ರಾಷ್ಟ್ರೀಯ ರಕ್ಷಣಾ ಅಕಾಡೆಮಿ: ಮಹಿಳೆಯರು ಇದೇ ವರ್ಷ ಪರೀಕ್ಷೆ ಬರೆಯಲು ಅವಕಾಶ ನೀಡಿರುವ ಆದೇಶ ತೆರವಿಗೆ ಸುಪ್ರೀಂ ನಕಾರ

"ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳ ಆಕಾಂಕ್ಷೆಗಳನ್ನು ಗಮನಿಸುವಾಗ ಕೇಂದ್ರದ ವಾದ ಒಪ್ಪಲು ನಮಗೆ ಕಷ್ಟವಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.
ರಾಷ್ಟ್ರೀಯ ರಕ್ಷಣಾ ಅಕಾಡೆಮಿ: ಮಹಿಳೆಯರು ಇದೇ ವರ್ಷ ಪರೀಕ್ಷೆ ಬರೆಯಲು ಅವಕಾಶ ನೀಡಿರುವ ಆದೇಶ ತೆರವಿಗೆ ಸುಪ್ರೀಂ ನಕಾರ
National Defence Academy

ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆಗಳಿಗೆ ಈ ವರ್ಷ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಆದೇಶವನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ (ಕುಶ್ ಕಲ್ರಾ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ).

ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ (ಎನ್‌ಡಿಎ) ಪ್ರವೇಶಕ್ಕಾಗಿ ಮಹಿಳಾ ಅಭ್ಯರ್ಥಿಗಳ ಪ್ರವೇಶ ಪರೀಕ್ಷೆಯನ್ನು ಅನುಮತಿಸುವ ಅಧಿಸೂಚನೆಯನ್ನು ಮುಂದಿನ ವರ್ಷ ಅಂದರೆ ಮೇ 2022 ರಲ್ಲಿ ಹೊರಡಿಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವಾಲಯ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು.

ಎನ್‌ಡಿಎಯಲ್ಲಿ ಮಹಿಳಾ ಅಭ್ಯರ್ಥಿಗಳಿಗಾಗಿ ತ್ವರಿತಗತಿಯಲ್ಲಿ ಪಠ್ಯಕ್ರಮ ರೂಪಿಸಲು ರಕ್ಷಣಾ ಪಡೆಯಲ್ಲಿ ಅಧ್ಯಯನ ಸಮಿತಿಯೊಂದನ್ನು ರಚಿಸಲಾಗಿದ್ದು ಮಹಿಳಾ ಅಭ್ಯರ್ಥಿಗಳ ತರಬೇತಿಗಾಗಿ ಭವಿಷ್ಯದ ಯೋಜನೆ ರೂಪಿಸಲು ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಆದರೆ ಅಭ್ಯರ್ಥಿಗಳಿಗೆ ಈಗಾಗಲೇ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯಲು ಮಹಿಳೆಯರಿಗೆ ಅವಕಾಶ ನೀಡುವ ತನ್ನ ಹಿಂದಿನ ಆದೇಶ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ, “ಪರೀಕ್ಷೆಗೆ ಇಚ್ಛಿಸುವ ಅಭ್ಯರ್ಥಿಗಳ ಆಕಾಂಕ್ಷೆಗಳನ್ನು ಗಮನಿಸುವಾಗ ಕೇಂದ್ರದ ವಾದ ಒಪ್ಪಲು ನಮಗೆ ಕಷ್ಟವಾಗುತ್ತದೆ. ಗಡಿ ಮತ್ತು ದೇಶದ ಒಳಭಾಗದಲ್ಲಿ ಸಶಸ್ತ್ರ ಪಡೆಗಳು ತುಂಬಾ ತುರ್ತು ಸ್ಥಿತಿಯಲ್ಲಿರುತ್ತವೆ. ಅಂತಹ ತರಬೇತಿ ಇಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದು ನಮಗೆ ಖಚಿತವಾಗಿದೆ. ಆದ್ದರಿಂದ ನಮ್ಮಿಂದ ನೀಡಲಾದ ಆದೇಶವನ್ನು ನಾವು ತೆರವುಗೊಳಿಸುವುದಿಲ್ಲ. ನಾವು ಪ್ರಕರಣವನ್ನು ಬಾಕಿ ಉಳಿಸುತ್ತಿದ್ದು ಇದರಿಂದ ಸಂದರ್ಭಗಳು ಉದ್ಭವಿಸಿದಂತೆ ನಿರ್ದೇಶನ ನೀಡಲು ಸಾಧ್ಯವಾಗುತ್ತದೆ” ಎಂದು ಪೀಠ ತಿಳಿಸಿದೆ.

