ಟಿಎಂಸಿ ನಾಯಕರಿಗೆ ಜಾಮೀನು ನೀಡುವ ವಿಚಾರ: ಮೊದಲು ಅರ್ಜಿದಾರರ ವಾದ ಆಲಿಸಬೇಕೆಂದ ಕಲ್ಕತ್ತಾ ಹೈಕೋರ್ಟ್

ಇದೇ ವೇಳೆ ತೃಣಮೂಲ ಕಾಂಗ್ರೆಸ್ ನಾಯಕರು ಹಾಗೂ ಪಶ್ಚಿಮ ಬಂಗಾಳದ ಸರ್ಕಾರವನ್ನು ಪ್ರತಿನಿಧಿಸಿದ್ದ ಇಬ್ಬರು ವಕೀಲರ ನಡುವಿನ ಚರ್ಚೆ ಸ್ವಾರಸ್ಯಕರವಾಗಿತ್ತು.
Calcutta High Court, five-judge Bench
Calcutta High Court, five-judge Bench
Published on

ಸಿಬಿಐ ನ್ಯಾಯಾಲಯ ತಮಗೆ ನೀಡಿದ್ದ ಜಾಮೀನು ರದ್ದುಪಡಿಸಿದ ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ಹಿಂಪಡೆಯುವಂತೆ ಕೋರಿ ನಾರದ ಪ್ರಕರಣದ ಆರೋಪಿಗಳಾದ ನಾಲ್ವರು ಟಿಎಂಸಿ ನಾಯಕರು ಸಲ್ಲಿಸಿದ ಅರ್ಜಿಗಳ ವಿಚಾರಣೆಗೆ ಮೊದಲು ಆದ್ಯತೆ ನೀಡಲಾಗುವುದು ಎಂದು ಕಲ್ಕತ್ತಾ ಹೈಕೋರ್ಟ್‌ನ ಐವರು ಸದಸ್ಯರ ಪೀಠ ತಿಳಿಸಿದೆ.

ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್, ನ್ಯಾಯಮೂರ್ತಿಗಳಾದ ಐಪಿ ಮುಖರ್ಜಿ, ಹರೀಶ್ ಟಂಡನ್, ಸೌಮೆನ್ ಸೇನ್ ಮತ್ತು ಅರಿಜಿತ್ ಬ್ಯಾನರ್ಜಿ ಅವರಿದ್ದ ಪಂಚ ಸದಸ್ಯರ ಪೀಠ ಪ್ರಕರಣದ ಪಕ್ಷಕಾರನಾಗಲು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಅನುಮತಿ ನೀಡಿತು.

ಈ ಸಂದರ್ಭದಲ್ಲಿ ಸಿಬಿಐ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ರಾಜಕೀಯ ನಾಯಕರು ಸಂಘಟಿತ ಕೃತ್ಯಗಳಲ್ಲಿ ತೊಡಗಿರುವುದನ್ನು ನಾವು ನೋಡುತ್ತೇವೆ. ಈ ಗುಂಪಾಳ್ವಿಕೆಯನ್ನು (ಮೊಬಾಕ್ರಸಿ) ಸಾಂವಿಧಾನಿಕ ನ್ಯಾಯಾಲಯಗಳು ತಡೆಯದೇ ಹೋದರೆ ನಾಳೆ ದರೋಡೆಕೋರರನ್ನು ಬಂಧಿಸಿದಾಗ ಅವರ ಬೆಂಬಲಿಗರು ಕೂಡ ಸಿಬಿಐ ಕಚೇರಿಗೆ ಬಂದು ಘೇರಾವ್‌ ಹಾಕುತ್ತಾರೆ” ಎಂದರು.

