ಸರ್ಕಾರೇತರ ಸಂಸ್ಥೆ ಧ್ಯಾನ್ ಪ್ರತಿಷ್ಠಾನ ಹಾಗೂ ಅದರ ಸಂಸ್ಥಾಪಕ ಯೋಗಿ ಅಶ್ವಿನಿ ವಿರುದ್ಧದ ಅವಹೇಳನಕಾರಿ ವಿಡಿಯೋವನ್ನು ಯೂಟ್ಯೂಬ್ ತೆಗೆಯದೆ ಇರುವುದರಿಂದ ಯೂಟ್ಯೂಬ್‌ನ ಮಾತೃಸಂಸ್ಥೆಯಾದ ಗೂಗಲ್‌ನ ಸಿಇಒ ಸುಂದರ್ ಪಿಚ್ಚೈ ಅವರಿಗೆ ಮುಂಬೈನ ಬಲ್ಲಾರ್ಡ್ ಪಿಯರ್‌ನಲ್ಲಿರುವ ಅಡಿಷಿನಲ್ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈಚೆಗೆ ನೋಟಿಸ್ ನೀಡಿದೆ [ಧ್ಯಾನ್ ಪ್ರತಿಷ್ಠಾನ ಮತ್ತು ಗೂಗಲ್ ಸಿಇಒ ನಡುವಣ ಪ್ರಕರಣ].
ಪ್ರಕರಣದ ವಿಚಾರಣೆ 2025ರ ಜನವರಿ 3ರಂದು ನಡೆಯುವ ಸಾಧ್ಯತೆಗಳಿವೆ.
ಕಳೆದ ವರ್ಷ ಮಾರ್ಚ್‌ನಲ್ಲಿ, 38 ನೇ ಅಡಿಷಿನಲ್ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ "ಪಾಖಂಡಿ ಬಾಬಾ ಕಿ ಕರ್ತೂಟ್" ಹೆಸರಿನ ಮಾನಹಾನಿಕರ ವಿಡಿಯೋವನ್ನು ಯೂಟ್ಯೂಬ್‌ನಿಂದ ತೆಗೆದುಹಾಕುವಂತೆ ನಿರ್ದೇಶಿಸಿತ್ತು. ವಿಡಿಯೋದಲ್ಲಿ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳಿವೆ ಎಂದು ಆರೋಪಿಸಿ ಧ್ಯಾನ್ ಪ್ರತಿಷ್ಠಾನ ಸಲ್ಲಿಸಿದ ದೂರಿಗೆ ಪ್ರತಿಕ್ರಿಯೆಯಾಗಿ ಈ ಆದೇಶ ನೀಡಲಾಗಿತ್ತು.
ವಾದ ಮಂಡನೆ ವೇಳೆ ತನ್ನನ್ನು ಸಮರ್ಥಿಸಿಕೊಂಡಿದ್ದ ಗೂಗಲ್ ಒಡೆತನದ ಯೂಟ್ಯೂಬ್, ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿಯಲ್ಲಿ ಮಧ್ಯಸ್ಥಗಾರ ಎಂಬ ವಿನಾಯಿತಿ ತನಗೆ ಇದೆ. ಮಾನನಷ್ಟ ಎಂಬುದು ಕಾಯಿದೆಯ ಸೆಕ್ಷನ್ 69-ಎ ಅಡಿಯಲ್ಲಿ ವರ್ಗೀಕರಿಸಿದ ಪಟ್ಟಿಯಡಿ ಬರುವುದಿಲ್ಲ. ಈ ಬಗೆಯ ವ್ಯಾಜ್ಯವನ್ನು ಸಿವಿಲ್ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬೇಕೆ ವಿನಾ ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಅಲ್ಲ ಎಂದಿತ್ತು.
ಆದರೆ ಯೂಟ್ಯೂಬ್‌ನ ತಾಂತ್ರಿಕ ಆಕ್ಷೇಪಣೆಗಳನ್ನು ತಿರಸ್ಕರಿಸಿದ ನ್ಯಾಯಾಲಯ ಅಂತಹ ಪ್ರಕರಣಗಳಲ್ಲಿ ಕ್ರಿಮಿನಲ್ ನ್ಯಾಯಾಲಯಗಳು ಮಧ್ಯಪ್ರದೇಶಿಸುವುದನ್ನು ಐಟಿ ಕಾಯಿದೆ ಎಲ್ಲಿಯೂ ನಿರ್ಬಂಧಿಸುವುದಿಲ್ಲ ಎಂದು ಹೇಳಿತ್ತು.
ವಿಡಿಯೋ ಮಾನಹಾನಿಕರ ಸ್ವರೂಪದಿಂದ ಕೂಡಿರುವುದು ನಿರ್ವಿವಾದಿತವಾಗಿದ್ದು ಅದರ ನಿರಂತರ ಪ್ರಸಾರ ಸಾರ್ವಜನಿಕ ಶಾಂತಿಗೆ ಧಕ್ಕೆ ತರಬಹುದು ಎಂಬುದಾಗಿ ನ್ಯಾಯಾಧೀಶರು ತಿಳಿಸಿದ್ದರು.
“ಭಾರತದ ಯಾವುದೇ ಸಂಘಟನೆಯ ಅನುಯಾಯಿಗಳ ಭಾವನೆಗಳು ವಿಶೇಷವಾಗಿ ಧರ್ಮಕ್ಕೆ ಸಂಬಂಧಿಸಿದಂತೆ ಬಹಳ ಸೂಕ್ಷ್ಮವಾಗಿರುತ್ತವೆ. ಆದ್ದರಿಂದ, ಆ ವಿಡಿಯೋಗಳನ್ನು ನಿರ್ಬಂಧಿಸದಿದ್ದರೆ, ಅದು ಸಾರ್ವಜನಿಕ ಸುವ್ಯವಸ್ಥೆ ಮತ್ತು ದೇಶದ ಭದ್ರತೆಗೆ ಅಪಾಯವನ್ನು ಉಂಟುಮಾಡಬಹುದು” ಎಂದು ನ್ಯಾಯಾಲಯ ವಿವರಿಸಿತು.
ಆದರೆ ಈ ಆದೇಶವನ್ನು ಪಾಲಿಸಿಲ್ಲ ಎಂದು ವಾದಿಸಿದ್ದ ಧ್ಯಾನ್ ಪ್ರತಿಷ್ಠಾನ ಅಕ್ಟೋಬರ್ 2023ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗೆ ಸಂಬಂಧಿಸಿದಂತೆ ನವೆಂಬರ್ 2024ರಲ್ಲಿ ನೋಟಿಸ್ ನೀಡಲಾಗಿದೆ.