ನಾಗಾ ಸಾಧುಗಳು ಇಹದ ಗೊಡವೆ ಇಲ್ಲದವರು; ಅವರ ಹೆಸರಿನಲ್ಲಿ ಆಸ್ತಿ ಹಕ್ಕು ಕೇಳಬಾರದು: ದೆಹಲಿ ಹೈಕೋರ್ಟ್

ಪ್ರತಿಯೊಬ್ಬ ಸಾಧು, ಬಾಬಾ, ಫಕೀರ ಅಥವಾ ಗುರುಗಳಿಗೆ ಸಾರ್ವಜನಿಕ ಭೂಮಿಯಲ್ಲಿ ದೇಗುಲ ನಿರ್ಮಿಸಲು ಅವಕಾಶ ನೀಡಿದರೆ, ಅದು ವಿನಾಶಕಾರಿ ಪರಿಣಾಮ ಬೀರುತ್ತದೆ ಎಂದಿದೆ ಹೈಕೋರ್ಟ್.
Delhi HC
Delhi HC

ನಾಗಾ ಸಾಧುಗಳು ಸಂಪೂರ್ಣ ನಿರ್ಲಿಪ್ತ ಜೀವನ ನಡೆಸುವವರಾಗಿದ್ದು ಅವರ ಹೆಸರಿನಲ್ಲಿ ಆಸ್ತಿ ಹಕ್ಕು ಪಡೆಯುವುದು ಅವರ ನಂಬಿಕೆ ಮತ್ತು ಆಚರಣೆಗಳಿಗೆ ಸರಿಹೊಂದದು ಎಂದ ದೆಹಲಿ ಹೈಕೋರ್ಟ್ ನಾಗಾ ಸಾಧು ದೇಗುಲದ ಹೆಸರಿನಲ್ಲಿರುವ ಆಸ್ತಿಗೆ‌ ಮನ್ನಣೆ ನೀಡುವಂತೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತು. [ಮಹಾಂತ್ ಶ್ರೀ ನಾಗ ಬಾಬಾ ಭೋಲಾ ಗಿರಿ ಅವರ ಉತ್ತರಾಧಿಕಾರಿ ಅವಿನಾಶ್ ಗಿರಿ ಮತ್ತು ಜಿಲ್ಲಾಧಿಕಾರಿ ಡಿಸ್ಟ್ರಿಕ್ಟ್ ಸೆಂಟ್ರಲ್ ಮತ್ತಿತರರ ನಡುವಣ ಪ್ರಕರಣ].

"ನಾವು ಹಿಂದೂ ಧರ್ಮದಲ್ಲಿ ಅರ್ಥಮಾಡಿಕೊಂಡಂತೆ ನಾಗಾ ಸಾಧುಗಳು ಶಿವನ ಭಕ್ತರು ಮತ್ತು ಅವರು ಲೌಕಿಕ ವ್ಯವಹಾರಗಳಿಂದ ಸಂಪೂರ್ಣ ನಿರ್ಲಿಪ್ತ ಜೀವನವನ್ನು ನಡೆಸುವ ದೀಕ್ಷೆಯನ್ನು ಪಡೆದಿದ್ದಾರೆ. ಅವರ ಹೆಸರಿನಲ್ಲಿ ಆಸ್ತಿ ಹಕ್ಕು ಕೋರುವುದು ಅವರ ನಂಬಿಕೆ ಮತ್ತು ಆಚರಣೆಗಳಿಗೆ ಸರಿಹೊಂದುವುದಿಲ್ಲ” ಎಂದು ನ್ಯಾಯಮೂರ್ತಿ ಧರ್ಮೇಶ್ ಶರ್ಮಾ ತಿಳಿಸಿದರು.

ಪ್ರಪಂಚದ ವಿವಿಧ ಭಾಗಗಳಲ್ಲಿ ಸಾವಿರಾರು ಸಾಧುಗಳು, ಬಾಬಾಗಳು, ಫಕೀರರು ಮತ್ತು ಗುರುಗಳಿದ್ದು ಅವರಲ್ಲಿ ಪ್ರತಿಯೊಬ್ಬರಿಗೂ ಸಾರ್ವಜನಿಕ ಭೂಮಿಯಲ್ಲಿ ಮಂದಿರ ಅಥವಾ ಸಮಾಧಿ ಸ್ಥಳ ನಿರ್ಮಿಸಲು ಅವಕಾಶ ನೀಡಿದರೆ, ಅದು ಹಾನಿಕಾರಕ ಪರಿಣಾಮಉಂಟುಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.

