ಅಕ್ರಮ ಆಸ್ತಿ: ಉದ್ಧವ್, ಕುಟುಂಬದವರ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂದು ಬಾಂಬೆ ಹೈಕೋರ್ಟ್‌ಗೆ ಪೊಲೀಸರ ಮಾಹಿತಿ

ಎರಡೂ ಕಡೆಯ ಕಕ್ಷಿದಾರರ ವಾದ ಆಲಿಸಿದ ನಂತರ ಪೀಠ ನ್ಯಾಯಮೂರ್ತಿಗಳಾದ ಧೀರಜ್ ಸಿಂಗ್ ಠಾಕೂರ್ ಮತ್ತು ವಲಿಮಿಕಿ ಎಸ್ಎ ಮೆನೇಜಸ್ ಅವರ ವಿಭಾಗೀಯ ಪೀಠ ಪ್ರಕರಣದಲ್ಲಿ ತನ್ನ ತೀರ್ಪು ಕಾಯ್ದಿರಿಸಿತು.
ಅಕ್ರಮ ಆಸ್ತಿ: ಉದ್ಧವ್, ಕುಟುಂಬದವರ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂದು ಬಾಂಬೆ ಹೈಕೋರ್ಟ್‌ಗೆ ಪೊಲೀಸರ ಮಾಹಿತಿ
A1
Published on

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಕುಟುಂಬಕ್ಕೆ ಸೇರಿದ ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ಪ್ರಾರಂಭಿಸಲಾಗಿದೆ ಎಂದು ಮುಂಬೈ ಪೊಲೀಸರು, ಬಾಂಬೆ ಹೈಕೋರ್ಟ್‌ಗೆ ಗುರುವಾರ ತಿಳಿಸಿದ್ದಾರೆ.

ಗೌರಿ ಭಿಡೆ ಎಂಬುವವರು ಮಾಡಿದ್ದ ಆರೋಪದ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೊಲೀಸರು ಈ ಹೇಳಿಕೆ ನೀಡಿದ್ದಾರೆ. ಪಿಐಎಲ್‌ನಲ್ಲಿ ಅರ್ಜಿದಾರರು ಮಾಡಿರುವ ಆರೋಪಗಳ ಬಗ್ಗೆ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯು) ಪ್ರಾಥಮಿಕ ತನಿಖೆ ಪ್ರಾರಂಭಿಸಿದೆ ಎಂದು ತಿಳಿಸಲು ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಅರುಣಾ ಪೈ ಅವರು ಪೀಠದ ಮುಂದೆ ಮನವಿಯನ್ನು ಪ್ರಸ್ತಾಪಿಸಿದರು.

ವಿಚಾರಣೆಯ ಬಗ್ಗೆ ತನಗೆ ತಿಳಿಸಿಲ್ಲ ಎಂದು ಅರ್ಜಿದಾರರು ವ್ಯಂಗ್ಯವಾಡಿದಾಗ,  ಅರುಣಾ ಅವರು ತನಿಖೆಯನ್ನು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕು ಎಂದು ಪ್ರತಿಪಾದಿಸಿದರು.

Also Read
ಶಿವಾಜಿ ಪಾರ್ಕ್‌ನಲ್ಲಿ ದಸರಾ ಮೇಳ ನಡೆಸಲು ಶಿವಸೇನೆಯ ಉದ್ಧವ್‌ ಠಾಕ್ರೆ ಬಣಕ್ಕೆ ಅನುಮತಿಸಿದ ಬಾಂಬೆ ಹೈಕೋರ್ಟ್‌

ಎರಡೂ ಕಡೆಯವರ ವಾದವನ್ನು ಸಂಕ್ಷಿಪ್ತವಾಗಿ ಆಲಿಸಿದ ನಂತರ, ನ್ಯಾಯಮೂರ್ತಿಗಳಾದ ಧೀರಜ್ ಸಿಂಗ್ ಠಾಕೂರ್ ಮತ್ತು ವಲಿಮಿಕಿ ಎಸ್‌ಎ ಮೆನೇಜಸ್ ಅವರಿದ್ದ ವಿಭಾಗೀಯ ಪೀಠ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತು.

ಮುಂಬೈ ಮತ್ತು ರಾಯಗಡ ಜಿಲ್ಲೆಗಳಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿರುವ ಉದ್ಧವ್, ಅವರ ಮಗ ಆದಿತ್ಯ ಹಾಗೂ ಪತ್ನಿ ರಶ್ಮಿ ಅವರು ಯಾವುದೇ ಸೇವೆ, ವೃತ್ತಿ ಅಥವಾ ವ್ಯವಹಾರವನ್ನು ತಮ್ಮ ಅಧಿಕೃತ ಆದಾಯದ ಮೂಲವಾಗಿ ಬಹಿರಂಗಪಡಿಸಿಲ್ಲ ಎಂದು ನ್ಯಾಯಾಲಯದಲ್ಲಿ ಖುದ್ದು ಹಾಜರಿದ್ದ ಭಿಡೆ ಆರೋಪಿಸಿದರು.

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಬೇರೆ ಮುದ್ರಣ ಮಾಧ್ಯಮಗಳು ನಷ್ಟ ಅನುಭವಿಸುತ್ತಿದ್ದಾಗ ಠಾಕ್ರೆ ಕುಟುಂಬದವರು ನಡೆಸುತ್ತಿರುವ ನಿಯತಕಾಲಿಕೆಗಳಾದ 'ಮಾರ್ಮಿಕ್' ಮತ್ತು 'ಸಾಮ್ನಾ'  ₹42 ಕೋಟಿಗಳ ಬೃಹತ್ ವಹಿವಾಟು ನಡೆಸಿದ್ದು ಮತ್ತು ₹11.5 ಕೋಟಿಯಷ್ಟು  ಲಾಭ ಗಳಿಸಿದ್ದು ಹೇಗೆ ಎಂದು ಭಿಡೆ ಅಚ್ಚರಿ ವ್ಯಕ್ತಪಡಿಸಿದರು.

ಕಂಪನಿ  ಎಂದಿಗೂ ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್‌ಗೆ (ಎಬಿಸಿ) ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ಅವರು ಹೇಳಿದ್ದಾರೆ. ಹಾಗಾಗಿ ಇದು ಕಪ್ಪುಹಣವನ್ನು ಬಿಳಿಯಾಗಿಸುವ ಸ್ಪಷ್ಟ ಪ್ರಕರಣವಾಗಿದೆ ಎಂದು ಅವರು ದೂರಿದರು.

Kannada Bar & Bench
kannada.barandbench.com