ಸಾರ್ವಜನಿಕ ಹುದ್ದೆಯಲ್ಲಿರುವವರ ವಿರುದ್ಧ ತನಿಖೆ ನಡೆಸಲು ಭ್ರಷ್ಟಾಚಾರ ತಡೆ ಕಾಯಿದೆಯಡಿಯಲ್ಲಿ ಪೂರ್ವಾನುಮತಿ ಪಡೆದಿರಬೇಕು ಎಂಬ ನಿಯಮಾವಳಿಯನ್ನು ಉದಾರವಾಗಿ ವ್ಯಾಖ್ಯಾನಿಸುವ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ [ನಾರಾ ಚಂದ್ರಬಾಬು ನಾಯ್ಡು ಮತ್ತು ಆಂಧ್ರಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಆಂಧ್ರಪ್ರದೇಶ ಕೌಶಲ್ಯಾಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ನಾಯ್ಡು ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸುವ ವೇಳೆ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಈ ವಿಚಾರ ತಿಳಿಸಿದೆ.
ಕಾಯಿದೆಯ ಉದ್ದೇಶ ಭ್ರಷ್ಟಾಚಾರ ತಡೆಗಟ್ಟುವುದಾಗಿದೆ. ಹೀಗಾಗಿ ಸೆಕ್ಷನ್ 17Aಯನ್ನು ವ್ಯಾಖ್ಯಾನಿಸುವಾಗ ಕಾಯಿದೆಯ ಉದ್ದೇಶವನ್ನು ಹತಾಶಗೊಳಿಸುವಂತಿಲ್ಲ ಎಂದು ನ್ಯಾ. ಬೇಲಾ ಅವರು ತಿಳಿಸಿದರು. ಸಾರ್ವಜನಿಕ ಹುದ್ದೆಯಲ್ಲಿರುವವರ ವಿರುದ್ಧ ತನಿಖೆ ನಡೆಸಲು ಭ್ರಷ್ಟಾಚಾರ ತಡೆ ಕಾಯಿದೆಯಡಿಯಲ್ಲಿ ಪೂರ್ವಾನುಮತಿ ಪಡೆದಿರಬೇಕು ಎಂದು ನಿಯಮಾವಳಿ ಹೇಳುತ್ತದೆ.
ವಿಚಾರಣೆ ಮತ್ತು ತನಿಖೆ ಸೇರಿದಂತೆ ಪ್ರತಿ ಹಂತದಲ್ಲೂ 17ಎ ಸೆಕ್ಷನ್ ಪಾಲಿಸಬೇಕು ಎಂದು ನಾಯ್ಡು ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾ. ಬೇಲಾ ಈ ಪ್ರತಿಕ್ರಿಯೆ ನೀಡಿದರು.
ಸೆಕ್ಷನ್ 17ಎ ಕಾಯಿದೆಯನ್ನು ಬಲಪಡಿಸುತ್ತದೆ ಎಂದು ಸಾಳ್ವೆ ಅವರು ವಾದಿಸಿದರು. ಈ ವೇಳೆ ನ್ಯಾ. ಅನಿರುದ್ಧ ಅವರು ನಾಯ್ಡು ಅವರ ವಿಚಾರದಲ್ಲಿ ಕೆಲ ಬಾಹ್ಯ ಸಂಗತಿಗಳಿವೆ ಎಂದು ಪ್ರತಿಕ್ರಿಯಿಸಿದರು. ಈ ಮಧ್ಯೆ ನ್ಯಾ. ಬೇಲಾ ಅವರು ಕ್ರಿಮಿನಲ್ ಪ್ರಕರಣಗಳಲ್ಲಿ ಕೇವಿಯಟ್ ಅರ್ಜಿಗಳ ನಿರ್ವಹಣೆ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.