ಕಾನೂನು ತಂಡದೊಂದಿಗೆ ಜೈಲಿನಲ್ಲಿ ವಾರಕ್ಕೆ 5 ಸಭೆ: ಕೇಜ್ರಿವಾಲ್ ಮನವಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ಕೇಜ್ರಿವಾಲ್ ಅವರು ತಮ್ಮ ವಕೀಲರೊಂದಿಗೆ ವ್ಯಾಜ್ಯ ತಂತ್ರ ಚರ್ಚಿಸುವುದಕ್ಕಾಗಿ ಈ ಸಭೆಗಳನ್ನು ಬಳಸುವ ಬದಲು ಜಲ ಸಚಿವರಿಗೆ ನಿರ್ದೇಶನಗಳನ್ನು ನೀಡಲು ಬಳಸಿದ್ದರು ಎಂದ ನ್ಯಾಯಾಲಯ.
Arvind Kejriwal and Tihar Jail
Arvind Kejriwal and Tihar Jail

ವಕೀಲರ ತಂಡದೊಂದಿಗೆ ತಾನು ವಾರಕ್ಕೆ ಎರಡು ಸಭೆ ನಡೆಸಲು ನ್ಯಾಯಾಲಯ ಈ ಹಿಂದೆ  ನೀಡಿದ್ದ ಅನುಮತಿ ಬದಲು ಐದು ಸಭೆಗಳನ್ನು ನಡೆಸಲು ಅವಕಾಶ ನೀಡಬೇಕು ಎಂದು ಕೋರಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮನವಿಯನ್ನು ದೆಹಲಿ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.

ಕೇಜ್ರಿವಾಲ್ ಅವರು ತಮ್ಮ ವಕೀಲರೊಂದಿಗೆ ವ್ಯಾಜ್ಯ ತಂತ್ರ‌ ಚರ್ಚಿಸುವುದಕ್ಕಾಗಿ ಈ ಸಭೆಗಳನ್ನು ಬಳಸುವ ಬದಲು ಜಲ ಸಚಿವರಿಗೆ ನಿರ್ದೇಶನಗಳನ್ನು ನೀಡಲು ಬಳಸಿದ್ದಾರೆ ಎಂದು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ತಿಳಿಸಿದರು.

ತಮ್ಮ ವಕೀಲರೊಂದಿಗೆ ವಾರಕ್ಕೆ ಎರಡು ಬಾರಿ ಕಾನೂನು ಭೇಟಿ ನಡೆಸಲು ನೀಡಲಾದ ಅವಕಾಶಗಳನ್ನು ತಮ್ಮ ಬಾಕಿ ವ್ಯಾಜ್ಯಗಳ ಬಗ್ಗೆ ಚರ್ಚಿಸಲು ಬಳಸುತ್ತಿಲ್ಲ ಬದಲಿಗೆ ಆ ಉದ್ದೇಶಕ್ಕೆ ಹೊರತಾದ ಬೇರೆ ಕಾರಣಗಳಿಗಾಗಿ ಅದನ್ನು ಬಳಸುತ್ತಿದ್ದಾರೆ ಎಂದು ತೋರುತ್ತದೆ ಎಂಬುದಾಗಿ ನ್ಯಾಯಾಲಯ ಮನವಿ ವಜಾಗೊಳಿಸುವಾಗ ವಿವರಿಸಿದೆ.

