ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರು ₹538 ಕೋಟಿ ಸಾಲ ಮರು ಪಾವತಿ ಮಾಡಲು ವಿಫಲವಾಗಿರುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 11ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಶನಿವಾರ ನೀಡಿದೆ.
ಗಂಭೀರ ವಂಚನೆ ತನಿಖಾ ಕಚೇರಿಯತ್ತ ಗೋಯಲ್ ಅವರು ಹೊರಟಿದ್ದ ಸಂದರ್ಭದಲ್ಲಿ ₹538 ಕೋಟಿ ಸಾಲ ಮರು ಪಾವತಿ ಮಾಡಲು ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಕೆನರಾ ಬ್ಯಾಂಕ್ 2022ರ ನವೆಂಬರ್‌ನಲ್ಲಿ ಸಿಬಿಐಗೆ ನೀಡಿದ್ದ ದೂರು ಆಧರಿಸಿ ಜಾರಿ ನಿರ್ದೇಶನಾಲಯವು ಅವರನ್ನು ವಶಕ್ಕೆ ಪಡೆದಿದೆ.
ಗೋಯಲ್, ಪತ್ನಿ ಅನಿತಾ ಹಾಗೂ ಇತರೆ ಸರ್ಕಾರಿ ಅಧಿಕಾರಿಗಳ ಜೊತೆ ಸೇರಿ ವಂಚನೆ ಎಸಗಿದ್ದು, ಪಿತೂರಿ ನಡೆಸಿರುವುದಲ್ಲದೇ ಕ್ರಿಮಿನಲ್ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಬ್ಯಾಂಕ್ ಆರೋಪಿಸಿತ್ತು. ಆ ಮೂಲಕ ಬ್ಯಾಂಕ್‌ಗೆ ₹538 ಕೋಟಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಗೋಯಲ್ ಅವರ ವಿಚಾರಣೆ ನಡೆಸಿ, ಸೆಪ್ಟೆಂಬರ್ 1ರಂದು ಅವರನ್ನು ಅಧಿಕೃತವಾಗಿ ಬಂಧಿಸಲಾಗಿತ್ತು. ಇಂದು ಗೋಯಲ್ ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯವು ಅವರನ್ನು 14 ದಿನ ಕಸ್ಟಡಿಗೆ ಕೋರಿತು. ಆದರೆ, ವಿಶೇಷ ನ್ಯಾಯಾಲಯವು ಗೋಯಲ್ ಅವರನ್ನು 10 ದಿನ ಇ ಡಿ ಕಸ್ಟಡಿಗೆ ನೀಡಿದೆ. ₹7,000 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಎಫ್‌ಐಒ 2019ರಿಂದ ಗೋಯಲ್ ಅವರ ತನಿಖೆ ನಡೆಸುತ್ತಿದೆ.