
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಗಾಂಧಿ ಹಾಗೂ ಉಳಿದ ಐವರ ವಿರುದ್ಧದ ಹಣ ವರ್ಗಾವಣೆ ಆರೋಪ ಸಂಜ್ಞೇಯ ಪರಿಗಣಿಸಬೇಕೆ ಎಂಬ ಕುರಿತು ದೆಹಲಿ ನ್ಯಾಯಾಲಯ ಸೋಮವಾರ ತೀರ್ಪು ಕಾಯ್ದಿರಿಸಿದೆ [ಜಾರಿ ನಿರ್ದೇಶನಾಲಯ ಮತ್ತು ಸೋನಿಯಾ ಗಾಂಧಿ ಇನ್ನಿತರರ ನಡುವಣ ಪ್ರಕರಣ].
ಜುಲೈ 29 ರಂದು ಆದೇಶ ಪ್ರಕಟಿಸಲಾಗುವುದು ಎಂದು ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿನ ಭ್ರಷ್ಟಾಚಾರ ತಡೆ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ತಿಳಿಸಿದ್ದಾರೆ.
ಗಾಂಧಿ ಕುಟುಂಬದವರಲ್ಲದೆ ಸುಮನ್ ದುಬೆ, ಸ್ಯಾಮ್ ಪಿತ್ರೋಡಾ, ಸುನಿಲ್ ಭಂಡಾರಿ ಹಾಗೂ ಯಂಗ್ ಇಂಡಿಯನ್, ಡೋಟೆಕ್ಸ್ ಮರ್ಚಂಡೈಸ್ ಕೂಡ ಇ ಡಿ ಪ್ರಕರಣದ ಆರೋಪಿಗಳನ್ನಾಗಿ ಹೆಸರಿಸಿತ್ತು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಒಡೆತನ ಹೊಂದಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ (ಎಜೆಎಲ್) ಕಾಂಗ್ರೆಸ್ ಪಕ್ಷ ₹ 90 ಕೋಟಿಯಷ್ಟು ಸಾಲ ನೀಡಿತ್ತು. ಯಂಗ್ ಇಂಡಿಯನ್ ಸಂಸ್ಥೆ ಕಾಂಗ್ರೆಸ್‌ಗೆ ಕೇವಲ ₹50 ಲಕ್ಷ ಹಣ ನೀಡಿ ಎಜೆಎಲ್ ಕಾಂಗ್ರೆಸ್‌ಗೆ ನೀಡಬೇಕಿದ್ದ ₹ 90 ಕೋಟಿಯಷ್ಟು ಹಣ ಹಿಂಪಡೆಯಬೇಕಾದ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಆ ಮೂಲಕ ಸುಮಾರು ₹ 2,000 ಕೋಟಿಗೂ ಅಧಿಕ ಮಾರುಕಟ್ಟೆ ಮೌಲ್ಯದ ಆಸ್ತಿಯನ್ನು ಯಂಗ್ ಇಂಡಿಯನ್ ಸಂಸ್ಥೆಯು ತನ್ನ ವಶಕ್ಕೆ ಪಡೆಯಲು ಅವ್ಯವಹಾರ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಷೇರುಗಳ ಮೌಲ್ಯ, ಎಜೆಎಲ್‌ನ ಸ್ಥಿರ ಆಸ್ತಿಗಳು ಮತ್ತು ಅವುಗಳಿಂದ ದೊರೆಯುವ ಬಾಡಿಗೆಯನ್ನು ಅಪರಾಧದ ಗಳಿಕೆ ಎಂದು ಇ ಡಿ ದೂರಿತ್ತು.
ಆದರೆ ಆಸ್ತಿಯನ್ನು ಬಳಸದಿದ್ದರೂ ಅಥವಾ ಅಂದಾಜಿಸದಿದ್ದರೂ ಹಣ ವರ್ಗಾವಣೆ ಆರೋಪ ಮಾಡಿರುವುದು ವಿಚಿತ್ರ ಮತ್ತು ಹಿಂದೆಂದೂ ಕೇಳರಿಯದ ಪ್ರಕರಣ ಎಂದು ಗಾಂಧಿ ಕುಟುಂಬ ವಾದಿಸಿತ್ತು.
