ಇಂದ್ರಾಣಿ ಮುಖರ್ಜಿ ಕುರಿತ ನೆಟ್‌ಫ್ಲಿಕ್ಸ್‌ ಸರಣಿ: ತಡೆ ಕೋರಿದ್ದ ಸಿಬಿಐ ಅರ್ಜಿ ತಿರಸ್ಕರಿಸಿದ ಮುಂಬೈ ಕೋರ್ಟ್

'ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ಬರೀಡ್ ಟ್ರೂತ್' ಸರಣಿ ವಿರುದ್ಧ ಸಿಬಿಐ ನ್ಯಾಯಾಲಯದ ಮೊರೆ ಹೋಗಿತ್ತು. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಪಿ.ನಾಯಕ್-ನಿಂಬಾಳ್ಕರ್ ಈ ಆದೇಶ ನೀಡಿದರು.
ಇಂದ್ರಾಣಿ ಮುಖರ್ಜಿ ಕುರಿತ ನೆಟ್‌ಫ್ಲಿಕ್ಸ್‌ ಸರಣಿ: ತಡೆ ಕೋರಿದ್ದ ಸಿಬಿಐ ಅರ್ಜಿ ತಿರಸ್ಕರಿಸಿದ ಮುಂಬೈ ಕೋರ್ಟ್
Published on

ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೆ ತಡೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

'ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ಬರೀಡ್ ಟ್ರೂತ್' ಸರಣಿ ವಿರುದ್ಧ ಸಿಬಿಐ ನ್ಯಾಯಾಲಯದ ಮೊರೆ ಹೋಗಿತ್ತು. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್‌ ಪಿ ನಾಯಕ್-ನಿಂಬಾಳ್ಕರ್ ಈ ಆದೇಶ ನೀಡಿದರು.

ಶೀನಾ ಬೋರಾ ಕಣ್ಮರೆ ಕುರಿತ ಸಾಕ್ಷ್ಯಚಿತ್ರ ಸರಣಿಗೆ ತಡೆ ನೀಡುವಂತೆ ಕೋರಿ ಸಿಬಿಐ ಫೆಬ್ರವರಿ 17ರಂದು ಅರ್ಜಿ ಸಲ್ಲಿಸಿತ್ತು. ಇದೇ ಶುಕ್ರವಾರ ಫೆಬ್ರವರಿ 23ರಂದು ನೆಟ್‌ಫ್ಲಿಕ್ಸ್‌ನಲ್ಲಿ ಈ ವೆಬ್‌ಸರಣಿ ಪ್ರಥಮ ಪ್ರದರ್ಶನ ಕಾಣಲಿದೆ.

ಪ್ರಕರಣದ ವಿಚಾರಣೆ ಇನ್ನೂ ಮುಗಿದಿಲ್ಲವಾದರೂ ಸರಣಿಯಲ್ಲಿ ಮುಖರ್ಜಿ ಕಾಣಿಸಿಕೊಂಡಿದ್ದಾರೆ. ಅಂತಹ ಯಾವುದೇ ಸರಣಿ ಅಥವಾ ವೇದಿಕೆಗಳಲ್ಲಿ ಕಾಣಿಸಿಕೊಳ್ಳದಂತೆ ಮುಖರ್ಜಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಇತರರಿಗೆ ನಿರ್ದೇಶನ ನೀಡಬೇಕು ಎಂದು ಸಿಬಿಐ ಕೋರಿತ್ತು.

ತನ್ನ ಮಗಳು ಶೀನಾ ಬೋರಾಳನ್ನು ಮಾಜಿ ಪತಿ ಸಂಜೀವ್ ಖನ್ನಾ, ಪ್ರಸ್ತುತ ಪತಿ ಪೀಟರ್ ಮುಖರ್ಜಿಯಾ ಮತ್ತು ಚಾಲಕ ಶ್ಯಾಮ್ವರ್ ರಾಯ್ ಅವರ ಸಹಾಯದಿಂದ ಇಂದ್ರಾಣಿ ಕೊಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದ್ರಾಣಿ ಅವರನ್ನು ಬಂಧಿಸಿತ್ತು. ಮೇ 2022 ರಲ್ಲಿ, ಸುಪ್ರೀಂ ಕೋರ್ಟ್‌ ಆಕೆಗೆ ಜಾಮೀನು ನೀಡಿತ್ತು.

Kannada Bar & Bench
kannada.barandbench.com