ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪುಣೆ ನ್ಯಾಯಾಲಯ, ಮೂವರ ಖುಲಾಸೆ

ಆರೋಪಿಗಳಾದ ಸಚಿನ್‌ ಅಂದೂರೆ, ಶರದ್‌ ಕಲಾಸ್ಕರ್‌ ಅವರನ್ನು ದೋಷಿಗಳು ಎಂದು ಘೋಷಿಸಿ, ಅವರಿಗೆ ಜೀವಾವಧಿ ಶಿಕ್ಷೆ ಮತ್ತು ₹5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ.
Narendra Dabholkar
Narendra Dabholkar bhaskar.com

ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣದಲ್ಲಿ ಇಬ್ಬರನ್ನು ದೋಷಿಗಳು ಎಂದು ಘೋಷಿಸಿರುವ ಪುಣೆ ನ್ಯಾಯಾಲಯವು ಮೂವರನ್ನು ಖುಲಾಸೆಗೊಳಿಸಿದೆ.

ಆರೋಪಿಗಳಾದ ಸಚಿನ್‌ ಅಂದೂರೆ, ಶರದ್‌ ಕಲಾಸ್ಕರ್‌ ಅವರನ್ನು ದೋಷಿಗಳು ಎಂದು ಘೋಷಿಸಿ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ₹5 ಲಕ್ಷ ದಂಡ ವಿಧಿಸಿ ಸತ್ರ ನ್ಯಾಯಾಧೀಶ ಪಿ ಪಿ ಜಾಧವ್‌ ತೀರ್ಪು ಪ್ರಕಟಿಸಿದ್ದಾರೆ.

ಡಾ. ವೀರೇಂದ್ರಸಿಂಗ್‌ ತಾವಡೆ, ವಿಕ್ರಮ್‌ ಭಾವೆ ಮತ್ತು ಸಂಜೀವ್‌ ಪುನಲೇಕರ್‌ ಅವರನ್ನು ಖುಲಾಸೆಗೊಳಿಸಲಾಗಿದೆ. 2021ರಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಿತ್ತು.

ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಸಂಸ್ಥಾಪಕರಾದ ನರೇಂದ್ರ ದಾಭೋಲ್ಕರ್‌ ಅವರನ್ನು ಇಬ್ಬರು ದುಷ್ಕರ್ಮಿಗಳು 2013ರಲ್ಲಿ ಪುಣೆಯಲ್ಲಿ ಗುಂಡಿಕ್ಕಿ ಕೊಂದಿದ್ದರು. ಸನಾತನ ಸಂಸ್ಥಾ ಸಂಘಟನೆ ಜೊತೆ ನಂಟು ಹೊಂದಿದ್ದ ಆರೋಪಿಗಳನ್ನು ಕೇಂದ್ರೀಯ ತನಿಖಾ ತಂಡವು 2016 ರಿಂದ 2019ರ ಅವಧಿಯಲ್ಲಿ ಬಂಧಿಸಿತ್ತು.

2014ರಲ್ಲಿ ಪುಣೆ ನಗರ ಪೊಲೀಸರಿಂದ ಸಿಬಿಐಗೆ ಪ್ರಕರಣ ವರ್ಗಾವಣೆಯಾಗಿದ್ದು, ಐವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

ಆರೋಪಿಗಳಾದ ಡಾ. ವೀರೇಂದ್ರ ಸಿಂಗ್‌ ತಾವಡೆ, ಸಚಿನ್‌ ಅಂದೂರೆ, ಶರದ್‌ ಶರದ್‌ ಕಲಾಸ್ಕರ್‌ ಮತ್ತು ವಿಕ್ರಮ್‌ ಭಾವೆ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 120ಬಿ (ಕ್ರಿಮಿನಲ್‌ ಪಿತೂರಿ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಆನಂತರ, ಹೆಚ್ಚುವರಿಯಾಗಿ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ (ಯುಎಪಿಎ) ಮತ್ತು ಶಸ್ತ್ರಾಸ್ತ್ರ ಕಾಯಿದೆಯ ವಿವಿಧ ಸೆಕ್ಷನ್‌ಗಳನ್ನು ಅನ್ವಯಿಸಲಾಗಿತ್ತು.

