ಪಂಜರದ ಗಿಳಿಯಾಗುವುದು ಕೆಟ್ಟದ್ದು, ಆದರೆ ಎಲ್ಲೆಡೆ ದಾಂಧಲೆ ಮಾಡುವಷ್ಟು ಮುಕ್ತವಾಗುವುದು ಮತ್ತೂ ಕೆಟ್ಟದ್ದು: ಸಿಂಘ್ವಿ

ಸಿಬಿಐ ವಿಶೇಷ ನ್ಯಾಯಾಲಯ ಕಟ್ಟಡದ ಮೂರನೇ ಮಹಡಿಗೆ ರಾಜ್ಯ ಕಾನೂನು ಸಚಿವರು ತೆರಳಿದ್ದರು ಎಂಬ ಹೇಳಿಕೆಯನ್ನು ಅಭಿಷೇಕ್ ಮನು ಸಿಂಘ್ವಿ ಈ ವೇಳೆ ನಿರಾಕರಿಸಿದರು.
ಪಂಜರದ ಗಿಳಿಯಾಗುವುದು ಕೆಟ್ಟದ್ದು, ಆದರೆ ಎಲ್ಲೆಡೆ ದಾಂಧಲೆ ಮಾಡುವಷ್ಟು ಮುಕ್ತವಾಗುವುದು ಮತ್ತೂ ಕೆಟ್ಟದ್ದು: ಸಿಂಘ್ವಿ

ನಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಟಿಎಂಸಿ ನಾಯಕರ ಪರ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಮಂಗಳವಾರ ವಾದ ಮಂಡಿಸುವ ವೇಳೆ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ಸಿಬಿಐ ಕುರಿತು ಕೆಲ ಕಟು ಶಬ್ದಗಳನ್ನು ಬಳಸಿದರು.

2013ರಲ್ಲಿ ಸುಪ್ರೀಂಕೋರ್ಟ್‌ ಸಿಬಿಐಯನ್ನು ಪಂಜರದಲ್ಲಿರುವ ಗಿಳಿ ಎಂದು ಬಣ್ಣಿಸಿದ್ದನ್ನು ಉಲ್ಲೇಖಿಸಿದ ಅವರು “ಪಂಜರದ ಗಿಳಿಯಾಗುವುದು ಕೆಟ್ಟದ್ದು. ಆದರೆ, ಎಲ್ಲರ ಮನೆಗೂ ನುಗ್ಗಿ, ದಾಂಧಲೆ ಮಾಡುವಷ್ಟು ಬಂಧಮುಕ್ತಗೊಳ್ಳುವುದು ಮತ್ತೂ ಕೆಟ್ಟದ್ದು” ಎಂದು ಅವರು ಮಾರ್ಮಿಕವಾಗಿ ನುಡಿದರು.

ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಮುರಿದುಬೀಳುವ ಭೀತಿ ಇಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುತ್ತಿದ್ದ ವೇಳೆ ಸಿಂಘ್ವಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಟಿಎಂಸಿ ನಾಯಕರ ವಿರುದ್ಧದ ಪ್ರಕರಣಗಳನ್ನು ವರ್ಗಾವಣೆ ಮಾಡುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತಿತರರ ಟಿಎಂಸಿ ನಾಯಕರು ಕಚೇರಿಯ ಹೊರಗೆ ಧರಣಿ ಕುಳಿತು ತನಗೆ ಬೆದರಿಕೆ ಹಾಕಿದ್ದರು, ನ್ಯಾಯಾಂಗ ಪ್ರಕ್ರಿಯೆಗೆ ಕೂಡ ಇದರಿಂದ ಧಕ್ಕೆಯಾಗಬಹುದು ಎಂಬುದನ್ನು ಉಲ್ಲೇಖಿಸಿದ್ದ ಸಿಬಿಐ ಪ್ರಕರಣವನ್ನು ಕೋಲ್ಕತ್ತಾದ ವಿಶೇಷ ಸಿಬಿಐ ನ್ಯಾಯಾಲಯದಿಂದ ಕಲ್ಕತ್ತಾ ಹೈಕೋರ್ಟ್ ಅಥವಾ ಇನ್ನಾವುದೇ ನ್ಯಾಯಾಲಯಕ್ಕೆ ವರ್ಗಾಯಿಸಲು ಕೋರಿತ್ತು.

