ಗುಂಪಿನ ವಿರುದ್ಧ ಗುಂಪನ್ನು ಎತ್ತಿಕಟ್ಟುವುದರಿಂದ ಸಾಂವಿಧಾನಿಕ ಏಕತೆ ದುರ್ಬಲವಾಗಲಿದೆ: ನ್ಯಾ. ಪಿ ಕೆ ಮಿಶ್ರಾ

ವಿಭಜನೆಯ ತಂತ್ರವು ಭ್ರಾತೃತ್ವ ಎಂಬ ಸಾಂವಿಧಾನಿಕ ಆದರ್ಶಕ್ಕೆ ಬೆದರಿಕೆಯಾಗಿದೆ ಎಂದು ಅಖಿಲ ಭಾರತೀಯ ಅಧಿವಕ್ತ ಪರಿಷತ್ತಿನ ರಾಷ್ಟ್ರೀಯ ಮಂಡಳಿ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ತಿಳಿಸಿದರು.
National Council Meeting of Akhil Bharatiya Adhivakta Parishad
National Council Meeting of Akhil Bharatiya Adhivakta Parishad
Published on

ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಭ್ರಾತೃತ್ವದ ಅತ್ಯವಶ್ಯಕ ಪಾತ್ರ ಅಥವಾ ಏಕತೆ ಹಾಗೂ ಸಹೋದರತ್ವದ ಅರ್ಥವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಇತ್ತೀಚೆಗೆ ಎತ್ತಿ ತೋರಿಸಿದ್ದಾರೆ.

ಗುಜರಾತ್‌ನಲ್ಲಿ ನಡೆದ ಅಖಿಲ ಭಾರತೀಯ ಅಧಿವಕ್ತ ಪರಿಷತ್ತಿನ ರಾಷ್ಟ್ರೀಯ ಮಂಡಳಿ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

Also Read
ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಕೆ ಯಾದವ್ ಅವರಿಗೆ ವಾಗ್ದಂಡನೆ ವಿಧಿಸಲು ಕಪಿಲ್ ಸಿಬಲ್ ಒತ್ತಾಯ

ಡಿಸೆಂಬರ್ 27 ರಂದು ವಡ್ತಾಲ್ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮ "ಭ್ರಾತೃತ್ವ: ಸಾಂವಿಧಾನಿಕ ಸ್ಫೂರ್ತಿ" ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿತ್ತು. ನ್ಯಾ. ಮಿಶ್ರಾ ಅವರಲ್ಲದೆ, ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಸಮೀರ್ ದವೆ ಅವರು ಕೂಡ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

Also Read
ನ್ಯಾ. ಯಾದವ್ ಭಾಷಣಕ್ಕೆ ಬೆಂಬಲ: ಸಿಎಂ ಯೋಗಿ ಪದಚ್ಯುತಿ ಕೋರಿ ಅಲಾಹಾಬಾದ್ ಹೈಕೋರ್ಟ್‌ಗೆ ಅರ್ಜಿ

ನ್ಯಾ. ಮಿಶ್ರಾ ಅವರ ಭಾಷಣದ ಪ್ರಮುಖ ಸಂಗತಿಗಳು

  • ಗುಂಪಿನ ವಿರುದ್ಧ ಮತ್ತೊಂದು ಗುಂಪನ್ನು ಎತ್ತಿಕಟ್ಟುವ ನಿರೂಪಗಳು ಸಂವಿಧಾನದಲ್ಲಿ ಅಡಕವಾಗಿರುವ ಏಕತೆಯನ್ನು ದುರ್ಬಲಗೊಳಿಸುತ್ತವೆ.

  • ಇಂದಿನ ಸಾಮಾಜಿಕ-ರಾಜಕೀಯ ವಾತಾವರಣದಲ್ಲಿ, ಧರ್ಮ, ಜಾತಿ ಅಥವಾ ಜನಾಂಗದ ಆಧಾರದ ಮೇಲೆ ನಡೆಯುವ ವಿಭಜನೆಯ ಮಾತುಗಳು, ಬೆಳೆಯುತ್ತಿರುವ ಆರ್ಥಿಕ ಅಸಮಾನತೆ ಮತ್ತು ಸಾಮಾಜಿಕ ಅನ್ಯಾಯಗಳು  ಸಹೋದರತ್ವದ ಭಾವಕ್ಕೆ ಪ್ರಮುಖ ಬೆದರಿಕೆಗಳಾಗಿವೆ.

  •  ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರದ ಹೆಚ್ಚಳದಿಂದಾಗಿ ವಿಭಜನೆಯ ಸವಾಲುಗಳು ಹೆಚ್ಚುತ್ತವೆ.