ಅಲ್ಲದೆ ಈ ಕುರಿತು ಇ ಡಿ ಸಲ್ಲಿಸಿದ್ದ ಸ್ಥಿತಿಗತಿ ವರದಿಯಲ್ಲಿ ಅರ್ಜಿದಾರರು ಇಂತಹ ಒಂದು ಭೇಟಿಯನ್ನು ವಕೀಲರೊಬ್ಬರ ಮುಖೇನ ಜಲಸಂಪನ್ಮೂಲ ಸಚಿವಾಲಯಕ್ಕೆ ನಿರ್ದೇಶನ ನೀಡಲು ಬಳಸಿಕೊಂಡಿದ್ದರು ಎನ್ನುವುದನ್ನು ನ್ಯಾಯಾಲಯವು ಗಮನಿಸಿತು.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಕೇಜ್ರಿವಾಲ್‌ ಅವರನ್ನು ಬಂಧಿಸಿತ್ತು. ಅವರೀಗ ತಿಹಾರ್‌ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಸುಮಾರು 30-35 ವ್ಯಾಜ್ಯಗಳಿರುವುದರಿಂದ ವಾರಕ್ಕೆ ಐದು ಕಾನೂನು ಸಭೆಗಳಿಗೆ ಅವಕಾಶ ನೀಡುವಂತೆ ಕೇಜ್ರಿವಾಲ್ ಕೋರಿದ್ದಾರೆ. ಆದರೆ ವಾರಕ್ಕೆ ಐದು ಸಭೆಗಳು ಸಾಕಾಗುತ್ತದೆಯೇ ಅಥವಾ ಜೈಲು ನಿಯಮಗಳ ಪ್ರಕಾರ ಅನುಮತಿಸಲಾದ ಎರಡು ಸಭೆಗಳು ಸಾಕಾಗುತ್ತದೆಯೇ ಎಂದು ನಿರ್ಣಯಿಸಲು ಯಾವುದೇ ವಸ್ತುನಿಷ್ಠ ಮಾನದಂಡಗಳು ಕಂಡುಬರುತ್ತಿಲ್ಲ ಎಂಬುದಾಗಿ ನ್ಯಾಯಾಲಯ ತಿಳಿಸಿತು.

"ಮೌಲ್ಯಮಾಪನಕ್ಕೆ ಅಂತಹ ಯಾವುದೇ ವಸ್ತುನಿಷ್ಠ ಮಾನದಂಡಗಳು ಇಲ್ಲದಿರುವಾಗ, ತನಗೆ ಐದು ಕಾನೂನು ಸಂದರ್ಶನಕ್ಕೆ ಅವಕಾಶ ನೀಡಬೇಕು ಎಂದು ಅರ್ಜಿದಾರ ಕೋರುವುದು ವಿಚಿತ್ರವಾಗಿ ಕಾಣುತ್ತದೆ. ಆದರೆ ಇದಕ್ಕೆ ಯಾವುದೇ ಅಂಕಿಅಂಶಗಳ ಆಧಾರ ಅಥವಾ ವಸ್ತುನಿಷ್ಠ ಮಾನದಂಡಗಳಿಲ್ಲ ಎಂದು ತೋರುತ್ತದೆ." ಎಂಬುದಾಗಿ ನ್ಯಾಯಾಲಯ ಹೇಳಿದೆ.

ಸಾರ್ವಜನಿಕ ವ್ಯಕ್ತಿಯೊಬ್ಬರು ದೇಶದ ಕಾನೂನಿಗಿಂತ ಮಿಗಿಲಲ್ಲ ಎಂದು ಅಮಾನತುಲ್ಲಾ ಖಾನ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ ಮಾಡಿದ್ದ ಅವಲೋಕನಗಳನ್ನು ನ್ಯಾ. ಬವೇಜಾ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಆದ್ದರಿಂದ, ಕೇವಲ ಎರಡು ಸಭೆಗಳಿಗೆ ಅವಕಾಶ ನೀಡುವ ಜೈಲು ನಿಯಮಗಳು ಉಳಿದ ಕೈದಿಗಳಂತೆಯೇ ಕೇಜ್ರಿವಾಲ್‌ ಅವರಿಗೂ ಅನ್ವಯಿಸುತ್ತವೆ ಎಂದು ಅವರು ತೀರ್ಪು ನೀಡಿದರು. 

Related Stories

No stories found.
Kannada Bar & Bench
kannada.barandbench.com