ಆಗ ನ್ಯಾಯಾಲಯ ಆರೋಪಿಸಲಾಗುತ್ತಿರುವ ಮೊಬಾಕ್ರಸಿ ನ್ಯಾಯಮೂರ್ತಿಗಳ ಮೇಲೆ ಪರಿಣಾಮ ಬೀರಿದೆ ಎಂದು ಸಾಬೀತುಪಡಿಸದೇ ಇರುವಾಗ ಸಂವಿಧಾನದ 226 ನೇ ವಿಧಿಯಡಿ ಕ್ರಮ ಕೈಗೊಳ್ಳುವಂತೆ ನೀವು ಹೇಗೆ ಕೋರಬಹುದು ಎಂದು ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ತುಷಾರ್‌ ಮೆಹ್ತಾ “ನ್ಯಾಯಾಧೀಶರು ಬೆದರಿಕೆಗೆ ತುತ್ತಾಗಿದ್ದಾರೋ ಇಲ್ಲವೋ ಎಂಬುದು ಪ್ರಶ್ನೆಯಲ್ಲ. ವ್ಯವಸ್ಥೆಯಲ್ಲಿನ ಜನ ಸಾಮಾನ್ಯರ ನಂಬಿಕೆಯನ್ನು ಬೆದರಿಕೆ ಅಲುಗಾಡಿಸಬಹುದೇ ಎಂಬುದು ಪ್ರಶ್ನೆ" ಎಂದು ಪ್ರತಿಕ್ರಿಯಿಸಿದರು.

ಬಂಧನದ ಕಾನೂನುಬದ್ಧತೆ ಮತ್ತು ಜಾಮೀನು ನೀಡುವ ವಿಚಾರವನ್ನು ಬದಿಗಿಟ್ಟು ಆಡಳಿತ ಪಕ್ಷದ ಮಂತ್ರಿಗಳ ನಡವಳಿಕೆಯತ್ತ ಗಮನ ಹರಿಸುವಂತೆ ಅವರು ನ್ಯಾಯಾಲಯವನ್ನು ಕೋರಿದರು. ಜಾಮೀನು ನೀಡುವ ಕುರಿತಂತೆ ನಿರ್ಣಯ ಕೈಗೊಳ್ಳಲು ಐವರು ಸದಸ್ಯರ ಪೀಠಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ, ವಿಸ್ತೃತ ಪೀಠಕ್ಕೆ ಮೊರೆ ಹೋಗಿರುವ ಉದ್ದೇಶವು ಜಾಮೀನು ನೀಡಬೇಕೆ ಬೇಡವೇ ಎನ್ನುವುದಕ್ಕಾಗಿ ಅಲ್ಲ, ಬದಲಿಗೆ ಕಾನೂನಾತ್ಮಕ ಆಡಳಿತಕ್ಕೆ ಸಂಬಂಧಿಸಿದ ವಿಸ್ತಾರವಾದ ಪ್ರಶ್ನೆಯನ್ನು ಉದ್ದೇಶಿಸಲು ಹಾಗೂ ಈ ವಿಷಯದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವಿದೆಯೇ ಎಂದು ತೀರ್ಮಾನಿಸಲು ಎಂದು ವಾದಿಸಿದರು.

ಈ ವೇಳೆ, ನ್ಯಾ. ಮುಖರ್ಜಿ ಅವರು ಜಾಮೀನು ಅಂಶ ಸೇರಿದಂತೆ ಎಲ್ಲಾ ವಿಚಾರಗಳನ್ನು ಐವರು ಸದಸ್ಯರ ಪೀಠ ಪರಿಗಣಿಸುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿದರು.

