ಸಂವಿಧಾನ ಮೂಲ ರಚನಾ ಸಿದ್ಧಾಂತ ನೀಡಿದ ಪಾಲ್ಖಿವಾಲಾರ ಮಾತು ಕೇಳಲು ಕ್ರಿಕೆಟ್‌ಗಿಂತ ಹೆಚ್ಚು ಜನ ಸೇರುತ್ತಿದ್ದರು: ಸಿಜೆಐ

ವೈಯಕ್ತಿಕ ಸ್ವಾತಂತ್ರ್ಯದ ಪರ ನಿಂತ ನಾನಿ ಅವರು ಅಂದಿನ ಸರ್ಕಾರದ ರಕ್ಷಣಾತ್ಮಕ ಅರ್ಥವ್ಯವಸ್ಥೆ ಮತ್ತು ಲೈಸೆನ್ಸ್‌ ರಾಜ್‌ಗೆ ವಿರುದ್ಧವಾಗಿದ್ದರು ಎಂದು ನ್ಯಾ. ಚಂದ್ರಚೂಡ್ ಸ್ಮರಿಸಿದರು.
Nani Palkhivala and CJI DY Chandrachud
Nani Palkhivala and CJI DY Chandrachud

ಕಾನೂನು ಮತ್ತು ಅರ್ಥಶಾಸ್ತ್ರಕ್ಕೆ ನೀಡಿದ ಕೊಡುಗೆಗಳ ಮೂಲಕ ಸಮಕಾಲೀನ ಭಾರತದ ಇತಿಹಾಸವನ್ನು ಖ್ಯಾತ ನ್ಯಾಯಶಾಸ್ತ್ರಜ್ಞ ದಿವಂಗತ ನಾನಿ ಪಾಲ್ಖಿವಾಲಾ ರೂಪಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಶನಿವಾರ ಹೇಳಿದ್ದಾರೆ.


ಬಾಂಬೆ ವಕೀಲರ ಸಂಘ ​​ಆಯೋಜಿಸಿದ್ದ  ನಾನಿ ಪಾಲ್ಖಿವಾಲಾ ಸ್ಮಾರಕ 18ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ ʼನಾನಿ ಅವರು ಇಲ್ಲದೆ ಇದ್ದರೆ ಭಾರತಕ್ಕೆ ಮೂಲಭೂತ ರಚನಾ ಸಿದ್ಧಾಂತ ದೊರೆಯುತ್ತಿರಲಿಲ್ಲʼ ಎಂದು ಹೇಳಿದರು.

ಸಿಜೆಐ ಭಾಷಣದ ಪ್ರಮುಖ ವಿಚಾರಗಳು

  • ಈ ಉಪನ್ಯಾಸ ವಕೀಲರು ಮತ್ತು ಅರ್ಥಶಾಸ್ತ್ರಜ್ಞರಿಗೆ ಸಲ್ಲಿಸುವ ಗೌರವವಾಗಿದೆ. ಸಂವಿಧಾನ ನೀಡಿದ ಹಕ್ಕುಗಳ ರಕ್ಷಣೆಗಾಗಿ ನಾನಿ ಅವರು ತಮ್ಮ ಜೀವನ ಮುಡಿಪಾಗಿಟ್ಟರು. ಅವರು ಇಲ್ಲದೇ ಹೋಗಿದ್ದರೆ ಭಾರತಕ್ಕೆ ಮೂಲ ರಚನಾ ಸಿದ್ಧಾಂತ ದೊರೆಯುತ್ತಿರಲಿಲ್ಲ.

  • ವೈಯಕ್ತಿಕ ಸ್ವಾತಂತ್ರ್ಯದ ಪರ ನಿಂತ ನಾನಿ ಅವರು ಅಂದಿನ ಸರ್ಕಾರದ ರಕ್ಷಣಾತ್ಮಕ ಅರ್ಥವ್ಯವಸ್ಥೆ ಮತ್ತು ಲೈಸೆನ್ಸ್‌ ರಾಜ್‌ಗೆ ವಿರುದ್ಧವಾಗಿದ್ದರು.