ಮುಂಬೈ ಮೂಲದ ವಕೀಲ ಹಾಗೂ ಆರೋಪಿ ಪುನಲೇಕರ್‌ ವಿರುದ್ಧ ಐಪಿಸಿ ಸೆಕ್ಷನ್‌ 201ರ ಅಡಿ ಸಾಕ್ಷ್ಯ ನಾಶ ಪ್ರಕರಣ ದಾಖಲಿಸಲಾಗಿತ್ತು. ತಾವಡೆ, ಅಂದೂರೆ ಮತ್ತು ಕಲಾಸ್ಕರ್‌ ನ್ಯಾಯಾಂಗ ಬಂಧನದಲ್ಲಿದ್ದು, ಭಾವೆ ಮತ್ತು ಪುನಲೇಕರ್‌ ಜಾಮೀನಿನ ಮೇಲೆ ಹೊರಗಿದ್ದಾರೆ.

2021ರ ಸೆಪ್ಟೆಂಬರ್‌ 15ರಂದು ಪುಣೆಯ ಸತ್ರ ನ್ಯಾಯಾಲಯವು ಐವರು ಆರೋಪಿಗಳ ವಿರುದ್ಧ ಆರೋಪ ನಿಗದಿ ಮಾಡಿತ್ತು.

ಡಾ. ದಾಭೋಲ್ಕರ್‌ ಹತ್ಯೆ ಮಾಡುವ ಮೂಲಕ ಜನರಲ್ಲಿ ಭೀತಿ ಸೃಷ್ಟಿಸಿ, ಸಾರ್ವಜನಿಕರು ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯಲ್ಲಿ ಭಾಗವಹಿಸದಂತೆ ಮಾಡುವ ಪಿತೂರಿ ಹೊಂದಲಾಗಿತ್ತು.

2015ರಲ್ಲಿ ದಾಭೋಲ್ಕರ್‌ ಪುತ್ರ ಮತ್ತು ಪುತ್ರಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ನ್ಯಾಯಾಲಯದ ನಿಗಾವಣೆಯಲ್ಲಿ ವಿಶೇಷ ತನಿಖಾ ತಂಡ ರಚಿಸಿ, ತನಿಖೆ ನಡೆಸಬೇಕು ಎಂದು ಕೋರಿದ್ದರು. 2015ರ ಆಗಸ್ಟ್‌ನಲ್ಲಿ ಹೈಕೋರ್ಟ್‌ ತನಿಖೆಯ ಮೇಲೆ ನಿಗಾ ಇಟ್ಟಿತ್ತು.

Also Read
ನರೇಂದ್ರ ದಾಭೋಲ್ಕರ್ ಹತ್ಯೆ: ಪುಣೆ ನ್ಯಾಯಾಲಯದಿಂದ ಎಲ್ಲಾ ಐವರು ಆರೋಪಿಗಳ ವಿರುದ್ಧ ದೋಷಾರೋಪ

2022ರ ಡಿಸೆಂಬರ್‌ನಲ್ಲಿ ಹೈಕೋರ್ಟ್‌ ಮೇಲುಸ್ತುವಾರಿ ನಿಲ್ಲಿಸಬೇಕು ಎಂದು ಕೋರಿ ತಾವಡೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಕೊಲೆ ಪ್ರಕರಣದಲ್ಲಿ ವಿಚಾರಣೆ ಆರಂಭವಾಗಿರುವುದರಿಂದ ಹೈಕೋರ್ಟ್‌ ನಿಗಾ ಇಡುವುದನ್ನು ನಿಲ್ಲಿಸಬೇಕು ಎಂದಿದ್ದರು. ಇದೇ ಕೋರಿಕೆಯನ್ನು ಮತ್ತೊಬ್ಬ ಆರೋಪಿ ಕೂಡ ಮಾಡಿದ್ದರು.

ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್‌ ಶಾಶ್ವತವಾಗಿ ವಿಚಾರಣೆಯ ಮೇಲೆ ನಿಗಾ ಇಡಲಾಗದು ಎಂದಿತ್ತು. ತನಿಖಾ ಸಂಸ್ಥೆಯು ಎರಡು ತಿಂಗಳಲ್ಲಿ ವಿಚಾರಣಾಧೀನ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಳ್ಳಿದೆ ಎಂದು ಹೈಕೋರ್ಟ್‌ಗೆ ತಿಳಿಸಿತ್ತು. ಹೀಗಾಗಿ, ಹೈಕೋರ್ಟ್‌ ಪ್ರಕರಣದ ಮೇಲೆ ನಿಗಾ ಇಡುವುದರಿಂದ ಹಿಂದೆ ಸರಿದಿತ್ತು. 

Kannada Bar & Bench
kannada.barandbench.com