ತಲಾಖ್- ಉಲ್- ಸುನ್ನತ್ ಪದ್ಧತಿಯನ್ನು ಅಸಾಂವಿಧಾನಿಕ ಎಂದು ಘೋಷಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪ್ರಶ್ನಿಸಿ ಮುಸ್ಲಿಂ ಮಹಿಳೆಯೊಬ್ಬರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಮುಸ್ಲಿಂ ಪತಿ ತನ್ನ ಪತ್ನಿಗೆ ಪೂರ್ವ ಸೂಚನೆ ಇಲ್ಲದೆ ವಿಚ್ಛೇದನ ನೀಡಲು ಸಂಪೂರ್ಣ ಅಧಿಕಾರ ನೀಡುವ ತಲಾಖ್-ಉಲ್-ಸುನ್ನತ್ ಅಸಾಂವಿಧಾನಿಕ, ಷರಿಯತ್ ವಿರೋಧಿ ಎಂದು ಘೋಷಿಸುವಂತೆ ರೇಷ್ಮಾ ಎಂಬ ಮಹಿಳೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇವರ ಅರ್ಜಿಯನ್ನು 35 ವರ್ಷದ ಖುರ್ರತ್ ಉಲ್ ಐನ್ ಲತೀಫ್ ಎಂಬ ಮಹಿಳೆ ವಿರೋಧಿಸಿದ್ದು ಮಧ್ಯಪ್ರವೇಶ ಅರ್ಜಿ ಸಲ್ಲಿಸಿದ್ದಾರೆ. ತಲಾಖ್- ಉಲ್- ಸುನ್ನತ್ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದ್ದು ಸಂವಿಧಾನದ 25 (1) ನೇ ವಿಧಿಯ ಅಡಿಯಲ್ಲಿ ರಕ್ಷಣೆಗೆ ಅರ್ಹವಾಗಿದೆ ಎಂದು ಮಹಿಳೆ ವಾದಿಸಿದ್ದಾರೆ.
ಈ ಸಂಬಂಧ ಪ್ರತಿವಾದಿಗಳಿಗೆ ನೋಟಿಸ್ ನೀಡಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರ ವಿಭಾಗೀಯ ಪೀಠ ಪ್ರಕರಣವನ್ನು ಆಗಸ್ಟ್ 23ಕ್ಕೆ ಪಟ್ಟಿ ಮಾಡಿದೆ.
ಪ್ರಸ್ತುತ ಹೈಕೋರ್ಟ್ ಮುಂದಿರುವ ದಾವೆಯು ಮರುಪರಿಶೀಲನಾ ಅರ್ಜಿಯಾಗಿದೆ. ಈ ಮೊದಲು ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ತಲಾಖ್ ಉಲ್ ಸುನ್ನತ್‌ಅನ್ನು ಅಸಾಂವಿಧಾನಿಕ ಎಂದು ಘೋಷಿಸಲು ಕೋರಲಾಗಿತ್ತು. ಆದರೆ, ಪೀಠವು ಮುಸ್ಲಿಂ ಮಹಿಳಾ (ವಿವಾಹ ಮತ್ತು ಹಕ್ಕುಗಳ ರಕ್ಷಣೆ) ಕಾಯಿದೆ, 2019 (ತ್ರಿವಳಿ ತಲಾಖ್ ರದ್ಧತಿ) ಜಾರಿಯ ನಂತರ ಅರ್ಜಿದಾರರು ಎತ್ತಿರುವ ಪ್ರಶ್ನೆಯು ಉದ್ಭವಿಸದು. ಅರ್ಜಿಯು ತಪ್ಪು ಕಲ್ಪನೆಯಿಂದ ಕೂಡಿದ್ದ ಅರ್ಹವಾಗಿಲ್ಲ ಎಂದು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿಯು ಸಲ್ಲಿಕೆಯಾಗಿತ್ತು.
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮುಸ್ಲಿಂ ಮಹಿಳಾ (ವಿವಾಹ ಮತ್ತು ಹಕ್ಕುಗಳ ರಕ್ಷಣೆ) ಕಾಯಿದೆ, 2019 (ತ್ರಿವಳಿ ತಲಾಖ್ ರದ್ಧತಿ) ತಲಾಖ್ ಉಲ್ ಬಿದ್ದತ್‌ಗೆ ಅನ್ವಯಿಸುತ್ತದೆಯೇ ಹೊರತು ತಲಾಖ್ ಉಲ್ ಸುನ್ನತ್‌ಗೆ ಅನ್ವಯಿಸುವುದಿಲ್ಲ ಎನ್ನುವುದು ಅರ್ಜಿದಾರರ ವಾದವಾಗಿದೆ.