ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಮತಪತ್ರವನ್ನು ವಿರೂಪಗೊಳಿಸಿದ ಚುನಾವಣಾಧಿಕಾರಿಯನ್ನು ಕಾನೂನುರೀತ್ಯಾ ವಿಚಾರಣೆಗೆ ಒಳಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಚುನಾವಣಾಧಿಕಾರಿಯು ಮತಪತ್ರ ವಿರೂಪಗೊಳಿಸುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ ಎಂದು ನ್ಯಾಯಾಲಯ ವಿಚಾರಣೆ ವೇಳೆ ಹೇಳಿತು (ಕುಲದೀಪ್ ಕುಮಾರ್ ಮತ್ತು ಚಂಡೀಗಢ ಕೇಂದ್ರಾಡಳಿತ ಸರ್ಕಾರ ಮತ್ತಿತರರ ನಡುವಣ ಪ್ರಕರಣ)
ಚುನಾವಣಾಧಿಕಾರಿಯ ಈ ನಡವಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ 'ಇದು ಪ್ರಜಾಪ್ರಭುತ್ವದ ಅಣಕ' ಎಂದು ತರಾಟೆಗೆ ತೆಗೆದುಕೊಂಡಿತು.
"ಅಧಿಕಾರಿ ಮತಪತ್ರ ವಿರೂಪಗೊಳಿಸಿರುವುದು ಸ್ಪಷ್ಟವಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅವರು ಯಾಕೆ ಕ್ಯಾಮೆರಾ ನೋಡುತ್ತಿದ್ದಾರೆ? ಮಾನ್ಯ ಸಾಲಿಸಿಟರ್ (ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನುದ್ದೇಶಿಸಿ) ಅವರೇ ಇದು ಪ್ರಜಾಪ್ರಭುತ್ವದ ಅಣಕವಾಗಿದ್ದು ಅದರ ಕಗ್ಗೊಲೆಯಾಗಿದೆ. ನಾವು ದಿಗ್ಭ್ರಮೆಗೊಂಡಿದ್ದೇವೆ. ಇದು ರಿಟರ್ನಿಂಗ್ ಅಧಿಕಾರಿ ನಡೆದುಕೊಳ್ಳುವ ರೀತಿಯೇ? ಕೆಳಭಾಗದಲ್ಲಿ ಕ್ರಾಸ್ ಚಿಹ್ನೆ (ಮತ ಹಾಕಿರುವ ಗುರುತು) ಇರುವೆಡೆ ಅದನ್ನು ಅವರು ಮುಟ್ಟುವುದಿಲ್ಲ ಆದರೆ ಅದು ಮೇಲ್ಭಾಗದಲ್ಲಿದ್ದಾಗ ಆತ ತಿರುಚುತ್ತಾನೆ. ಸುಪ್ರೀಂ ಕೋರ್ಟ್ ಆತನನ್ನು ಗಮನಿಸುತ್ತಿದೆ ಎಂಬುದನ್ನು ದಯವಿಟ್ಟು ಆ ಚುನಾವಣಾಧಿಕಾರಿಗೆ ತಿಳಿಸಿ" ಎಂದು ನ್ಯಾಯಾಲಯ ಸಿಡಿಮಿಡಿಗೊಂಡಿತು.
ಈ ಹಿನ್ನೆಲೆಯಲ್ಲಿ ರಿಟರ್ನಿಂಗ್ ಅಧಿಕಾರಿ ಅನಿಲ್ ಮಸೀಹ್‌ಗೆ ನೋಟಿಸ್ ನೀಡಿದ ನ್ಯಾಯಾಲಯ ಪುರಸಭೆ ಚುನಾವಣೆಯ ಸಂಪೂರ್ಣ ದಾಖಲೆಗಳನ್ನು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಸಲ್ಲಿಸುವಂತೆ ತಾಕೀತು ಮಾಡಿತು. ಅಲ್ಲದೆ ತನ್ನ ನಡೆಯನ್ನು ವಿವರಿಸಲು ಮುಂದಿನ ವಿಚಾರಣೆ ದಿನದಂದು ಮಸೀಹ್ ನ್ಯಾಯಾಲಯಕ್ಕೆ ಹಾಜರಿರಬೇಕೆಂದು ಅದು ಸೂಚಿಸಿತು.
ಜೊತೆಗೆ ಪಾಲಿಕೆಯ ಎಲ್ಲಾ ಚಟುವಟಿಕೆಗಳನ್ನು ನ್ಯಾಯಾಲಯ ಸದ್ಯಕ್ಕೆ ತಡೆಹಿಡಿದಿದೆ.
"ಫೆಬ್ರವರಿ 7ರಂದು ಚಂಡೀಗಢ ಪಾಲಿಕೆ ನಡೆಸಬೇಕಿದ್ದ ಸಭೆಯನ್ನು ಮುಂದಿನ ದಿನಾಂಕದವರೆಗೆ ಮುಂದೂಡಬೇಕು. ಇಂದು ಸಂಜೆ 5 ಗಂಟೆಯೊಳಗೆ ದಾಖಲೆಗಳನ್ನು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಹಸ್ತಾಂತರಿಸಿ. ಮುಂದಿನ ಸೋಮವಾರದೊಳಗೆ ಪ್ರಕರಣವನ್ನು ಪಟ್ಟಿ ಮಾಡಿ" ಎಂದು ನ್ಯಾಯಾಲಯ ಆದೇಶಿಸಿದೆ.
ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದ ಚುನಾವಣಾ ಫಲಿತಾಂಶಕ್ಕೆ ತಕ್ಷಣ ತಡೆ ನೀಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ ಪಾಲಿಕೆ ಸದಸ್ಯ ಕುಲದೀಪ್ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