RBI and Reliance Capital
RBI and Reliance Capital

ರಿಲಯನ್ಸ್ ಕ್ಯಾಪಿಟಲ್ ವಿರುದ್ಧ ಕಾರ್ಪೊರೆಟ್ ದಿವಾಳಿ ಪ್ರಕ್ರಿಯೆ: ಆರ್‌ಬಿಐ ಮನವಿ ಪರಿಗಣಿಸಿದ ಎನ್‌ಸಿಎಲ್‌ಟಿ

ನ್ಯಾಯಾಂಗ ಸದಸ್ಯ ಪ್ರದೀಪ್ ನರಹರಿ ದೇಶಮುಖ್ ಮತ್ತು ತಾಂತ್ರಿಕ ಸದಸ್ಯ ಕಪಾಲ್ ಕುಮಾರ್ ವೋಹ್ರಾ ಅವರನ್ನೊಳಗೊಂಡ ಪೀಠವು ಈ ಆದೇಶ ಪ್ರಕಟಿಸಿದೆ.
Published on

ದಿವಾಳಿ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಅಡಿಯಲ್ಲಿ ರಿಲಯನ್ಸ್ ಕ್ಯಾಪಿಟಲ್‌ ಲಿಮಿಟೆಡ್‌ (ಆರ್‌ಸಿಎಲ್‌) ವಿರುದ್ಧ ಕಾರ್ಪೊರೆಟ್‌ ದಿವಾಳಿ ಪ್ರಕ್ರಿಯೆಗೆ (ಸಿಐಆರ್‌ಪಿ) ಚಾಲನೆ ನೀಡಲು ಆರ್‌ಬಿಐ ಮಾಡಿದ್ದ ಮನವಿಯನ್ನು ರಾಷ್ಟ್ರೀಯ ಕಂಪೆನಿ ಕಾನೂನು ಮಂಡಳಿ ಮುಂಬೈ ಪೀಠ ಪರಿಗಣಿಸಿದೆ.

ಅರ್ಜಿ ಸಲ್ಲಿಸುವ ದಿನದಂದು ನೀಡಲಾದ ಮಧ್ಯಂತರ ಮೊರೆಟೊರಿಯಂ ಆದೇಶ ಮುಂದುವರೆಯಲಿದೆ ಎಂದು ನ್ಯಾಯಾಂಗ ಸದಸ್ಯ ಪ್ರದೀಪ್ ನರಹರಿ ದೇಶಮುಖ್ ಮತ್ತು ತಾಂತ್ರಿಕ ಸದಸ್ಯ ಕಪಾಲ್ ಕುಮಾರ್ ವೋಹ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.

ಸಾಲ ಮರುಪಾವತಿ ಮಾಡುವಲ್ಲಿ ವಿಫಲವಾಗಿದ್ದ ರಿಲಯನ್ಸ್​ ಕ್ಯಾಪಿಟಲ್ ಕಂಪನಿಯ ಆಡಳಿತ ಮಂಡಳಿಯನ್ನು ಭಾರತೀಯ ರಿಸರ್ವ್​ ಬ್ಯಾಂಕ್ ನ.29ರಂದು ಸೂಪರ್​ಸೀಡ್ (ರದ್ದು) ಮಾಡಿತ್ತು. ನಂತರ ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ವರ ರಾವ್ ವೈ ಅವರನ್ನು ಆರ್‌ಸಿಎಲ್‌ನ ನಿರ್ವಾಹಕರನ್ನಾಗಿ ನೇಮಿಸಲಾಗಿತ್ತು. ಮರುದಿನ ಕರ್ತವ್ಯಗಳ ನಿರ್ವಹಣೆಗಾಗಿ ನಿರ್ವಾಹಕರಿಗೆ ಸಹಾಯ ಮಾಡಲು ಅದು ಮೂವರು ಸದಸ್ಯರನ್ನೊಳಗೊಂಡ ಸಲಹಾ ಸಮಿತಿಯನ್ನು ನೇಮಿಸಿತ್ತು. ಆರ್‌ಬಿಐ ಎನ್‌ಸಿಎಲ್‌ಟಿ ಎದುರು ಡಿ 2ರಂದು ಅರ್ಜಿ ಸಲ್ಲಿಸಿತ್ತು. ದಿವಾಳಿ ಮತ್ತು ದಿವಾಳಿತನ ಸಂಹಿತೆಯಡಿ ಮಧ್ಯಂತರ ಮೊರೆಟೋರಿಯಂ ಅದೇ ದಿನ ಪ್ರಾರಂಭವಾಗಿದ್ದು ಪೀಠ ಇದನ್ನು ಮುಂದುವರೆಸಿತು.

Also Read
ಫ್ಯೂಚರ್‌-ರಿಲಯನ್ಸ್‌ ಒಪ್ಪಂದದ ವಿರುದ್ಧ ಅಮೆಜಾನ್‌ಗೆ ಜಯ; ತುರ್ತು ಮಧ್ಯಸ್ಥಿಕೆ ತೀರ್ಪು ಎತ್ತಿ ಹಿಡಿದ ಸುಪ್ರೀಂ

ಸೋಮವಾರ ನಡೆದ ವಿಚಾರಣೆ ವೇಳೆ, ಆರ್‌ಬಿಐ ಪರವಾಗಿ ಹಾಜರಾದ ಹಿರಿಯ ವಕೀಲ ರವಿ ಕದಮ್, ಐಬಿಸಿಯ ನಿಬಂಧನೆಗಳ ಪ್ರಕಾರ, ಹಣಕಾಸು ಸೇವಾ ಪೂರೈಕೆದಾರರ ವಿರುದ್ಧ ಸಿಐಆರ್‌ಪಿಯನ್ನು ಪ್ರಾರಂಭಿಸುವ ಅಧಿಕಾರ ನಿಯಂತ್ರಕರಿಗೆ ಮಾತ್ರ ಎಂದು ಎನ್‌ಸಿಎಲ್‌ಟಿಗೆ ತಿಳಿಸಿದರು ಎಂಬುದಾಗಿ ತಿಳಿದುಬಂದಿದೆ. ಇತ್ತ ಆರ್‌ಬಿಐ ಸಲ್ಲಿಸಿರುವ ಅರ್ಜಿಯನ್ನು ನಾವು ಬೆಂಬಲಿಸುತ್ತಿದ್ದೇವೆ ಎಂದು ಆರ್‌ಸಿಎಲ್ ದಿವಾಳಿ ಸಂಹಿತೆ ಪ್ರಕ್ರಿಯೆ ಚಾಲನೆಗೆ ಸಮ್ಮತಿಸಿ ನ್ಯಾಯಮಂಡಳಿಗೆ ತಿಳಿಸಿದೆ. ಈ ಮನವಿಯೊಂದಿಗೆ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಮತ್ತು ಕೋಲ್ಕತ್ತಾ ಮೂಲದ ಸ್ರೆಯ್‌ಕಂಪನಿಯ ನಂತರ ದಿವಾಳಿತನ ಘೋಷಿಸಿಕೊಂಡ ಮೂರನೇ ಬ್ಯಾಂಕಿಂಗೇತರ ಹಣಕಾಸು ಕಂಪೆನಿಯಾಗಿ ಆರ್‌ಸಿಎಲ್‌ ಪರಿಗಣಿಸಲ್ಪಟ್ಟಿದೆ.

Kannada Bar & Bench
kannada.barandbench.com