ಸಾಲಕ್ಕೆ ಬದಲಾಗಿ ಎಜೆಎಲ್‌ನ ಆಸ್ತಿಗಳನ್ನು ಕಬಳಿಸಲು ಯಂಗ್ ಇಂಡಿಯನ್ ಸಂಸ್ಥೆಯನ್ನು ಬಳಸಿಕೊಳ್ಳಲಾಗಿದೆ ಎಂಬ ಜಾರಿ ನಿರ್ದೇಶನಾಲಯದ ಆರೋಪಗಳನ್ನು ಕಾಂಗ್ರೆಸ್ ನಾಯಕರು ನಿರಾಕರಿಸಿದ್ದರು. ಎಜೆಎಲ್ ಕಂಪೆನಿಯನ್ನು ಸಾಲ ಮುಕ್ತಗೊಳಿಸಲು ಈ ಸಾಲ ನೀಡಲಾಗಿತ್ತು ಎಂದು ಅವರು ವಾದಿಸಿದ್ದರು.
ಸೋನಿಯಾ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಮತ್ತು ಗಾಂಧಿ ಕುಟುಂಬದ ನಿಯಂತ್ರಣದಲ್ಲಿರುವ - ಯಂಗ್ ಇಂಡಿಯನ್ ಲಿಮಿಟೆಡ್ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಖಾಸಗಿ ದೂರು ದಾಖಲಿಸಿ ವಂಚನೆ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆ ದ್ರೋಹ ಹಾಗೂ ಆಸ್ತಿ ದುರುಪಯೋಗದ ಆರೋಪ ಮಾಡುವ ಮೂಲಕ ಪ್ರಕರಣ ಬಹಿರಂಗಗೊಂಡಿತ್ತು.
ಕಳೆದ ಏಪ್ರಿಲ್ 15 ರಂದು ಗಾಂಧಿ ಕುಟುಂಬ, ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಹಾಗೂ ಇತರರ ವಿರುದ್ಧ ಇ ಡಿ ಪ್ರಾಸಿಕ್ಯೂಷನ್ ದೂರು ದಾಖಲಿಸಿತ್ತು.
ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್ ವಿ ರಾಜು , ವಿಶೇಷ ವಕೀಲ ಜೊಹೆಬ್ ಹೊಸೈನ್ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್ ಕೆ ಮಟ್ಟಾ ಮತ್ತವರ ತಂಡ ಇ ಡಿ ಪರವಾಗಿ ವಾದ ಮಂಡಿಸಿತ್ತು. ಸೋನಿಯಾ ಗಾಂಧಿ ಅವರನ್ನು ಡಾ. ಅಭಿಷೇಕ್ ಮನು ಸಿಂಘ್ವಿ ಹಾಗೂ ಅವರ ಕಾನೂನು ತಂಡ ಪ್ರತಿನಿಧಿಸಿತ್ತು. ಹಿರಿಯ ವಕೀಲ ಆರ್.ಎಸ್. ಚೀಮಾ ಅವರ ತಂಡ ರಾಹುಲ್ ಪರ ವಾಗಿ ವಾದ ಮಂಡಿಸಿತ್ತು.
ಸುಮನ್ ದುಬೆ ಪರ ವಕೀಲರಾದ ಸುಶೀಲ್ ಬಜಾಜ್, ಅಲ್ಕಾ ಚೋಹರ್, ಆಶಿಶ್ ಚೋಹರ್ ಮತ್ತು ಅಕ್ಷ್ಯ ನಾಗರಾಜನ್; ಸ್ಯಾಮ್ ಪಿತ್ರೋಡಾ ಪರವಾಗಿ ವಕೀಲರಾದ ಕುಬೇರ್ ಬೋಧ್, ಮನಿಕಾ ಸಿಂಗ್ ಅವಿಜಿತ್ ಮತ್ತು ಸೋಮ್ಯಾ ಧವನ್; ಯಂಗ್ ಇಂಡಿಯನ್ ಪರ ವಕೀಲರಾದ ನಕುಲ್ ಗಾಂಧಿ, ಆಕಾಶ್ ಸಿಂಗ್, ಅಮಿತ್ ಮತ್ತು ಸಂಜೀವನಿ ಅವರೊಂದಿಗೆ ಹಿರಿಯ ವಕೀಲ ಮಾಧವ್ ಖುರಾನಾ; ಡೋಟೆಕ್ಸ್ ಮರ್ಚಂಡೈಸ್ ಪರವಾಗಿ ಹಿರಿಯ ವಕೀಲ ಪ್ರಮೋದ್ ಕುಮಾರ್ ದುಬೆ ಮತ್ತವರ ತಂಡ; ಸುನಿಲ್ ಭಂಡಾರಿ ಪರ ವಕೀಲರಾದ ಸೌಜನ್ಯಾ ಶಂಕರನ್, ಸಿದ್ಧಾರ್ಥ್ ಸತಿಜಾ, ಆಕಾಶ್ ಸಚನ್ ಮತ್ತು ಅನುಕಾ ಭಚಾವತ್ ವಾದ ಮಂಡಿಸಿದ್ದರು.