ಪ್ರಿಯಕರನಿಗಾಗಿ ಪತಿ ಕೊಲೆ ಪ್ರಕರಣ: ಅರ್ಜಿದಾರೆ ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡಲಾಗದು ಎಂದ ಹೈಕೋರ್ಟ್‌

ಆರೋಪಿ ಮಹಿಳೆ ಡಿಲ್ಲಿ ರಾಣಿ,ಮನೆಯಲ್ಲಿ ನಿದ್ರಿಸುತ್ತಿದ್ದ ಪತಿ ಶಂಕರ ರೆಡ್ಡಿಯ ಕತ್ತನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದಳು. ಅದೇ ಚಾಕುವಿನಿಂದ ಕೈಗಳ ಮೇಲೆ ಗಾಯ ಮಾಡಿಕೊಂಡಿದ್ದಳು ಎನ್ನಲಾಗಿದೆ.
Karnataka HC and Justice Mohammad Nawaz
Karnataka HC and Justice Mohammad Nawaz
Published on

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ ಕತ್ತುಸೀಳಿ ಪತಿಯನ್ನು ಕೊಲೆಗೈದ ಮಹಿಳೆಗೆ ಜಾಮೀನು ನೀಡಲು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್, ಮಹಿಳೆ ಎಂಬ ಕಾರಣವನ್ನು ಜಾಮೀನು ಮಂಜೂರಾತಿಗೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಪತಿಯ ಕೊಲೆ ಪ್ರಕರಣದ ಆರೋಪಿ ಡಿಲ್ಲಿ ರಾಣಿ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ತಿರಸ್ಕರಿಸಿದೆ.

ಡಿಲ್ಲಿ ರಾಣಿ ಮಹಿಳೆಯಾಗಿದ್ದು, ಜಾಮೀನು ನೀಡಬೇಕು ಎಂಬ ಆಕೆಯ ಪರ ವಕೀಲರ ವಾದ ತಿರಸ್ಕರಿಸಿದ ಹೈಕೋರ್ಟ್, “ಡಿಲ್ಲಿ ರಾಣಿ ಸಹ ಘಟನೆಯಲ್ಲಿ ಗಾಯಗೊಂಡಿರುವ ಕಾರಣ ಆಕೆ ಅಮಾಯಕಳಾಗಿದ್ದಾರೆ ಎಂಬ ವಾದ ಒಪ್ಪಲಾಗದು. ಅರ್ಜಿದಾರೆ ಹಾಗೂ ಆಕೆಯ ಅಪ್ರಾಪ್ತ ಮಕ್ಕಳಿಬ್ಬರು ನೆಲೆಸಿದ್ದ ಮನೆಯಲ್ಲಿ ಪತಿ ಶಂಕರ ರೆಡ್ಡಿ ಕೊಲೆಯಾಗಿದ್ದಾರೆ. ಪ್ರಕರಣದ ಎರಡನೇ ಆರೋಪಿನೊಂದಿಗೆ (ಪ್ರಿಯಕರ) ಡಿಲ್ಲಿರಾಣಿ ಅಕ್ರಮ ಸಂಬಂಧ ಹೊಂದಿರುವುದನ್ನು ಘಟನೆಯ ಮೂವರ ಸಾಕ್ಷಿಗಳ ಹೇಳಿಕೆ ಸ್ಪಷ್ಟಪಡಿಸುತ್ತದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಪತಿ ಶಂಕರ ರೆಡ್ಡಿಯನ್ನು ಕೊಲೆ ಮಾಡಲಾಗಿದೆ. ಇದೇ ವೇಳೆ ಡಿಲ್ಲಿ ರಾಣಿ ತನ್ನ ಕೈಗಳಿಗೆ ಗಾಯ ಮಾಡಿಕೊಂಡು, ತನಗೆ ಸೇರಿದ ಮಾಂಗಲ್ಯ ಸರ ಹಾಗೂ ಕಿವಿಯೋಲೆಯನ್ನು ಬಚ್ಚಿಟ್ಟಿದಾರೆ. ಆ ಮೂಲಕ ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾರೆ” ಎಂದು ಪೀಠ ಹೇಳಿದೆ.

