[ಸುಶಾಂತ್‌ ಪ್ರಕರಣ] ಎನ್‌ಡಿಪಿಎಸ್‌ ನ್ಯಾಯಾಲಯಕ್ಕೆ 61,000 ಪುಟಗಳಿಗೂ ಹೆಚ್ಚಿನ ಆರೋಪಪಟ್ಟಿ ಸಲ್ಲಿಸಿದ ಎನ್‌ಸಿಬಿ

ಆರೋಪಪಟ್ಟಿಯನ್ನು ಎರಡು ವಿಧಗಳಲ್ಲಿ ಸಲ್ಲಿಸಲಾಗಿದೆ. ಸುಮಾರು 11,700 ಪುಟಗಳನ್ನು ಭೌತಿಕ ಪ್ರತಿಗಳಲ್ಲಿ ಮತ್ತು 50,000 ಪುಟಗಳನ್ನು ಡಿಜಿಟಲ್‌ ಮಾದರಿಯಲ್ಲಿ ಸಿಡಿಗಳ ಮೂಲಕ ಸಲ್ಲಿಸಲಾಗಿದೆ.
Narcotics Control Bureau, Sushant Singh Rajput
Narcotics Control Bureau, Sushant Singh Rajput
Published on

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿಗೆ ಸಂಬಂಧಿಸಿದ ಮಾದಕವಸ್ತು ಜಾಲದ ಕುರಿತಾದ ತನಿಖೆ ನಡೆಸಿದ್ದ ಮಾದಕವಸ್ತು ನಿಯಂತ್ರಣ ಸಂಸ್ಥೆಯ (ಎನ್‌ಸಿಬಿ) ಮುಂಬೈ ವಲಯ ಘಟಕವು ಮೊದಲ ಆರೋಪಪಟ್ಟಿಯನ್ನು ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ (ಎನ್‌ಡಿಪಿಎಸ್‌) ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಆರೋಪಪಟ್ಟಿಯನ್ನು ಎರಡು ವಿಧಗಳಲ್ಲಿ ಸಲ್ಲಿಸಲಾಗಿದೆ. ಸುಮಾರು 11,700 ಪುಟಗಳನ್ನು ಭೌತಿಕ ಪ್ರತಿಗಳಲ್ಲಿ ಮತ್ತು 50,000 ಪುಟಗಳನ್ನು ಡಿಜಿಟಲ್‌ ಮಾದರಿಯಲ್ಲಿ ಸಿಡಿಗಳ ಮೂಲಕ ಸಲ್ಲಿಸಲಾಗಿದೆ.

ಆರೋಪಪಟ್ಟಿಯಲ್ಲಿ ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೊವಿಕ್‌ ಚಕ್ರವರ್ತಿ, ಅಗಿಸಿಲಾಸ್ ಡೆಮೆಟ್ರಿಯೇಡಸ್ (ಅರ್ಜುನ್‌ ರಾಮ್‌ಪಾಲ್‌ ಸಂಗಾತಿ ಗೇಬ್ರಿಯೆಲಾ ಡಿಮೆಟ್ರಿಯೇಡ್ಸ್ ಸಹೋದರ), ಧರ್ಮ ಪ್ರೊಡಕ್ಷನ್ಸ್‌ನ ಮಾಜಿ ಉದ್ಯೋಗಿ ಕ್ಷಿತಿಜ್‌ ಪ್ರಸಾದ್‌ ಸೇರಿದಂತೆ 33 ಮಂದಿಯ ಹೆಸರುಗಳನ್ನು ಉಲ್ಲೇಖಿಸಲಾಗಿದೆ.

ಆರೋಪಪಟ್ಟಿಯಲ್ಲಿ ಪ್ರಮುಖ ಅಂಶಗಳು ಇಂತಿವೆ:

  • 200 ಸಾಕ್ಷ್ಯಗಳ ಹೆಸರು ಆರೋಪಪಟ್ಟಿಯಲ್ಲಿದ್ದು, 33 ಮಂದಿ ಆರೋಪಿಗಳ ಪೈಕಿ ಇನ್ನೂ 8 ಮಂದಿ ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

  • ಆರೋಪಿಗಳ ವಿರುದ್ಧ ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್‌ಗಳಾದ 8(ಸಿ), 20(ಬಿ)(ii), 22, 27ಎ, 28, 29 ಮತ್ತು 30ರ ಅಡಿ ದೂರು ದಾಖಲಿಸಲಾಗಿದೆ.

  • ತನಿಖೆಯ ಸಂದರ್ಭದಲ್ಲಿ ಹಲವು ನಿಷೇಧಿತ ಮಾದಕ ವಸ್ತುಗಳು, ವಿದ್ಯುನ್ಮಾನ ಉಪಕರಣಗಳು, ದೇಶ, ವಿದೇಶಗಳ ಕರೆನ್ಸಿಯನ್ನು ವಶಪಡಿಸಿಕೊಂಡಿರುವುದಾಗಿ ಎನ್‌ಸಿಬಿ ಹೇಳಿದೆ.

