ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಮತ್ತು ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸೇರಿದಂತೆ ನಾಲ್ವರ ವಿರುದ್ಧ ಮುಂಬೈ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ 1,895 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಹೋಟೆಲ್ ಉದ್ಯಮಿ ಬಿಮಲ್ ಅಗರ್‌ವಾಲ್ ವಿವಿಧ ವ್ಯಕ್ತಿಗಳ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ದಾಖಲಿಸಲಾದ ಪ್ರಕರಣದಲ್ಲಿ ಎಸ್‌ಪ್ಲೇನೇಡ್‌ನಲ್ಲಿರುವ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಆರೋಪಪಟ್ಟಿ ಸಲ್ಲಿಸಲಾಯಿತು. ರಿಯಾಜ್ ಭಾಟಿ, ವಿನಯ್ ಸಿಂಗ್ ಮತ್ತು ಸುಮಿತ್ ಸಿಂಗ್ ಸೇರಿದಂತೆ ಖಾಸಗಿ ವ್ಯಕ್ತಿಗಳ ಸಹಾಯದಿಂದ ಸಿಂಗ್ ಮತ್ತು ವಾಜೆ ಅವರು ₹11.92 ಲಕ್ಷ ಮೌಲ್ಯದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡಿದ್ದಾರೆ ಎಂದು ಅಗರ್ವಾಲ್ ಆರೋಪಿಸಿದ್ದರು.
ಸಾಕ್ಷಿಗಳಲ್ಲಿ ಒಬ್ಬರಾದ ಎಸಿಪಿ ಸಂಜಯ್ ಪಾಟೀಲ್ ಅವರು ಸಿಆರ್‌ಪಿಸಿ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ದಾಖಲಿಸಿದ ಹೇಳಿಕೆಯಲ್ಲಿ ವಾಜೆ ಅವರು ಸಿಂಗ್ ಅವರನ್ನು ಸದಾ "ನಂ.1" ಎಂದು ಕರೆಯುತ್ತಿದ್ದುದಾಗಿ ತಿಳಿಸಿದ್ದರು. ಇದನ್ನೇ ವಿವಿಧ ಸಾಕ್ಷಿಗಳೂ ಪುನರುಚ್ಚರಿಸಿದ್ದರು. ಆದರೆ ಇದು ಜಾರಿ ನಿರ್ದೇಶನಾಲಯದ ಮುಂದೆ ವಾಜೆ ನೀಡಿದ್ದ ಹೇಳಿಕೆಗೆ ತದ್ವಿರುದ್ಧವಾಗಿದೆ. ತಮ್ಮ ಹೇಳಿಕೆಯಲ್ಲಿ ವಾಜೆ ಅವರು ʼನಂ 1ʼ ಎಂದರೆ ಅದು ಅನಿಲ್ ದೇಶಮುಖ್ ಎಂದಿದ್ದರು.
ʼನಂ.1ʼಗೆ ಕೊಡಲಿಕ್ಕೆ ಹಣ ಸಂಗ್ರಹಿಸುತ್ತಿರುವುದಾಗಿ ಬಾರ್ ಮಾಲೀಕರಿಗೆ ವಾಜೆ ತಿಳಿಸಿದ್ದರು. ಇದನ್ನು ಆಧರಿಸಿ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತ್ತು. ವಾಜೆ ಅವರು ಕೆಳಹಂತದ ಪೊಲೀಸ್ ಅಧಿಕಾರಿ ಆಗಿದ್ದರೂ ಅವರನ್ನು ಸಿಐಯು ಮುಖ್ಯಸ್ಥರನ್ನಾಗಿ ಮಾಡಿ ಪ್ರಮುಖ ಪ್ರಕರಣಗಳ ಜವಾಬ್ದಾರಿ ವಹಿಸಲಾಗಿತ್ತು ಎಂದು ನವೆಂಬರ್ 25 ರಂದು ಸಿಂಗ್ ನೀಡಿದ ಹೇಳಿಕೆಯನ್ನುಉಲ್ಲೇಖಿಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.