“ಮಾಂಗಲ್ಯ ಸರ ಮತ್ತು ಕಿವಿಯೋಲೆ, ಡಿಲ್ಲಿರಾಣಿಯ ರಕ್ತದ ಕಲೆಗಳಿದ್ದ ನೈಟಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ನಡೆದ ರಾತ್ರಿ ಶಂಕರರೆಡ್ಡಿ ಮತ್ತು ಅರ್ಜಿದಾರೆ ಮಧ್ಯೆ ಜಗಳವಾಗಿದೆ. ನಿದ್ದೆಯಿಂದ ಎಚ್ಚರಗೊಂಡು ನೋಡಿದಾಗ ತಂದೆ ರಕ್ತದ ಮಡುವಿನಲ್ಲಿ ಬಿದಿದ್ದರು ಎಂಬುದಾಗಿ ಡಿಲ್ಲಿ ರಾಣಿಯ ಅಪ್ರಾಪ್ತ ಪುತ್ರ ಸಹ ಸಾಕ್ಷ್ಯ ನುಡಿದಿದ್ದಾನೆ. ಹೀಗಾಗಿ, ಈ ಹಂತದಲ್ಲಿ ಮೇಲ್ನೋಟಕ್ಕೆ ಡಿಲ್ಲಿರಾಣಿ ವಿರುದ್ಧ ಸಾಕ್ಷ್ಯಗಳಿವೆ. ಅಪರಾಧ ಕೃತ್ಯ ಗಂಭೀರ ಸ್ವರೂಪದ್ದಾಗಿದ್ದು, ಆರೋಪಿ ಮಹಿಳೆ ಎಂಬ ಮಾತ್ರಕ್ಕೆ ಜಾಮೀನು ನೀಡಲಾಗದು” ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಡಿಲ್ಲಿ ರಾಣಿ ಮತ್ತು ಆರ್ ಶಂಕರರೆಡ್ಡಿ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದರು. ಬೇರೊಬ್ಬ ವ್ಯಕ್ತಿಯೊಂದಿಗೆ ಡಿಲ್ಲಿರಾಣಿ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದರು. ಶಂಕರ ರೆಡ್ಡಿ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು. ಡಿಲ್ಲಿರಾಣಿ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಆಂಧ್ರಪ್ರದೇಶದಲ್ಲಿ ವಾಸವಾಗಿದ್ದರು. ಮಕ್ಕಳಿಗೆ ಶಿಕ್ಷಣ ಕೊಡಿಸಲು ಬೆಂಗಳೂರಿಗೆ ಕುಟುಂಬವನ್ನು ಶಂಕರರೆಡ್ಡಿ ಸ್ಥಳಾಂತರಿಸಿದ್ದರು.

ಅಕ್ರಮ ಸಂಬಂಧ ಮುಂದುವರಿಸಲು ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕೆ ಡಿಲ್ಲಿ ರಾಣಿ ಮತ್ತು ಪ್ರಿಯಕರ ಸೇರಿ ಶಂಕರ ರೆಡ್ಡಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. 2022ರ ಫೆಬ್ರವರಿ 24ರಂದು ಮಕ್ಕಳೊಂದಿಗೆ ಡಿಲ್ಲಿ ರಾಣಿ ಬೆಂಗಳೂರಿಗೆ ಬಂದು, ಪತಿಯೊಂದಿಗೆ ಯಶವಂತಪುರದ ಮೋಹನ ಕುಮಾರ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಸಂಚಿನ ಪ್ರಕಾರ ಡಿಲ್ಲಿ ರಾಣಿ, ಫೆಬ್ರವರಿ 24ರಂದು ರಾತ್ರಿ 11.30 ಗಂಟೆ ಸಮಯದಲ್ಲಿ ಮನೆಯಲ್ಲಿ ನಿದ್ರಿಸುತ್ತಿದ್ದ ಶಂಕರರೆಡ್ಡಿಯ ಕತ್ತನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದಳು. ಅದೇ ಚಾಕುವಿನಿಂದ ಕೈಗಳ ಮೇಲೆ ಗಾಯ ಮಾಡಿಕೊಂಡಿದ್ದಳು. ಜತೆಗೆ, ಮಾಂಗಲ್ಯ ಸರ, ಕಿವಿಯೋಲೆಯನ್ನು ಬಚ್ಚಿಟ್ಟಿದ್ದಳು. ಆ ಮೂಲಕ ದರೋಡೆ ಮತ್ತು ಕೊಲೆ ಎಂಬುದಾಗಿ ಬಿಂಬಿಸಲು ಪ್ರಯತ್ನಿಸಿದ್ದಳು.

ಮೊದಲಿಗೆ ಅಪರಿಚಿತರ ಮೇಲೆ ಪ್ರಕರಣ ದಾಖಲಿಸಿದ್ದ ಯಶವಂತಪುರ ಠಾಣೆಯ ಪೊಲೀಸರು, ತನಿಖೆ ವೇಳೆ ಡಿಲ್ಲಿ ರಾಣಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಡಿಲ್ಲಿ ರಾಣಿ ತಪ್ಪೊಪ್ಪಿಕೊಂಡಿದ್ದಳು. ಪ್ರಕರಣದಲ್ಲಿ 2022ರ ಸೆಪ್ಟೆಂಬರ್‌ 24ರಿಂದ ನ್ಯಾಯಾಂಗ ಬಂಧನದಲ್ಲಿರುವ ಡಿಲ್ಲಿ ರಾಣಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಬೆಂಗಳೂರಿನ 63ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ಆಕೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com