  • ಮಾದಕ ಉತ್ಪನ್ನಗಳ ಮಾರಾಟ, ಖರೀದಿ, ಸಂಗ್ರಹಣೆ, ಸೇವನೆ ಮತ್ತು ಅದನ್ನು ಹೊಂದುವುದಕ್ಕೆ ಸಂಬಂಧಿಸಿದಂತೆ ದೋಷರೋಪಣೆಯಲ್ಲಿ ಉಲ್ಲೇಖಿಸಲಾಗಿರುವ ಗ್ಯಾಜೆಟ್‌ಗಳು, ಮೊಬೈಲ್‌ ಫೋನ್‌ಗಳನ್ನು ವಿಶ್ಲೇಷಿಸಿರುವುದಾಗಿ ಎನ್‌ಸಿಬಿ ಹೇಳಿದೆ.

  • ಸ್ವಯಂಪ್ರೇರಿತವಾಗಿ ನೀಡಿದ ಹೇಳಿಕೆಗಳ ತನಿಖೆ, ಕರೆ ವಿವರಣೆ, ವಾಟ್ಸಾಪ್‌ ಚಾಟ್‌ಗಳು, ಬ್ಯಾಂಕ್‌ ಖಾತೆಗಳು/ಹಣಕಾಸು ವರ್ಗಾವಣೆ, ಇತರೆ ದಾಖಲೆಗಳ ಸಾಕ್ಷ್ಯಗಳನ್ನು ಆರೋಪಪಟ್ಟಿ ಹೊಂದಿದೆ ಎಂದು ಹೇಳಲಾಗಿದೆ.

  • ಪರಿಸರದ ಕಾರಣಗಳಿಂದಾಗಿ ಬೃಹತ್‌ ಪ್ರಮಾಣದಲ್ಲಿದ್ದ ಅನುಬಂಧವನ್ನು ಸಿಡಿಯ ಮೂಲಕ ಸಲ್ಲಿಸಲಾಗಿದೆ ಎಂದು ಎನ್‌ಸಿಬಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

  • ಮಾದಕ ವಸ್ತುಗಳಾದ ಚರಸ್‌, ಗಾಂಜಾ, ಎಲ್‌ಎಸ್‌ಡಿ ಮತ್ತು ಅಮಲು ಪದಾರ್ಥಗಳಾದ ಆಲ್‌ಪ್ರಜೋಲಾಮ್ ಮತ್ತು ಕ್ಲೋನಾಜೆಪಮ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಎನ್‌ಸಿಬಿ ಹೇಳಿದೆ.

  • ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವ ಆರೋಪಿಗಳು ಮತ್ತು ಸಾಕ್ಷ್ಯಗಳಿಗೆ ಸಮನ್ಸ್‌ ನೀಡಲು ನ್ಯಾಯಾಲಯದ ಅನುಮತಿಯನ್ನು ಎನ್‌ಸಿಬಿ ಕೇಳಿದೆ.

  • ಇನ್ನೂ ತನಿಖೆ ನಡೆಯುತ್ತಿದ್ದು, ಮುಂದೆ ಪೂರಕ ಆರೋಪ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದೆ.

Also Read
ಸುಶಾಂತ್‌ ಸಿಂಗ್ ಸಾವಿನ ಪ್ರಕರಣ: ಮೀತು ಸಿಂಗ್‌ ವಿರುದ್ಧದ ಪ್ರಕರಣ ವಜಾ, ಪ್ರಿಯಾಂಕಾ ಸಿಂಗ್‌ ವಿರುದ್ಧ ತನಿಖೆ ಅಬಾಧಿತ

ಸುಶಾಂತ್‌ ಸಹೋದರಿ ಮೀತು ಸಿಂಗ್‌ ವಿರುದ್ಧ ಮುಂಬೈ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಅನ್ನು ಈಚೆಗೆ ಬಾಂಬೆ ಹೈಕೋರ್ಟ್‌ ವಜಾಗೊಳಿಸಿತ್ತು. ಸುಶಾಂತ್‌ ಮತ್ತೊಬ್ಬ ಸಹೋದರಿ ಪ್ರಿಯಾಂಕಾ ಸಿಂಗ್‌ ವಿರುದ್ಧದ ತನಿಖೆಗೆ ಅಸ್ತು ಎಂದಿತ್ತು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ ಮತ್ತು ಇಬ್ಬರಿಗೆ ನ್ಯಾಯಾಲಯ ಜಾಮೀನು ನೀಡಿತ್ತು.

Kannada Bar & Bench
kannada.barandbench.com