ಅಶ್ಲೀಲ ಚಿತ್ರ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯವು ಉದ್ಯಮಿ ಮತ್ತು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು 2 ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಕುಂದ್ರಾ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 292, 293 (ಅಶ್ಲೀಲ ವಿಷಯ ಸಾಮಗ್ರಿಗಳ ಮಾರಾಟ), ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ಗಳಾದ 67, 67ಎ ಅಡಿ (ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದ ವಿಷಯ ಸಾಮಗ್ರಿ ವರ್ಗಾವಣೆ) ಮತ್ತು ಮಹಿಳೆಯರನ್ನು ಅಶ್ಲೀಲವಾಗಿ ಬಿಂಬಿಸುವುದನ್ನು ನಿಯಂತ್ರಿಸುವ ಕಾಯಿದೆ ಅಡಿ ಆರೋಪ ಹೊರಿಸಲಾಗಿದೆ.
ಕುಂದ್ರಾ ಅವರನ್ನು ಬಂಧಿಸಿದ್ದ ಮುಂಬೈ ಪೊಲೀಸರು ಅವರನ್ನು ಎಸ್ಪ್ಲನೇಡ್‌ನಲ್ಲಿರುವ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಜುಲೈ 23ರವರೆಗೆ ಕುಂದ್ರಾ ಅವರನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದರು. ನಂತರ ಶುಕ್ರವಾರ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ಜುಲೈ 27ರವರೆಗೆ ವಿಸ್ತರಿಸಲಾಗಿತ್ತು.
ಮಂಗಳವಾರ ಪ್ರಾಸಿಕ್ಯೂಷನ್ ಪರ ವಕೀಲರು ಮತ್ತೆ 7 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸುವಂತೆ ಕೋರಿದರಾದರೂ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತು.
ಕುಂದ್ರಾ ಅವರ ಕಂಪೆನಿಗೆ ಸೇರಿದ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಯಲ್ಲಿ ರೂ 1.13 ಕೋಟಿ ಹಣ ಪತ್ತೆಯಾಗಿದೆ. ಕುಂದ್ರಾ ಅವರು ಆಪಲ್ ಕಂಪೆನಿಯಿಂದ ರೂ1.64 ಕೋಟಿ ಪಡೆದಿದ್ದು ಮತ್ತು ಗೂಗಲ್‌ನಿಂದ ಎಷ್ಟು ಹಣ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿಲ್ಲ ಎಂದು ಪ್ರಾಸಿಕ್ಯೂಷನ್ ವಾದಿಸಿತು.
ಸಂತ್ರಸ್ತರು ಮುಂದೆ ಬಂದು ತಮ್ಮ ವಿರುದ್ಧ ಎಸಗಲಾಗಿರುವ ಕೃತ್ಯಗಳ ಬಗ್ಗೆ ಮಾತನಾಡಬೇಕು ಎಂದು ಪ್ರಾಸಿಕ್ಯೂಷನ್ ಮನವಿ ಮಾಡಿದೆ. ಇಲ್ಲಿಯವರೆಗೆ ಪ್ರಾಸಿಕ್ಯೂಷನ್ ಪರ ವಕೀಲರು ಇಬ್ಬರು ಸಂತ್ರಸ್ತರಿಂದ ಹೇಳಿಕೆ ದಾಖಲಿಸಿದ್ದು ಉಳಿದವರಿಗೆ ಹೇಳಿಕೆ ದಾಖಲಿಸಲು ಆಹ್ವಾನ ನೀಡಿದ್ದಾರೆ.
ಕುಂದ್ರಾ ಪರವಾಗಿ ಹಾಜರಾದ ಹಿರಿಯ ವಕೀಲ ಆಬಾದ್ ಪೊಂಡಾ, ಕುಂದ್ರಾ ಅವರ ವಿರುದ್ಧ ಹೊರಿಸಲಾಗಿರುವ ಒಟ್ಟು ಆರೋಪಗಳಲ್ಲಿ ಕೇವಲ ಎರಡು ಅಪರಾಧಗಳು ಮಾತ್ರ ಜಾಮೀನು ರಹಿತವಾಗಿದ್ದು ಅವರನ್ನು ಪೊಲೀಸ್ ವಶಕ್ಕೆ ನೀಡುವುದು ಕಾನೂನುಬಾಹಿರ ಎಂದು ತಮ್ಮ ವಾದ ಪುನರುಚ್ಚರಿಸಿದರು. ಪೊಲೀಸರು ಸಮನ್ಸ್ ನೀಡಿದರೆ ಕುಂದ್ರಾ ಸಹಕರಿಸುತ್ತಾರೆ. ಕುಂದ್ರಾರನ್ನು ಬಂಧಿಸಿ ಪ್ರಾಸಿಕ್ಯೂಷನ್ ಹೊಸತೇನನ್ನೂ ಪಡೆಯುವುದಿಲ್ಲ ಎಂದರು.
ಮತ್ತೊಂದೆಡೆ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಈವರೆಗಿನ ಆದೇಶಗಳನ್ನು ಪ್ರಶ್ನಿಸಿ ಉದ್ಯಮಿ ರಾಜ್ ಕುಂದ್ರಾ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಮಂಗಳವಾರ ನಡೆಸಿತು.
ವಿಚಾರಣೆಯ ವೇಳೆ ಕುಂದ್ರಾ ಪರ ವಕೀಲ ಆಬಾದ್ ಪೊಂಡಾ ಅವರು ಕುಂದ್ರಾರನ್ನು ಬಂಧಿಸುವುದಕ್ಕೂ ಮುನ್ನ ವಿಚಾರಣೆಗೊಳಪಡಿಸಲು ಸಿಆರ್‌ಪಿಸಿಯ ಸೆಕ್ಷನ್ 41ರ ಅಡಿ ಸಮನ್ಸ್ ಅನ್ನು ಏಕೆ ನೀಡಿಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮುಂಬೈ ಪೊಲೀಸರನ್ನು ಪ್ರತಿನಿಧಿಸಿದ್ದ ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಅರುಣಾ ಪೈ ಅವರು, ಸೆಕ್ಷನ್ 41ರ ಅಡಿ ಕುಂದ್ರಾರರನ್ನು ವಿಚಾರಣೆಗೊಳಪಡಿಸಲು ನೋಟಿಸ್ ನೀಡಲಾಗಿದೆ ಎಂದು ಹೇಳಿದರು. ಇದಕ್ಕೆ ಪೊಂಡಾ ಪ್ರತಿಕ್ರಿಯಿಸಿ, ನೋಟಿಸ್‌ಅನ್ನು ಕೇವಲ ಔಪಚಾರಿಕವಾಗಿ ನೀಡಲಾಗಿದೆಯೇ ಹೊರತು ಮುಂಚಿತವಾಗಿ ನೀಡಿಲ್ಲ ಎಂದರು.
ಈ ವೇಳೆ ನ್ಯಾ. ಎ ಎಸ್ ಗಡ್ಕರಿ ಅವರು ಅರುಣಾ ಪೈ ಅವರಿಗೆ ತಮ್ಮ ಹೇಳಿಕೆಯನ್ನು ಪ್ರತಿಕ್ರಿಯೆಯಲ್ಲಿ ದಾಖಲಿಸುವಂತೆ ಸೂಚಿಸಿ ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು.