ಪತ್ನಿಯ ಮೇಲೆ ಹಲ್ಲೆ, ಬಲಾತ್ಕಾರ ನಡೆಸಿ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಬಂಧಿತನಾಗಿರುವ ಹಾಗೂ ಹಲವು ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ ಸಾಧಿಸಿ, ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಹಲವು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪಕ್ಕೆ ಗುರಿಯಾಗಿರುವ ಕೆ ಎಸ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿಗೆ ಮೈಸೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶನಿವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಗುಜರಾತ್‌ನ ಸ್ಥಳೀಯ ಪೊಲೀಸರ ನೆರವಿನಿಂದ ಶುಕ್ರವಾರ ಬಂಧಿಸಲ್ಪಟ್ಟಿದ್ದ ರವಿಯನ್ನು ಮೈಸೂರಿಗೆ ಕರೆ ತಂದಿದ್ದ ಪೊಲೀಸರು ಆರೋಪಿ ಸ್ಯಾಂಟ್ರೊ ರವಿಯನ್ನು ಶನಿವಾರ ಮೈಸೂರಿನ ವಾಣಿ ವಿಲಾಸ ಮೊಹಲ್ಲಾದಲ್ಲಿರುವ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಲವರ್ ಅವರ ನಿವಾಸದಲ್ಲಿ ಹಾಜರುಪಡಿಸಿದರು.
ಆರೋಪಿಯ ಕುರಿತು ಮಾಹಿತಿ ಪಡೆದ ನ್ಯಾಯಾಧೀಶರು ಸ್ಯಾಂಟ್ರೊ ರವಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಸ್ಯಾಂಟ್ರೊ ರವಿಯ ಎರಡನೇ ಪತ್ನಿ ಎನ್ನಲಾದ ಡಿ ಆರ್ ರಶ್ಮಿ ಅವರು ನೀಡಿದ ದೂರಿನ ಆಧಾರದಲ್ಲಿ ಆತನ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಜನವರಿ 2ರಂದು ಪ್ರಕರಣ ದಾಖಲಾಗಿತ್ತು. ರವಿ ವಿರುದ್ಧ ವರದಕ್ಷಿಣೆ ನಿಷೇಧ ಕಾಯಿದೆ ಸೆಕ್ಷನ್ 3, ಪರಿಶಿಷ್ಟ ಜಾತಿ ಮತ್ತು ಪಂಗಡಗಳು (ದೌರ್ಜನ್ಯ ನಿಯಂತ್ರಣ) ತಿದ್ದುಪಡಿ ಸುಗ್ರೀವಾಜ್ಞೆ -2014ರ ಸೆಕ್ಷನ್‌ಗಳಾದ 3(1)(ಆರ್), 3(1)(ಎಸ್), 3(1)(ಡಬ್ಲ್ಯು) (ಐ), 3(2)(5ಎ) ಹಾಗೂ ಐಪಿಸಿ ಸೆಕ್ಷನ್‌ಗಳಾದ 506, 498ಎ, 504, 376, 270, 313, 323 ಅಡಿ ಪ್ರಕರಣ ಎಫ್‌ಐಆರ್ ದಾಖಲಿಸಲಾಗಿತ್ತು.
ಪ್ರಕರಣದ ಹಿನ್ನೆಲೆ: ಕೆಲಸ ಕೊಡಿಸುವ ನೆಪದಲ್ಲಿ ಸಂಪರ್ಕ ಸಾಧಿಸಿ, ಅತ್ಯಾಚಾರ ಎಸಗಿ, ಆನಂತರ ಮದುವೆಯಾಗಿರುವ ವಿಚಾರ ಮುಚ್ಚಿಟ್ಟು, ಬ್ಲ್ಯಾಕ್‌ಮೇಲ್ ಮಾಡಿ ತನ್ನ ಜೊತೆ ಎರಡನೇ ವಿವಾಹ ಮಾಡಿಕೊಂಡಿದ್ದಾನೆ ಎಂದು ಮೈಸೂರಿನ ವಿಜಯನಗರದ ನಿವಾಸಿಯಾದ ರಶ್ಮಿ ಅವರು ಜನವರಿ 2ರಂದು ದೂರು ನೀಡಿದ್ದರು.
ವರದಕ್ಷಿಣೆ ಕಿರುಕುಳ ನೀಡುವುದಲ್ಲದೇ ಪರಿಶಿಷ್ಟ ಸಮುದಾಯಕ್ಕೆ ಸೇರಿದ ನನ್ನ ಜಾತಿ ನಿಂದನೆಯನ್ನೂ ರವಿ ಮಾಡಿದ್ದ. ಅಲ್ಲದೆ, ಗರ್ಭಪಾತವನ್ನು ಮಾಡಿಸಿದ್ದು, ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಲು ಆಗ್ರಹಿಸುತ್ತಿದ್ದ. ತನಗೆ ಮಾರಕ ಕಾಯಿಲೆ ಇರುವುದನ್ನು ಮುಚ್ಚಿಟ್ಟು, ತನ್ನೊಂದಿಗೆ ಬಲಾತ್ಕಾರದಿಂದ ಸಂಬಂಧ ಹೊಂದುವ ಮೂಲಕ ತನಗೂ ರೋಗ ತಗುಲುವಂತೆ ಮಾಡಿದ್ದಾನೆ. ಬೆಂಗಳೂರಿನ ಕಾಟನ್ ಪೇಟೆ ಠಾಣೆಯಲ್ಲಿ ತನ್ನ ಮತ್ತು ತಂಗಿಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ನಮ್ಮನ್ನು ಜೈಲಿಗೂ ಕಳುಹಿಸಿದ್ದ ಎಂದು ಅವರು ಆರೋಪಿಸಿದ್ದರು.