ಪರಮ್ ಬೀರ್ ಸಿಂಗ್ 'ಘೋಷಿತ ಅಪರಾಧಿ' ಎಂದು ಪ್ರಕಟಿಸಲು ಕೋರಿ ಮುಂಬೈ ನ್ಯಾಯಾಲಯದ ಮೊರೆ ಹೋದ ಪೊಲೀಸರು

ಮಲಬಾರ್ ಹಿಲ್ ಪ್ರದೇಶದಲ್ಲಿರುವ ಸಿಂಗ್ ಮನೆಗೆ ಪೊಲೀಸರು ಭೇಟಿ ನೀಡಿದಾಗ ಅಲ್ಲಿನ ಭದ್ರತಾ ಸಿಬ್ಬಂದಿ ಮತ್ತು ಅಡುಗೆಯವರು ʼಸಿಂಗ್ ಮತ್ತು ಅವರ ಕುಟುಂಬ ಸದಸ್ಯರು ಕಳೆದ ಮೂರು ತಿಂಗಳಿನಿಂದ ಅಲ್ಲಿ ವಾಸಿಸುತ್ತಿಲ್ಲ ಎಂಬುದಾಗಿ ತಿಳಿಸಿದ್ದರು.
Param Bir Singh
Param Bir Singh

ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಮತ್ತು ಉಳಿದ ಇಬ್ಬರನ್ನು "ಘೋಷಿತ ಅಪರಾಧಿಗಳು" ಎಂದು ಪ್ರಕಟಿಸಲು ಕೋರಿ ಮುಂಬೈ ಪೊಲೀಸರು ಶನಿವಾರ ನಗರದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಸಿಂಗ್‌ ಹಾಗೂ ಇತರ ಇಬ್ಬರು ಆರೋಪಿಗಳಾದ ವಿನಯ್ ಸಿಂಗ್ ಅಲಿಯಾಸ್‌ ಬಬ್ಲು, ಅಮಾನತುಗೊಂಡ ಪೋಲೀಸ್ ರಿಯಾಜ್ ಭಾಟಿ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ಹೋಟೆಲ್ ಉದ್ಯಮಿ ಬಿಮಲ್ ಅಗರ್‌ವಾಲ್‌ ನೀಡಿದ ದೂರಿನ ಆಧಾರದ ಮೇಲೆ ಈ ಮೂವರು ಹಾಗೂ ವಜಾಗೊಂಡ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ತಮ್ಮಿಂದ ₹11 ಲಕ್ಷ ಮೌಲ್ಯದ ನಗದು ಮತ್ತು ವಸ್ತುಗಳನ್ನು ಸಿಂಗ್‌ ಮತ್ತು ವಾಜೆ ಸುಲಿಗೆ ಮಾಡಿದ್ದಾರೆ ಎಂದು ಅಗರ್‌ವಾಲ್‌ ಆರೋಪಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್‌ ವಾಜೆ ಅವರನ್ನು ನ. 15ರವರೆಗೆ ಕ್ರೈಂ ಬ್ರಾಂಚ್‌ ವಶಕ್ಕೆ ಒಪ್ಪಿಸಲಾಗಿದೆ.

ಇತ್ತೀಚೆಗೆ ಮುಂಬೈ ನ್ಯಾಯಾಲಯ ಈ ಮೂವರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಿತ್ತು. ವಾರೆಂಟ್‌ ಜಾರಿಗಾಗಿ ಕ್ರೈಂ ಬ್ರಾಂಚ್‌ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿತ್ತು. ಅಧಿಕಾರಿಗಳು ಮೂವರೂ ಆರೋಪಿಗಳ ವಿಳಾಸಕ್ಕೆ ಭೇಟಿ ನೀಡಿದ್ದರೂ ಅವರ ಪತ್ತೆಯಾಗಿರಲಿಲ್ಲ. ಆರೋಪಿಗಳು ಮನೆಗಳಿಗೆ ಬಂದಿಲ್ಲ ಅವರು ಎಲ್ಲಿದ್ದಾರೋ ತಿಳಿದು ಬಂದಿಲ್ಲ ಎಂಬ ಪ್ರತಿಕ್ರಿಯೆ ಪೊಲೀಸರಿಗೆ ದೊರೆತಿತ್ತು.

Also Read
ದೊಡ್ಡಮಟ್ಟದ ಹವಾಲಾ ಹಣ ದೇಶದ ಆರ್ಥಿಕ ಹಿತಾಸಕ್ತಿಗೆ ಮಾರಕ: ಅನಿಲ್‌ ದೇಶಮುಖ್‌ ಮನವಿ ವಜಾ ಮಾಡಿದ ಬಾಂಬೆ ಹೈಕೋರ್ಟ್‌

ಮಲಬಾರ್‌ ಹಿಲ್ ಪ್ರದೇಶದಲ್ಲಿರುವ ಸಿಂಗ್‌ ಅವರ ಮನೆಗೆ ಮುಂಬೈ ಪೊಲೀಸರು ಭೇಟಿ ನೀಡಿದಾಗ ಅಲ್ಲಿನ ಭದ್ರತಾ ಸಿಬ್ಬಂದಿ ಮತ್ತು ಅಡುಗೆಯವರು ʼಸಿಂಗ್‌ ಮತ್ತು ಅವರ ಕುಟುಂಬ ಸದಸ್ಯರು ಕಳೆದ ಮೂರು ತಿಂಗಳಿನಿಂದ ಅಲ್ಲಿ ವಾಸಿಸುತ್ತಿಲ್ಲ. ಅವರು ಎಲ್ಲಿದ್ದಾರೋ ತಿಳಿದಿಲ್ಲ. ಅವರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂಬುದಾಗಿ ತಿಳಿಸಿದ್ದರು.

ಹಲವು ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಲಾಗಿದ್ದರೂ ಮೂವರೂ ಆರೋಪಿಗಳು ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 82ರ ಪ್ರಕಾರ ಮೂವರನ್ನೂ ʼತಲೆಮರೆಸಿಕೊಂಡಿದ್ದಾರೆʼ ಎಂಬುದಾಗಿ ಘೋಷಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ತಲೆಮರೆಸಿಕೊಂಡಿದ್ದಾರೆ ಎಂದು ನ್ಯಾಯಾಲಯ ಒಮ್ಮೆ ಘೋಷಿಸಿದ ಬಳಿಕ ಪ್ರಮುಖ ಸ್ಥಳಗಳಲ್ಲಿ ʼವಾಂಟೆಡ್‌ʼ ಶೀರ್ಷಿಕೆಯೊಂದಿಗೆ ಆರೋಪಿಗಳ ಭಾವಚಿತ್ರವನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತದೆ. ತಕ್ಷಣ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ.

30 ದಿನಗಳ ನಂತರವೂ, ಯಾವುದೇ ಪ್ರತಿಕ್ರಿಯೆ ಬಾರದಿದ್ದರೆ, ನಂತರ ಮುಂಬೈ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 83 ರ ಅಡಿ ಅರ್ಜಿ ಸಲ್ಲಿಸಬಹುದಾಗಿದ್ದು ಘೋಷಿತ ಅಪರಾಧಿಗಳಿಗೆ ಸೇರಿದ ಯಾವುದೇ ಚರ ಮತ್ತು/ಅಥವಾ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ಆದೇಶಿಸಬಹುದಾಗಿದೆ.

Related Stories

No stories found.
Kannada Bar & Bench
kannada.barandbench.com