಹಿಂಪಡೆಯಲು ನ್ಯಾಯಾಲಯದ ಒಪ್ಪಿಗೆ ಕೋರಿ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿತು. ಅಪರಾಧ ನಡೆದಿದೆ ಎಂದು ಹೇಳಲು ಈವರೆಗೆ ಯಾರೂ ಮುಂದೆ ಬಂದಿಲ್ಲ. ಟ್ರಾಯ್ ಆಗಲಿ, ಬಾರ್ಕ್ ಆಗಲಿ ಅಥವಾ ಯಾವುದೇ ಜಾಹೀರಾತುದಾರರಾಗಲಿ ತಾವು ಮೋಸ ಹೋಗಿದ್ದೇವೆ ಅಥವಾ ಅಪರಾಧ ನಡೆದಿದೆ ಎಂದು ಹೇಳಿಲ್ಲ. ನಮ್ಮ ವಿವೇಚನೆ ಬಳಸಿ ವಿಚಾರಣೆ ಮುಂದುವರೆಸಿದರೆ ಶಿಕ್ಷೆಯೇನೂ ಆಗದು ಬದಲಿಗೆ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತದೆ ಎಂದು ತೀರ್ಮಾನಿಸಿದ್ದೇವೆ" ಎಂದು ಅವರು ಹೇಳಿದರು.

ಇದೇ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಪ್ರಕರಣದಲ್ಲಿನ ಆರೋಪಗಳನ್ನು ಸಾಕ್ಷಿಗಳು ಬೆಂಬಲಿಸದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ವ್ಯತಿರಿಕ್ತ ವರದಿ ಸಲ್ಲಿಸಿದ್ದನ್ನು ಹೀರೆ ಅವರು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಮುಂಬೈ ಪೊಲೀಸ್ ಎಫ್ಐಆರ್ ಆಧಾರದ ಮೇಲೆ ಇ ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಪ್ರಕರಣದಲ್ಲಿ ಟಿಆರ್‌ಪಿ ಸಂಖ್ಯೆಗಳನ್ನು ದುರ್ಬಳಕೆ ಮಾಡಿದ ಆರೋಪದಿಂದ ರಿಪಬ್ಲಿಕ್ ಟಿವಿ ಮತ್ತು ಆರ್ ಭಾರತ್ ಸುದ್ದಿ ವಾಹಿನಿಯನ್ನು ಇ ಡಿ ಮುಕ್ತಗೊಳಿಸಿತ್ತು. ಈ ವ್ಯತಿರಿಕ್ತ ಪುರಾವೆಗಳ ಬಗ್ಗೆ ಎಸ್‌ಪ್ಲನೇಡ್‌ ನ್ಯಾಯಾಲಯಕ್ಕೆ ತಿಳಿಸಲಾಗಿದೆ ಎಂದು ಹೀರೆ ಹೇಳಿದರು.

ಹನ್ಸಾ ಸಂಶೋಧನಾ ಸಮೂಹ ಸಂಸ್ಥೆಯ ಕೆಲವು ಉದ್ಯೋಗಿಗಳು ನಿರ್ದಿಷ್ಟ ಟಿವಿ ಚಾನೆಲ್‌ಗಳನ್ನು ವೀಕ್ಷಿಸಲು ಜನರಿಗೆ ಹಣ ಪಾವತಿಸುವ ಮೂಲಕ 'ಸ್ಯಾಂಪ್ಲಿಂಗ್ ಮೀಟರಿಂಗ್ ಸೇವೆಗಳನ್ನು' ತಿರುಚಿದ್ದಾರೆ ಎಂದು ಮುಂಬೈ ಪೊಲೀಸ್‌ ಅಪರಾಧ ವಿಭಾಗ ಪತ್ತೆಹಚ್ಚಿದ ಪರಿಣಾಮ 2020ರಲ್ಲಿ ಟಿಆರ್‌ಪಿ ಹಗರಣ ಸದ್ದು ಮಾಡಿತ್ತು.

ರಿಪಬ್ಲಿಕ್ ಟಿವಿ ವಾಹಿನಿಗಳು ಹಗರಣದಿಂದ ಲಾಭ ಪಡೆದಿದ್ದು ಹೆಚ್ಚಿನ ಆದಾಯ ಗಳಿಸುವುದಕ್ಕಾಗಿ ತಮ್ಮ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿವೆ ಎಂದು ಅಪರಾಧ ವಿಭಾಗ 2020ರ ನವೆಂಬರ್‌ನಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು.

ಆದರೆ ಅರ್ನಾಬ್‌ ಅವರನ್ನು ಪ್ರಕರಣದ ಆರೋಪಿ ಎಂದು ಜೂನ್ 2021ರವರೆಗೆ ಅಪರಾಧ ವಿಭಾಗ ಆರೋಪಪಟ್ಟಿ ಸಲ್ಲಿಸಿರಲಿಲ್ಲ. ಅಂತಿಮವಾಗಿ ಪ್ರಕರಣದಲ್ಲಿ ಬಂಧಿತರಾಗಿದ್ದ 10ಕ್ಕೂ ಹೆಚ್ಚು ಮಂದಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಸೆಕ್ಷನ್ 321ರ ಅಡಿಯಲ್ಲಿ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಅಪರಾಧ ವಿಭಾಗ 2023ರ ನವೆಂಬರ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಎಸ್‌ಪ್ಲನೇಡ್‌ ನ್ಯಾಯಾಲಯ ನಿನ್ನೆ ಪುರಸ್ಕರಿಸಿದೆ.

ಮುಂಬೈ ಪೊಲೀಸ್ ತನಿಖೆಯಲ್ಲಿನ ವಿರೋಧಾಭಾಸಗಳು ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ರಾಜ್ಯ ಗೃಹ ಇಲಾಖೆ ಪ್ರಕರಣ ಹಿಂತೆಗೆದುಕೊಳ್ಳಲು ನಿರ್ಧರಿಸಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ನ್ಯಾಯಾಲಯದ ವಿವರವಾದ ಆದೇಶ ಇನ್ನಷ್ಟೇ ದೊರೆಯಬೇಕಿದೆ.

Related Stories

No stories found.
Kannada Bar & Bench
kannada.barandbench.com