ಪತಿಯ ಒಪ್ಪಿಗೆಯಿಲ್ಲದೆ ಖುಲಾ ಮೂಲಕ ವಿಚ್ಛೇದನ ಪಡೆಯುವ ಸಂಪೂರ್ಣ ಹಕ್ಕು ಮುಸ್ಲಿಂ ಪತ್ನಿಗೆ ಇದೆ: ತೆಲಂಗಾಣ ಹೈಕೋರ್ಟ್

ಮುಸ್ಲಿಮರಲ್ಲಿ ವಿವಾಹ ವಿಚ್ಛೇದನದ ಒಂದು ವಿಧವಾದ ʼಖುಲಾʼ ಪ್ರಕ್ರಿಯೆಗೆ ವೈವಾಹಿಕ ಸಂಬಂಧ ಮುಂದುವರಿಸಲು ಬಯಸದ ಪತ್ನಿಯು ಚಾಲನೆ ನೀಡಬಹುದು.
Muslim Women
Muslim WomenImage for representative purposes
Published on

ಮುಸ್ಲಿಂ ಪತ್ನಿಗೆ ಖುಲಾ ಮೂಲಕ ತನ್ನ ಮದುವೆ ರದ್ದುಗೊಳಿಸುವ ಸಂಪೂರ್ಣ ಹಕ್ಕು ಇದ್ದು ಪತಿಯ ಒಪ್ಪಿಗೆ ಖುಲಾದ ಸಿಂಧುತ್ವಕ್ಕೆ ಪೂರ್ವಾಪೇಕ್ಷಿತವಲ್ಲ ಎಂದು ತೆಲಂಗಾಣ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ [ಮೊಹಮ್ಮದ್ ಆರಿಫ್ ಅಲಿ ಮತ್ತು ಶ್ರೀಮತಿ ಅಫ್ಸರುನ್ನಿಸಾ ಇನ್ನಿತರರ ನಡುವಣ ಪ್ರಕರಣ] .

ಮುಸ್ಲಿಮರಲ್ಲಿ ವಿವಾಹ ವಿಚ್ಛೇದನದ ಒಂದು ವಿಧವಾದ ಖುಲಾ ಪ್ರಕ್ರಿಯೆಗೆ ವೈವಾಹಿಕ ಸಂಬಂಧ ಮುಂದುವರಿಸಲು ಬಯಸದ ಹೆಂಡತಿ ಚಾಲನೆ ನೀಡಬಹುದು.

Also Read
ವಿಚ್ಛೇದನ ಬಯಸಿದ ಮುಸ್ಲಿಂ ಮಹಿಳೆ ಖುಲಾ ಜಾರಿಯಾದ ದಿನದಿಂದ ಜೀವನಾಂಶ ಪಡೆಯಲಾಗದು: ಕೇರಳ ಹೈಕೋರ್ಟ್

ಈ ಬಗೆಯ ವಿವಾಹ ವಿಚ್ಛೇದನಕ್ಕೆ ಅಂತಿಮ ಮುದ್ರೆಯಾಗಿ ಮುಫ್ತಿ ಅಥವಾ ದಾರ್-ಉಲ್-ಖಾಜಾ ಅವರಿಂದ ಖುಲಾನಾಮ ಪಡೆದಿರಬೇಕಾದ ಅಗತ್ಯವಿಲ್ಲ. ಏಕೆಂದರೆ, ಮುಫ್ತಿಯವರ ಅಭಿಪ್ರಾಯವು ಕೇವಲ ಸಲಹೆಯ ಸ್ವರೂಪದ್ದಾಗಿರುತ್ತದೆ ಎಂದು ನ್ಯಾಯಮೂರ್ತಿಗಳಾದ ಮೌಶುಮಿ ಭಟ್ಟಾಚಾರ್ಯ ಮತ್ತು ಬಿ ಆರ್ ಮಧುಸೂಧನ್ ರಾವ್ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