ಸ್ವಾರಸ್ಯಕರ ಚರ್ಚೆಗೆ ಸಾಕ್ಷಿಯಾದ ನ್ಯಾಯಾಲಯ

AM Singhvi and Kalyan Bandyopadhyay
AM Singhvi and Kalyan Bandyopadhyay

ವಿಚಾರಣೆ ವೇಳೆ ತೃಣಮೂಲ ಕಾಂಗ್ರೆಸ್ ನಾಯಕರು ಹಾಗೂ ಪಶ್ಚಿಮ ಬಂಗಾಳದ ಸರ್ಕಾರವನ್ನು ಪ್ರತಿನಿಧಿಸಿದ್ದ ಇಬ್ಬರು ವಕೀಲರ ನಡುವಿನ ಚರ್ಚೆ ಸ್ವಾರಸ್ಯಕರವಾಗಿತ್ತು. ಟಿಎಂಸಿ ನಾಯಕರ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಲ್ಯಾಣ್‌ ಬಂಡೋಪಾಧ್ಯಾಯ ಅವರು ನನ್ನ ನಲವತ್ತು ವರ್ಷಗಳ ಅನುಭವದಲ್ಲಿ ನೈಸರ್ಗಿಕ ನ್ಯಾಯ ಉಲ್ಲಂಘಿಸಿ ಹೈಕೋರ್ಟ್‌ ಹೊರಡಿಸಿದ ಆದೇಶವನ್ನು ಕಂಡಿಲ್ಲ ಎಂದರು. ಪ್ರಸ್ತುತ ಮನವಿಯಲ್ಲಿ ನ್ಯಾಯಾಲಯ ಚಲಾಯಿಸಿರುವ ನ್ಯಾಯವ್ಯಾಪ್ತಿ ಇನ್ನೂ ಸ್ಪಷ್ಟವಾಗಿಲ್ಲ. ಯಾವ ನ್ಯಾಯಾವ್ಯಾಪ್ತಿಯನ್ನು ನ್ಯಾಯಮೂರ್ತಿಗಳು ಚಲಾಯಿಸುತ್ತಿದ್ದಾರೆ ಎಂದು ನನಗೆ ಆಶ್ಚರ್ಯವಾಗುತ್ತಿದೆ. ಇದು ನನಗೆ ನೋವುಂಟು ಮಾಡುತ್ತಿದೆ” ಎಂದರು.

ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಾಜರಾದ ಮತ್ತೊಬ್ಬ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ʼನಾನು ಬಂಡೋಪಾಧ್ಯಾಯ ಅವರ ವಾದವನ್ನು ಅನುಮೋದಿಸುತ್ತೇನೆ, ಆದರೆ ಅಷ್ಟು ಭಾವಾವೇಷದಿಂದಲ್ಲʼ ಎಂದು ಚಟಾಕಿ ಹಾರಿಸಿದರು.

ಅದಕ್ಕೆ ಬಂಡೋಪಾಧ್ಯಾಯ ಅವರು ಉತ್ತರಿಸಿದ್ದು ಹೀಗೆ: ನಾನು ಜನರಿಂದ ಆಯ್ಕೆಯಾದ ಕೆಳಮನೆಗೆ ಸೇರಿದವನು. ಅವರು ಶಾಸಕರಿಂದ ಆಯ್ಕೆಯಾದ ಮೇಲ್ಮನೆಗೆ ಸೇರಿದವರು. ಹಾಗಾಗಿ ಭಾವನೆಗಳು ಇರುತ್ತವೆ” ಎಂದರು. (ಈ ಇಬ್ಬರೂ ವಕೀಲರು ರಾಜಕಾರಣಿಗಳು ಕೂಡ ಆಗಿದ್ದು ಕಲ್ಯಾಣ್‌ ಅವರು ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸುತ್ತಿದ್ದರೆ ಸಿಂಘ್ವಿ ಅವರು ಪಶ್ಚಿಮ ಬಂಗಾಳದಿಂದ ಕಾಂಗ್ರೆಸ್‌ ಪಕ್ಷದ ಪರವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು ಎಂಬುದನ್ನು ಇಲ್ಲಿ ಗಮನಿಸಬಹುದು).

ಹೈಕೋರ್ಟ್‌ ವಿಭಾಗೀಯ ಪೀಠ ಮೇ 17ರಂದು ನೀಡಿದ್ದ ಆದೇಶವನ್ನು ಪರಿಶೀಲಿಸುವಂತೆ ಕೋರಿ ನಾಲ್ವರು ಟಿಎಂಸಿ ನಾಯಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಾಳೆ (ಶುಕ್ರವಾರ) ಮಧ್ಯಾಹ್ನ 12ಕ್ಕೆ ನಿಗದಿಯಾಗಿದೆ.

Kannada Bar & Bench
kannada.barandbench.com