ಮಾಗಡಿಯ ಕೆಂಪೇಗೌಡ ಪ್ರತಿಮೆ ಸ್ಥಳಾಂತರ ಬೇಡ ಎಂದು ಅರ್ಜಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಹಿಂದೆ ಗಾಂಧಿ ಪ್ರತಿಮೆ ಸ್ಥಳಾಂತರಿಸಿದ್ದಾಗ ಗಲಾಟೆ ಆಗಿ, ಕಾನೂನು ಸುವ್ಯವಸ್ಥೆ ಸಮಸ್ಯೆಯಾಗಿತ್ತು. ಪ್ರತಿಮೆ ಸ್ಥಳಾಂತರ ಮಾಡದಂತೆ ನಿರ್ದೇಶನ ನೀಡಬೇಕು. ಅರ್ಜಿ ಇತ್ಯರ್ಥ ಆಗುವ ತನಕ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಬೇಕು ಎಂದು ಕೋರಲಾಗಿದೆ.
Karnataka High Court
Karnataka High Court
Published on

ಮಾಗಡಿ ಪುರಸಭೆ ಆವರಣದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ತೆರವುಗೊಳಿಸುವುದಾಗಲಿ, ಸ್ಥಳಾಂತರಗೊಳಿಸುವುದಾಗಲಿ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.

ಶ್ರೀ ಕೆಂಪೇಗೌಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಚ್ ಎಂ ಕೃಷ್ಣಮೂರ್ತಿ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಮಾಗಡಿ ತಹಶೀಲ್ದಾರ್, ಮಾಗಡಿ ಪುರಸಭೆ ಮುಖ್ಯಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟೆಂಬರ್‌ 22ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕೆಂಪೇಗೌಡ ಅಭಿವೃದ್ಧಿ ಸಮಿತಿಯ ಕೋರಿಕೆಯಂತೆ ಪುರಸಭೆಯು ಅನುಮತಿ ನೀಡಿ, ಆವರಣದಲ್ಲಿ ಜಾಗ ಕೊಟ್ಟಿದ್ದರಿಂದ 2003ರಲ್ಲಿ ಪ್ರತಿಮೆ ಸ್ಥಾಪಿಸಲಾಗಿತ್ತು. ಈಗ ಏಕಾಏಕಿ ಪುರಸಭೆಯು ಯಾವುದೇ ಮುನ್ಸೂಚನೆ, ಚರ್ಚೆ ಇಲ್ಲದೆ ಪ್ರತಿಮೆಯನ್ನು ಸ್ಥಳಾಂತರಿಸಲು ಮುಂದಾಗಿದೆ. ಈ ಹಿಂದೆ ಮಹಾತ್ಮ ಗಾಂಧಿ ಪ್ರತಿಮೆಯನ್ನು ಸ್ಥಳಾಂತರಿಸಿದ್ದಾಗ ದೊಡ್ಡ ಗಲಾಟೆ ಆಗಿ, ಕಾನೂನು-ಸುವ್ಯವಸ್ಥೆ ಸಮಸ್ಯೆ ಉಂಟಾಗಿತ್ತು. ಪ್ರತಿಮೆ ಸ್ಥಳಾಂತರ ಮಾಡದಂತೆ ನಿರ್ದೇಶನ ನೀಡಬೇಕು. ಅರ್ಜಿ ಇತ್ಯರ್ಥ ಆಗುವ ತನಕ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಪ್ರತಿಮೆ ಎಲ್ಲಿ ಇರಬೇಕು, ಎಲ್ಲಿಗೆ ಸ್ಥಳಾಂತರಿಸಬೇಕು ಎಂಬುದು ಪುರಸಭೆಯ ಆಡಳಿತಾತ್ಮಕ ನಿರ್ಧಾರ ಆಗಿದೆ ಎಂದು ಹೇಳಿತು. ಅಲ್ಲದೇ ಕೆಂಪೇಗೌಡ ಅವರನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ನೀವು ಹೇಳುತ್ತೀರಾ ಎಂದು ವಕೀಲರನ್ನು ಪೀಠ ಪ್ರಶ್ನಿಸಿತು. ಅದು ಯಾರಿಂದಲೂ ಸಾಧ್ಯವಿಲ್ಲ ಎಂದು ವಕೀಲರು ಹೇಳಿದರು. ಹೌದು! ಕೆಂಪೇಗೌಡರ ವ್ಯಕ್ತಿತ್ವ ಅವರ ಕೊಡುಗೆ ಎಲ್ಲರಿಗೂ ತಿಳಿದಿದೆ. ಯಾರೊಬ್ಬರೂ ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿತು.

Kannada Bar & Bench
kannada.barandbench.com