  • ಅವರು ಮಾಡುತ್ತಿದ್ದ ಉಪನ್ಯಾಸಗಳನ್ನು ಕೇಳಲು ಕ್ರಿಕೆಟ್‌ ಪಂದ್ಯಕ್ಕೆ ಸೇರುವುದಕ್ಕಿಂತಲೂ ಹೆಚ್ಚಿನ ಜನ ಸೇರುತ್ತಿದ್ದರು.

  • ಕೇಶವಾನಂದ ಭಾರತಿ ಪ್ರಕರಣಕ್ಕೆಂದು ರೂಪುಗೊಂಡ ಸಂವಿಧಾನ ಪೀಠದ ಬೃಹತ್‌ 13 ನ್ಯಾಯಮೂರ್ತಿಗಳ ಪೀಠದೆದುರು ನಾನಿ ಅವರು ಅರ್ಜಿದಾರರನ್ನು ಪ್ರತಿನಿಧಿಸಿದ್ದರು. ಅವರು ಮೂಲ ರಚನಾ ಸಿದ್ಧಾಂತವನ್ನು ಪ್ರಸ್ತಾಪಿಸಿದರು. ಆದರೆ ಅಂದುಕೊಂಡಂತೆ ವಿಚಾರಣೆ ನಡೆಯಲಿಲ್ಲ. ಪೀಠ ಅವರ ಮೇಲೆ ಪ್ರಶ್ನೆಗಳ ಮಳೆ ಸುರಿಸಿತು. ಅವರೂ ಸರಿಯಾಗಿಯೇ ತಯಾರಾಗಿದ್ದರು. ಅಲ್ಲಿ ಚಿಕ್ಕ ಹುಡುಗಿಯೊಬ್ಬಳು ವಿಚಾರಣೆ ಆಲಿಸಲು ಬಂದಿದ್ದಳು. ಆಕೆ ಚೆಂದದ ಬಟ್ಟೆ ಧರಿಸಿ ಕುಳಿತಿರುವ ಮಹನೀಯರನ್ನು (ನ್ಯಾಯಮೂರ್ತಿಗಳನ್ನು) ವಿಚಾರಣೆ ನಡೆಸುತ್ತಿರುವ ಈ ಯುವಕ ಯಾರು ಎಂದು ಕೇಳಿದಳು. ಐದು ತಿಂಗಳುಗಳವರೆಗೆ 66 ದಿನಗಳ ಕಾಲ ವಿಚಾರಣೆ ನಡೆಯಿತು. ಅರ್ಜಿದಾರರ ಪರವಾಗಿ ನಾನಿ ಅವರು 31 ದಿನಗಳವರೆಗೆ ವಾದ ಮಂಡಿಸಿದರು. ಸಂಸತ್ತಿಗೆ ಸಂವಿಧಾನದ ಯಾವುದೇ ಭಾಗವನ್ನು ಬದಲಾಯಿಸುವ ಅಧಿಕಾರವಿದ್ದರೂ ಸಂವಿಧಾನದ ಮೂಲ ರಚನೆಗೆ ಅದು ಕೈ ಹಾಕುವಂತಿಲ್ಲ ಎನ್ನುತ್ತದೆ ಮೂಲ ರಚನಾ ಸಿದ್ಧಾಂತ. ಪ್ರಕರಣಕ್ಕೆ ಸಂಬಂಧಿಸಿದಂತೆ 7-6ರ ಅನುಪಾತದಲ್ಲಿ ತೀರ್ಪು ಮೂಡಿತಾದರೂ ಅದು ಈಗಲೂ  13 ನ್ಯಾಯಮೂರ್ತಿಗಳು ನೀಡಿದ ತೀರ್ಪಾಗಿದೆ. ಮೂಲ ರಚನೆಯ ಸಿದ್ಧಾಂತವನ್ನು ನೇಪಾಳ ಮತ್ತು ಪಾಕಿಸ್ತಾನಗಳು ಭಾರತದಿಂದ ಅಳವಡಿಸಿಕೊಂಡವು.

  • 1991 ರಲ್ಲಿ ಸರ್ಕಾರದ ಉದಾರೀಕರಣದ ಕ್ರಮವನ್ನು (ಅರ್ಥಶಾಸ್ತ್ರಜ್ಞರಾಗಿದ್ದ) ನಾನಿ ಅವರು ಸ್ವಾಗತಿಸಿದರು.  

Related Stories

No stories found.
Kannada Bar & Bench
kannada.barandbench.com