“ನಮ್ಮ ದೇಶದ ಅನೇಕ ಕಡೆ, ನಾವು ಸಾವಿರಾರು ಸಾಧುಗಳು, ಬಾಬಾಗಳು, ಫಕೀರರು ಅಥವಾ ಗುರುಗಳನ್ನು ಕಾಣಬಹುದು ಪ್ರತಿಯೊಬ್ಬರಿಗೂ ಸಾರ್ವಜನಿಕ ಭೂಮಿಯಲ್ಲಿ ದೇವಾಲಯ ಅಥವಾ ಸಮಾಧಿ ಸ್ಥಳವನ್ನು ನಿರ್ಮಿಸಲು ಅನುಮತಿಸಿದರೆ ಅದನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಬಹುದು. ಪಟ್ಟಭದ್ರ ಹಿತಾಸಕ್ತಿ ಗುಂಪುಗಳು, ಸಾರ್ವಜನಿಕ ಒಳಿತಿಗೆ ಅಪಾಯವನ್ನುಂಟುಮಾಡುವ ವಿನಾಶಕಾರಿ ಪರಿಣಾಮಗಳಿಗೆ ಇದು ಕಾರಣವಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಹೆಸರಿನಲ್ಲಿ 1996 ರಿಂದ ಘಾಟ್ ನಂ 33, ತ್ರಿವೇಣಿ ಘಾಟ್, ನಿಗಮಬೋಧ ಘಾಟ್, ಜಮುನಾ ಬಜಾರ್‌ನಲ್ಲಿರುವ ಜಮೀನು ಇದೆ ಎಂದು ಗುರುತಿಸಲು ಸ್ಥಳೀಯ ಆಡಳಿತಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಹಂತ ಶ್ರೀ ನಾಗಬಾಬಾ ಭೋಲಾ ಗಿರಿ ಅವರ ಉತ್ತರಾಧಿಕಾರಿ ಅವಿನಾಶ್ ಗಿರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.

ಅರ್ಜಿದಾರ ಬಹುದೊಡ್ಡ ಅತಿಕ್ರಮಣಕಾರರಾಗಿದ್ದು ವಿವಾದಿತ ಆಸ್ತಿ ಯಮುನಾ ನದಿಯ ಪುನರುಜ್ಜೀವನದಂತಹ ದೊಡ್ಡ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದೆ. ಪೂಜ್ಯ ಬಾಬಾ ಅವರು ನಿರ್ಮಿಸಿರುವ ದೇವಾಲಯಕ್ಕೆ ಯಾವುದೇ ಐತಿಹಾಸಿಕ ಪ್ರಾಮುಖ್ಯತೆ ಇಲ್ಲ. ಅದೊಂದು ಸಾರ್ವಜನಿಕ ದೇಗುಲ ಎಂಬುದನ್ನು ಸಾಬೀತುಪಡಿಸುವ ಸಣ್ಣ ದಾಖಲೆಯೂ ಇಲ್ಲ.  ದಾಖಲೆಗಳ ಪ್ರಕಾರ, ಈ ಪ್ರದೇಶದಲ್ಲಿ ಕೇವಲ 32 ಐತಿಹಾಸಿಕ ಘಾಟ್‌ಗಳಿದ್ದುಅರ್ಜಿದಾರರು ತಾವು ಇರುವ ಭೂಮಿಯನ್ನು 33ನೇ ಘಾಟ್‌ ಎಂದು ನಮೂದಿಸುವ ಮೂಲಕ ಕಥೆಗೆ ಹೊಸ ತಿರುವು ನೀಡಲು ಪ್ರಯತ್ನಿಸಿದ್ದಾರೆ ಎಂದು ಅದು ಹೇಳಿತು.

Kannada Bar & Bench
kannada.barandbench.com