ಮುಸ್ಲಿಮ್ ಸಮುದಾಯಕ್ಕೆ ಹಿಂದುಳಿದ ವರ್ಗದ ಅಡಿ ಕಲ್ಪಿಸಿದ್ದ ಶೇ. 4 ರಷ್ಟು ಮೀಸಲಾತಿಯನ್ನು ಹಿಂಪಡೆದಿರುವ ಕರ್ನಾಟಕ ಸರ್ಕಾರದ ಆದೇಶವನ್ನು ಆದೇಶವನ್ನು ಮೇ 9ರವರೆಗೆ ಜಾರಿಗೊಳಿಸದಂತೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
ಪ್ರಕರಣವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮುಂದೂಡುವಂತೆ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಗಿದೆ. ಅಲ್ಲಿಯವರೆಗೆ ಹಿಂದಿನ ಆದೇಶ ಮುಂದುವರೆಯಲಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದುಷ್ಯಂತ್ ದವೆ ಅವರು ವಿಚಾರಣೆ ಮುಂದೂಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು. “ನಾನಿದನ್ನು ಬಲವಾಗಿ ವಿರೋಧಿಸುತ್ತೇನೆ. ಅವರು ಮತ್ತೆ ಪ್ರಕರಣ ಮುಂದೂಡುವಂತೆ ಕೋರಿದ್ದು ಇದು ನಮ್ಮ ಮೇಲೆ ಪರಿಣಾಮ ಬೀರಲಿದೆ” ಎಂದರು.
ಮುಂದಿನ ವಿಚಾರಣೆಯವರೆಗೆ ಈ ಹಿಂದಿನ ಆದೇಶ ಮುಂದುವರೆಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಯಾವುದೇ ನೇಮಕಾತಿ ಮಾಡುವುದಿಲ್ಲ. ಯಾವುದೇ ಆರೋಪಗಳಿಗೆ ಸಂಬಂಧಿಸಿದಂತೆ ಪೂರ್ವಾಗ್ರಹ ಇರುವುದಿಲ್ಲ ಎಂಬ ಎಸ್ ಜಿ ಮೆಹ್ತಾ ಅವರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 13ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮುಸ್ಲಿಮ್ ಸಮುದಾಯಕ್ಕೆ ಹಿಂದುಳಿದ ವರ್ಗದ ಅಡಿ ಕಲ್ಪಿಸಿದ್ದ ಶೇ. 4ರಷ್ಟು ಮೀಸಲಾತಿಯನ್ನು ಹಿಂಪಡೆದಿರುವ ಹಿಂದಿನ ಸಕಾರಣದ ಕುರಿತು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತ್ತು.
ಅಂತಿಮ ವರದಿಯವರೆಗೂ ಕಾಯದೇ ಮಧ್ಯಂತರ ವರದಿ ಆಧರಿಸಿ ರಾಜ್ಯ ಸರ್ಕಾರವು ನಿರ್ಧಾರ ಕೈಗೊಂಡಿದೆ ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠ ಮೌಖಿಕವಾಗಿ ಹೇಳಿತು.
“ಸರ್ಕಾರದ ಈ ಆದೇಶ ಸಂಪೂರ್ಣವಾಗಿ ತಪ್ಪಾದ ಊಹೆಗಳನ್ನು ಆಧರಿಸಿದೆ… ನಿರ್ಧಾರದ ಹಿಂದಿನ ಅಡಿಪಾಯವೇ ಅಭದ್ರವಾಗಿದೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ” ಎಂದು ನ್ಯಾ. ಜೋಸೆಫ್ ಹೇಳಿದ್ದರು. ಅಲ್ಲದೇ, ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿತ್ತು.