ದಲಿತ ಪ್ರಾತಿನಿಧ್ಯದ ಕಾರಣಕ್ಕೆ ನನಗೆ ಪದೋನ್ನತಿ ದೊರೆತಿದೆ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಹೆಮ್ಮೆ

ಭಾರತೀಯ ಸಂವಿಧಾನ ಹಾಗೂ ಸಮಾಜದಂಚಿನಲ್ಲಿರುವವರಿಗೆ ಸೌಲಭ್ಯ ಒದಗಿಸಬೇಕು ಹಾಗೂ ಎಲ್ಲರನ್ನೂ ಒಳಗೊಳ್ಳಬೇಕೆಂಬ ಅದರ ನಿಲುವಿನಿಂದಾಗಿ ತಾನು ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.
ನ್ಯಾಯಮೂರ್ತಿ ಬಿ.ಆರ್.ಗವಾಯಿ
ನ್ಯಾಯಮೂರ್ತಿ ಬಿ.ಆರ್.ಗವಾಯಿ

ಮೀಸಲಾತಿ ಇಲ್ಲವೇ ಸಮಾಜದಂಚಿನಲ್ಲಿರುವವರಿಗೆ ಸೌಲಭ್ಯ ಒದಗಿಸುವ ಕ್ರಮದಿಂದಾಗಿ ಶೋಷಿತ ಸಮುದಾಯಗಳ ವ್ಯಕ್ತಿಗಳು ದೇಶದ ಉನ್ನತ ಸರ್ಕಾರಿ ಹುದ್ದೆ ಅಲಂಕರಿಸಲು ಸಾಧ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ಆರ್‌ ಗವಾಯಿ ತಿಳಿಸಿದರು.

ಅಮೆರಿಕದ ನ್ಯೂಯಾರ್ಕ್ ಸಿಟಿ ವಕೀಲರ ಸಂಘ (ಎನ್‌ವೈಸಿಬಿ) ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈವಿಧ್ಯತೆ, ಸಮಾನತೆ ಹಾಗೂ ಒಳಗೊಳ್ಳುವಿಕೆಯ ಪ್ರಭಾವದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಾ ಈ ವಿಚಾರ ತಿಳಿಸಿದರು. ಎನ್‌ವೈಸಿಬಿ ಕಾನೂನು ವಿದ್ಯಾರ್ಥಿಗಳು ಮತ್ತು ವಕೀಲರ ಸ್ವಯಂಸೇವಾ ಸಂಸ್ಥೆಯಾಗಿದೆ.

ತಮ್ಮದೇ ಉದಾಹರಣೆಯನ್ನು ಎತ್ತಿ ತೋರಿಸಿದ ಅವರು ದಲಿತ ಸಮುದಾಯದ ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ನಲ್ಲಿ ಇರಬೇಕೆಂದು ಕೊಲಿಜಿಯಂ ಬಯಸಿದ್ದರಿಂದ ಎರಡು ವರ್ಷ ಮೊದಲೇ ತಾನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

"ಪರಿಶಿಷ್ಟ ಜಾತಿಗಳಿಗೆ ಪ್ರಾತಿನಿಧ್ಯ ಇರದೆ ಇದ್ದಿದ್ದರೆ, ಬಹುಶಃ ಎರಡು ವರ್ಷಗಳ ನಂತರ ನನಗೆ ಪದೋನ್ನತಿ ದೊರೆಯುತ್ತಿತ್ತು" ಎಂದು ಅವರು ಹೇಳಿದರು. ತಾವು ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆಯಲು ಕೂಡ ಈ ಅಂಶ ಕಾರಣ. ಆಗ ಹೈಕೋರ್ಟ್‌ನಲ್ಲಿ ದಲಿತ ಸಮುದಾಯವನ್ನು ಪ್ರತಿನಿಧಿಸುವ ನ್ಯಾಯಮೂರ್ತಿಗಳು ಇರಲಿಲ್ಲ ಎಂದು ಈ ಹಿಂದೆ ಹೆಸರಾಂತ ವಕೀಲರೂ ಆಗಿದ್ದ ನ್ಯಾ. ಗವಾಯಿ ತಿಳಿಸಿದರು.

ಭಾರತೀಯ ಸಂವಿಧಾನ ಹಾಗೂ ಸಮಾಜದಂಚಿನಲ್ಲಿರುವವರಿಗೆ ಸೌಲಭ್ಯ ಒದಗಿಸಬೇಕು ಹಾಗೂ ಎಲ್ಲರನ್ನೂ ಒಳಗೊಳ್ಳಬೇಕೆಂಬ ಅದರ ನಿಲುವಿನಿಂದಾಗಿ ತಾನು ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಕೊಳೆಗೇರಿಯಲ್ಲಿ ಬೆಳೆದ ತಾವು ಪುರಸಭೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ದಿನಗಳನ್ನು ನ್ಯಾಯಮೂರ್ತಿಗಳು ಕಾರ್ಯಕ್ರಮದಲ್ಲಿ ನೆನೆದರು.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರ ಕರ್ತವ್ಯಗಳ ಬಗ್ಗೆ ಸಭಿಕರು ಪ್ರಶ್ನಿಸಿದಾಗ, ನ್ಯಾಯಮೂರ್ತಿ ಗವಾಯಿ ಅವರು ಸಿಜೆಐ ಭಾರತದಲ್ಲಿ 'ಇಡೀ ನ್ಯಾಯಾಂಗಕ್ಕೆ ಸಮಾನ ನಾಯಕತ್ವವನ್ನು' ಒದಗಿಸುತ್ತಾರೆ ಮತ್ತು ಅದರ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ತೀರ್ಪಿನ ನ್ಯಾಯಯುತವಾದ ಟೀಕೆಗಳು ಒಳ್ಳೆಯದಾದರೂ ಸುಳ್ಳು ದೃಶ್ಯಾವಳಿಗಳ ಮೂಲಕ ನ್ಯಾಯಾಧೀಶರನ್ನು ಅನಗತ್ಯವಾಗಿ ಟೀಕಿಸುವುದು ಕಳವಳಕಾರಿ ವಿಷಯವಾಗಿದೆ ಎಂದು ಇತ್ತೀಚೆಗೆ ಸಿಜೆಐ ಅವರನ್ನು ಟ್ರೋಲ್‌ ಮಾಡಿದ ಸಂಗತಿಗಳನ್ನು ಉದಾಹರಿಸುತ್ತಾ ತಿಳಿಸಿದರು.

Related Stories

No stories found.
Kannada Bar & Bench
kannada.barandbench.com