ಮುಸ್ಲಿಂ ಪತ್ನಿಗೆ ಖುಲಾ ಕೇಳುವ ಹಕ್ಕು  ಆತ್ಯಂತಿಕವಾದುದಾಗಿದ್ದು, ಅದು ಗಂಡನ ಬೇಡಿಕೆಯ ಕಾರಣ ಅಥವಾ ಸ್ವೀಕಾರವನ್ನು ಅವಲಂಬಿಸಬೇಕಾಗಿಲ್ಲವಾದ್ದರಿಂದ, ನ್ಯಾಯಾಲಯಗಳ ಪಾತ್ರ ಎಂಬುದು ವಿವಾಹ ಮುಕ್ತಾಯವಾಗಿದೆ ಎಂದು ನ್ಯಾಯಾಂಗ ಮುದ್ರೆ ಹಾಕುವುದಕ್ಕಷ್ಟೇ ಸೀಮಿತವಾಗಿದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಪತ್ನಿಯಿಂದ ವಿಚ್ಛೇದನ ಪಡೆದ ಮುಸ್ಲಿಂ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ವೈವಾಹಿಕ ವ್ಯಾಜ್ಯ ಪರಿಹಾರಕ್ಕಾಗಿ ಇರುವ ಸದಾ-ಇ-ಹಕ್ ಶರೈ ಮಂಡಳಿ ಎಂಬ ಸರ್ಕಾರೇತರ ಸಂಸ್ಥೆ  ನೀಡಿದ ವಿಚ್ಛೇದನ ಪ್ರಮಾಣಪತ್ರದ ವಿರುದ್ಧ ಸಲ್ಲಿಸಲಾಗಿದ್ದ ತನ್ನ ಅರ್ಜಿ ತಿರಸ್ಕರಿಸಿದ ಕುಟುಂಬ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಖುಲಾಗೆ ಒಪ್ಪಿಕೊಳ್ಳಲು ನಿರಾಕರಿಸಿದ ನಂತರ ಅವರ ಪತ್ನಿ ಮಂಡಳಿಯನ್ನು ಸಂಪರ್ಕಿಸಿದ್ದರು.

Also Read
ಸಮ್ಮತಿಯಿಲ್ಲದೆ ಫೋನ್ ಸಂಭಾಷಣೆ ರೆಕಾರ್ಡ್ ಮಾಡುವುದು ಖಾಸಗಿತನದ ಹಕ್ಕಿನ ಉಲ್ಲಂಘನೆ: ಛತ್ತೀಸ್‌ಗಢ ಹೈಕೋರ್ಟ್

ಈ ಸಂಬಂಧ ಕುರಾನ್‌ ಗ್ರಂಥದ ಉದ್ಧರಣೆಗಳನ್ನು ಓದಿದ ನ್ಯಾಯಾಲಯ "ಕುರಾನ್ ಅಧ್ಯಾಯ II ರ 228 ಮತ್ತು 229 ನೇ ಶ್ಲೋಕದಲ್ಲಿ ಪತ್ನಿಗೆ ತನ್ನ ಪತಿಯೊಂದಿಗೆ ವಿವಾಹ ರದ್ದುಗೊಳಿಸುವ ಸಂಪೂರ್ಣ ಹಕ್ಕನ್ನು ನೀಡಲಾಗಿದೆ. ಖುಲಾ ಸಿಂಧುತ್ವಕ್ಕೆ ಗಂಡನ ಒಪ್ಪಿಗೆ ಪಡೆಯುವುದು ಪೂರ್ವಭಾವಿ ಷರತ್ತು ಅಲ್ಲ" ಎಂದು ನುಡಿಯಿತು.

ಅಲ್ಲದೆ ಪತ್ನಿಯ ಖುಲಾ ಬೇಡಿಕೆಯನ್ನು ಪತಿ ತಿರಸ್ಕರಿಸುವುದಕ್ಕೆ ಸಂಬಂಧಿಸಿದಂತೆ ಕುರಾನ್ ಅಥವಾ ಸುನ್ನತ್ ಇಲ್ಲವೇ ಪ್ರವಾದಿಯವರ ಮಾತುಗಳಲ್ಲಿ ವಿವರಣೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.

ದೇಶದ ವಿವಿಧ ನ್ಯಾಯಾಲಯಗಳು ಈ ಹಿಂದೆ ನೀಡಿದ ತೀರ್ಪುಗಳನ್ನು ಪರಿಶೀಲಿಸಿದ ನ್ಯಾಯಾಲಯ  ಖುಲಾನಾಮ ಅಥವಾ ವಿಚ್ಛೇದನ ಪ್ರಮಾಣಪತ್ರದ ವಿರುದ್ಧ ಪತಿ ಸಲ್ಲಿಸಿರುವ ಅರ್ಜಿ ಅನಗತ್ಯ ಎಂದು ಹೇಳಿತು.

Kannada Bar & Bench
kannada.barandbench.com