
ಮುಸ್ಲಿಂ ಸಮುದಾಯದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹರಿಯಬಿಟ್ಟು ಧಾರ್ಮಿಕ ಭಾವನೆ ಕೆರಳಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಪಾಂಡುರಂಗ ಅಲಿಯಾಸ್ ಸತೀಶ್ ಗಡಿಪಾರಿಗೆ ಪೊಲೀಸರು ನೀಡಿದ್ದ ನೋಟಿಸನ್ನು ಮೈಸೂರು ಜಿಲ್ಲಾ ನ್ಯಾಯಾಲಯವು ಶನಿವಾರ ವಜಾಗೊಳಿಸಿದೆ.
ವಿವಾದಾತ್ಮಕ ಪೋಸ್ಟ್ ಮೂಲಕ ಗಲಭೆಗೆ ಕಾರಣರಾದ ಆರೋಪಿ ಸತೀಶ್ ತನಗೆ ಪೊಲೀಸರು ನೀಡಿದ್ದ ಗಡಿಪಾರು ನೋಟಿಸ್ ಪ್ರಶ್ನಿಸಿದ್ದ ಗಡಿಪಾರು ಪ್ರಶ್ನಿಸಿದ್ದ ಅರ್ಜಿಯನ್ನು ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಉಷಾ ರಾಣಿ ಪುರಸ್ಕರಿಸಿದ್ದಾರೆ.
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಗಡಿಪಾರು ಮಾಡುವ ಸಂಬಂಧ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಈ ನೋಟಿಸ್ ಪ್ರಶ್ನಿಸಿ ಸತೀಶ್ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು.
ತಡೆಯಾಜ್ಞೆ ತೆರವುಗೊಳಿಸುವಂತೆ ಪೊಲೀಸರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಪರಿಷ್ಕರಣಾ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು, ಗಡಿಪಾರು ನೋಟಿಸ್ ನೀಡುವಾಗ ಪೊಲೀಸರ ಕಾರ್ಯವಿಧಾನ ಲೋಪದಿಂದ ಕೂಡಿದೆ ಎಂಬ ಅಂಶವನ್ನು ಉಲ್ಲೇಖಿಸಿ ನೋಟಿಸ್ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದಲ್ಲಿ ಬಂಧಿತನಾಗಿದ್ದ ಸತೀಶ್‌ಗೆ ಫೆಬ್ರವರಿ 18ರಂದು ಮೈಸೂರು ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.
ಪ್ರಕರಣದ ಹಿನ್ನೆಲೆ: ಮುಸ್ಲಿಂ ಧರ್ಮದ ಬರಹಗಳನ್ನು ರಾಜಕಾರಣಿಗಳ ಮೈ ಮೇಲೆ ಬರದು ಪೋಸ್ಟ್ ಮಾಡಿ ಸತೀಶ್ ಅವಹೇಳನ ಮಾಡಿದ್ದು, ಈ ಪೋಸ್ಟ್ ಅನ್ನು ಮೊಹ್ಸೀನ್ ಎಂಬಾತ ಪೊಲೀಸರಿಗೆ ಕಳುಹಿಸಿದ್ದಾನೆ. ಪೋಸ್ಟ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ಅವರ ಮುಖವಾಡ ಇರುವ ಅರಬೆತ್ತಲೆ ಚಿತ್ರದ ಮೇಲೆ ಅರೇಬಿಕ್ ಭಾಷೆಯಲ್ಲಿ ಬರೆದಿರುವ ಆಕೃತಿಗಳಿವೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿತ್ತು.
ಪೊಲೀಸ್ ಪೇದೆ ಸಂತೋಷ್ ಪವಾರ್ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್ 299 ಅಡಿ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯ ಬೆನ್ನಿಗೇ ಉದ್ರಿಕ್ತಗೊಂಡ ಮುಸ್ಲಿಂ ಸಮುದಾಯದ ಯುವಕರು ಉದಯಗಿರಿ ಠಾಣೆಗೆ ಕಲ್ಲು ತೂರಾಟ ನಡೆಸಿದ್ದರು. ಈ ಬಗ್ಗೆ ಪೊಲೀಸರು ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.