ಅರ್ಜಿಯನ್ನು ಬಾಕಿ ಇರಿಸಲಾಗಿದ್ದು ಅಗತ್ಯ ಬಿದ್ದರೆ ಮುಂದಿನ ನಿರ್ದೇಶನಗಳಿಗಾಗಿ ಜನವರಿ 2022ರಲ್ಲಿ ವಿಚಾರಣೆ ನಡೆಸಲಾಗುವುದು. ಪ್ರಸಕ್ತ ಸಾಲಿನ ಪರೀಕ್ಷೆ ನವೆಂಬರ್‌ ಮಧ್ಯ ಭಾಗದಲ್ಲಿ ನಡೆಯಲಿದ್ದು ಫಲಿತಾಂಶ ಪ್ರಕಟಣೆಗೆ ಸುಮಾರು ಎರಡು ತಿಂಗಳು ಹಿಡಿಯುತ್ತದೆ. ಮುಂದಿನ ವರ್ಷ ಮಹಿಳೆಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವ ಬದಲು, ಕೇಂದ್ರ ಸರ್ಕಾರ ಮಹಿಳಾ ಅಭ್ಯರ್ಥಿಗಳಿಗಾಗಿ ಏನನ್ನಾದರೂ ಮಾಡಲು ಯತ್ನಿಸಬೇಕು ಎಂದು ಪೀಠ ಹೇಳಿದೆ.

ಪರೀಕ್ಷೆಯನ್ನು ತೆಗೆದುಕೊಳ್ಳಲು ಮುಂದಾಗಿರುವ ವಿದ್ಯಾರ್ಥಿಗಳಿಗೆ ನಾವು ಯಾವ ಉತ್ತರವನ್ನು ನೀಡಬಹುದು? ಆದೇಶವನ್ನು ತೆರವುಗೊಳಿಸುವಂತೆ ನಮ್ಮನ್ನು ಕೇಳಬೇಡಿ. ನೀವು ಕೆಲಸ ಮುಂದುವರಿಸಿ. ಫಲಿತಾಂಶವನ್ನು ನೋಡೋಣ. ಜೊತೆಗೆ ಎಷ್ಟು ಮಹಿಳೆಯರು ಪರೀಕ್ಷೆ ಬರೆಯುತ್ತಾರೆ ಎಂಬುದನ್ನು ನೋಡೋಣ," ಎಂಬುದಾಗಿ ಸುಪ್ರೀಂಕೋರ್ಟ್‌ ತಿಳಿಸಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಚಿನ್ಮಯ್ ಪ್ರದೀಪ್ ಶರ್ಮಾ ಮತ್ತು ಅಡ್ವೋಕೇಟ್-ಆನ್-ರೆಕಾರ್ಡ್ ಮೋಹಿತ್ ಪಾಲ್ ಮತ್ತು ನ್ಯಾಯವಾದಿ ಸುನೈನಾ ಫುಲ್ ವಾದಿಸಿದರು. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಹಾಜರಾದರು.

ಕಳೆದ ತಿಂಗಳು ಮಧ್ಯಂತರ ಆದೇಶವೊಂದನ್ನು ಜಾರಿಗೊಳಿಸಿದ್ದ ಸುಪ್ರೀಂಕೋರ್ಟ್, ಸೆಪ್ಟೆಂಬರ್ 5ರಂದು ನಡೆದ ಈ ವರ್ಷದ ಎನ್‌ಡಿಎ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಗಳು ಹಾಜರಾಗಲು ಅವಕಾಶ ನೀಡಿತ್ತು.

Related Stories

No stories found.