  • ಇಂದಿನ ಧ್ರುವೀಕೃತ ಜಗತ್ತಿನಲ್ಲಿ, ಭ್ರಾತೃತ್ವದ ಪ್ರಸ್ತುತತೆ ಎಂದಿಗಿಂತಲೂ ಹೆಚ್ಚಾಗಿದೆ.

  • ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯದ ಆದರ್ಶಗಳ ನಡುವೆ - ಭ್ರಾತೃತ್ವವು ನಮ್ಮ ಪ್ರಜಾಸತ್ತಾತ್ಮಕ ಸಮಾಜವನ್ನು ಒಗ್ಗೂಡಿಸಿರುವ ಬೆಸುಗೆಯಾಗಿ ಮಿನುಗುತ್ತದೆ. ಭ್ರಾತೃತ್ವವಿಲ್ಲದೆ, ಇತರ ಆದರ್ಶಗಳು ಆಧಾರಸ್ತಂಭ ಕಳೆದುಕೊಳ್ಳುತ್ತವೆ.

  • ವಿಭಜನೆಯ ತಂತ್ರ ಭ್ರಾತೃತ್ವ ಎಂಬ ಸಾಂವಿಧಾನಿಕ ಆದರ್ಶಕ್ಕೆ ಬೆದರಿಕೆಯಾಗಿದೆ. ಸಮುದಾಯಗಳ ನಡುವೆ ಅಪನಂಬಿಕೆ ಸೃಷ್ಟಿಸಿ ಭ್ರಾತೃತ್ವವನ್ನು ದುರ್ಬಲಗೊಳಿಸುತ್ತದೆ. ಸಾಮಾಜಿಕ ಅಶಾಂತಿ ಉಂಟುಮಾಡುವಂತಹ ಏಕತಾನತೆಯ ಅಂಶಗಳು ಮತ್ತು ತಪ್ಪು ಗ್ರಹಿಕೆ ಹರಡಲು ಕಾರಣವಾಗುತ್ತದೆ.

  •  ರಾಜಕೀಯ ನಾಯಕರು ಸಾಮಾಜಿಕ ಅಸ್ಮಿತೆಗಳನ್ನು ಚುನಾವಣಾ ಲಾಭಕ್ಕಾಗಿ ಬಳಸಿದಾಗ, ವಿಭಜನೆ ಇನ್ನಷ್ಟು ಆಳಕ್ಕಿಳಿದು ಸಮಷ್ಠಿ ಪ್ರಜ್ಞೆ ನಿರ್ಮಾಣ ಕಷ್ಟವಾಗುತ್ತದೆ

  • ಆರ್ಥಿಕ ಅಸಮಾನತೆ ಎನ್ನುವುದು ಶಿಕ್ಷಣ, ಆರೋಗ್ಯ ಮತ್ತು ಮೂಲ ಸಂಪನ್ಮೂಲಗಳ ಅಸಮಾನ ಲಭ್ಯತೆಗೆ ಕಾರಣವಾಗುವುದರಿಂದ ಅದು ಆರ್ಥಿಕ ಸಮಸ್ಯೆ ಮಾತ್ರವಲ್ಲದೆ ಸಾಮಾಜಿಕ ಸಮಸ್ಯೆಯೂ ಆಗಿದೆ.

  • ಭ್ರಾತೃತ್ವ ರಕ್ಷಣೆಯಲ್ಲಿ ನ್ಯಾಯಾಂಗದ್ದು ಮಹತ್ವದ ಪಾತ್ರವಾಗಿದ್ದು ಇದರಿಂದ ಎಲ್ಲರಿಗೂ ನ್ಯಾಯ ದೊರಕಿಸಿಕೊಡುವುದು ಸಾಧ್ಯವಾಗುತ್ತದೆ.

  •  ಭ್ರಾತೃತ್ವ ಎಂಬುದು ಒಂದು ಗಮ್ಯಸ್ಥಾನವಲ್ಲ ಬದಲಿಗೆ ಪ್ರಯಾಣ. ಹೆಚ್ಚು ನ್ಯಾಯಯುತ, ಅಂತರ್ಗತ ಮತ್ತು ಸಾಮರಸ್ಯದ ಸಮಾಜದ ಕಡೆಗಿನ ಯಾನ ಅದಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳೋಣ.

  • ಸಂವಿಧಾನದ ಪಾಲಕರಾಗಿ, ನಾವು ಮಾಡುವ ಎಲ್ಲಾ ಕಾರ್ಯದಲ್ಲೂ ಭ್ರಾತೃತ್ವ ಮನೋಭಾವ ಪೋಷಿಸುವ ಗಂಭೀರ ಹೊಣೆಗಾರಿಕೆ ನಮ್ಮ ಮೇಲಿದೆ.

Kannada Bar & Bench
kannada.barandbench.com