ಆದರೆ ಸಿಬಿಐ ವಿಶೇಷ ನ್ಯಾಯಾಲಯದ ಮೂರನೇ ಮಹಡಿಗೆ ರಾಜ್ಯ ಕಾನೂನು ಸಚಿವರು ತೆರಳಿದ್ದರು ಎಂಬ ಹೇಳಿಕೆಯನ್ನು ಅಭಿಷೇಕ್‌ ಮನು ಸಿಂಘ್ವಿ ನಿರಾಕರಿಸಿದರು. ಸಿಬಿಐ ಅಧಿಕಾರಿಗಳು ನ್ಯಾಯಾಲಯ ಪ್ರವೇಶಿಸುವುದಕ್ಕೆ ಯಾವುದೇ ಅಡ್ಡಿ ಉಂಟು ಮಾಡಿರಲಿಲ್ಲ. ಪ್ರಕರಣದ ವಿಚಾರಣೆ ವರ್ಚುವಲ್‌ ವಿಧಾನದಲ್ಲಿ ನಡೆದಿತ್ತು. ಅಡೆತಡೆ ಉಂಟಾಗಿದೆ ಎಂಬ ವಾದದಲ್ಲಿ ಹುರುಳಿಲ್ಲ. ಅದೊಂದು ಆನಂತರ ರೂಪುಗೊಂಡಿರುವ ಆಲೋಚನೆಯಷ್ಟೇ ಎಂದು ಅವರು ಹೇಳಿದರು.

ಸಿಬಿಐ ನ್ಯಾಯಾಲಯದ ಹೊರಗೆ ಸಾವಿರಾರು ಜನ ಸೇರಿದ್ದರು ಎಂದು ತೋರಿಸುವ ನೈಜ ಛಾಯಾಚಿತ್ರಗಳಾಗಲೀ, ದೃಶ್ಯವಾಳಿಗಳಾಗಲಿ ಇಲ್ಲ . ಸಿಬಿಐ ಆರೋಪ ದಿಕ್ಕುತಪ್ಪಿಸುವಂತಿದೆ ಮತ್ತು ಅಸಂಬದ್ಧವಾಗಿದೆ ಎಂದು ಅವರು ವಿವರಿಸಿದರು.

Also Read
ಸಿಬಿಐ ನೂತನ ನಿರ್ದೇಶಕರಾಗಿ ಸುಬೋಧ್ ಕುಮಾರ್ ಜೈಸ್ವಾಲ್ ನೇಮಕ

2014ರಲ್ಲಿಯೇ ನಾರದ ಪ್ರಕರಣದಲ್ಲಿ ಟಿಎಂಸಿ ನಾಯಕರ ವಿರುದ್ಧ ಪ್ರಕರಣ ದಾಖಲಾಗಿರುವುದನ್ನು ಪ್ರಸ್ತಾಪಿಸಿದ ಅವರು “ಕೆಲ ನಾಯಕರ ಪ್ರತಿಭಟನೆಯನ್ನು ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ತೀರ್ಮಾನಿಸಲು ಬರುವುದಿಲ್ಲ” ಎಂದರು.

“ಯಾರಾದರೂ ಉನ್ನತ ಹುದ್ದೆಯಲ್ಲಿದ್ದಾರೆ ಎಂದ ಮಾತ್ರಕ್ಕೆ ಆ ವ್ಯಕ್ತಿ ಸಾಕ್ಷ್ಯ ಹಾಳುಗೆಡವುತ್ತಾನೆ ಎಂದರ್ಥವಲ್ಲ. ಹಾಗಾದರೆ, ಯಾವುದೇ ಆರೋಪಿ ಸಚಿವರನ್ನು 7 ವರ್ಷಗಳ ನಂತರ ಯಾವುದೇ ಆಧಾರವಿಲ್ಲದೆ ಬಂಧಿಸಬಹುದು” ಎಂದು ಅವರು ತಿಳಿಸಿದರು.

Related Stories

No stories found.
Kannada Bar & Bench
kannada.barandbench.com