ನ್ಯಾಷನಲ್ ಹೆರಾಲ್ಡ್: ಗಾಂಧಿ ಕುಟುಂಬಕ್ಕೆ ಎಫ್ಐಆರ್ ಪ್ರತಿ ಒದಗಿಸುವಂತೆ ನೀಡಿದ್ದ ಆದೇಶಕ್ಕೆ ಸೆಷನ್ಸ್ ನ್ಯಾಯಾಲಯ ತಡೆ

ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಶ್ನಿಸಿದ ದೆಹಲಿ ಪೊಲೀಸರು ಇದು ನ್ಯಾಯಾಂಗ ಅತಿಕ್ರಮಣ ಎಂದರು.
Rahul Gandhi, Sonia Gandhi and National Herald
Rahul Gandhi, Sonia Gandhi and National Herald Facebook
Published on

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ , ಸೋನಿಯಾ ಗಾಂಧಿ ಮತ್ತಿತರರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ನ ಪ್ರತಿಯನ್ನು ಆರೋಪಿಗಳಿಗೆ ನೀಡುವಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಎರಡು ದಿನಗಳ ಬಳಿಕ ಸೆಷನ್ಸ್‌ ನ್ಯಾಯಾಲಯ ತಡೆ ನೀಡಿದೆ.

ಅಕ್ಟೋಬರ್ 3ರಂದು ದೆಹಲಿ ಪೊಲೀಸ್‌ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಎಫ್‌ಐಆರ್ ದಾಖಲಿಸಿತ್ತು.  ವಂಚನೆ, ಆಸ್ತಿ ದುರುಪಯೋಗ ಮತ್ತು ಕ್ರಿಮಿನಲ್ ವಿಶ್ವಾಸ ದ್ರೋಹ ಮತ್ತು ಕ್ರಿಮಿನಲ್ ಪಿತೂರಿ ಕೃತ್ಯಗಳಿಳಿಗೆ ಸಂಬಂಧಿಸಿದಂತೆ ಗಾಂಧಿ ಕುಟುಂಬ, ಸ್ಯಾಮ್ ಪಿತ್ರೋಡಾ, ಸುಮನ್ ದುಬೆ, ಯಂಗ್ ಇಂಡಿಯನ್ ಮತ್ತಿತರರನ್ನು ಆರೋಪಿಗಳಾಗಿ ಹೆಸರಿಸಿತ್ತು.  

Also Read
ನ್ಯಾಷನಲ್ ಹೆರಾಲ್ಡ್ ಪ್ರಕರಣ: ರಾಹುಲ್ ಮತ್ತು ಸೋನಿಯಾ ಗಾಂಧಿ ವಿರುದ್ಧ ಇ ಡಿ ಆರೋಪಪಟ್ಟಿ

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಸೆಕ್ಷನ್ 66 (2) ರ ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಒದಗಿಸಿದ ಮಾಹಿತಿ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಬಗ್ಗೆ ಇಡಿ ಈಗಾಗಲೇ ತನಿಖೆ ನಡೆಸುತ್ತಿದೆ. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಕ್ರಿಮಿನಲ್ ದೂರಿನ ಮೇರೆಗೆ ನ್ಯಾಯಾಲಯ ತೆಗೆದುಕೊಂಡಿದ್ದ ಸಂಜ್ಞೇಯ ಆದೇಶ ಆಧರಿಸಿ ತನಿಖೆ ನಡೆಯುತ್ತಿದೆ.  

ನ್ಯಾಯಾಲಯದ ದಾಖಲೆಗಳ ಪ್ರಕಾರ, ಅಕ್ಟೋಬರ್ 4ರಂದು ಪೊಲೀಸರು ಅಡಿಷನಲ್‌ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್  ನ್ಯಾಯಾಲಯಕ್ಕೆ ಎಫ್‌ಐಆರ್‌ ಪ್ರತಿ ಸಲ್ಲಿಸಿದ್ದರು. ಎರಡು ದಿನಗಳ ನಂತರ, ಅಡಿಷನಲ್‌ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್  ನ್ಯಾಯಾಲಯ ಆರೋಪಿಗಳಿಗೆ ಎಫ್‌ಐಆರ್‌ ಪ್ರತಿ ಒದಗಿಸುವಂತೆ ಪೊಲೀಸರಿಗೆ ಸೂಚಿಸಿತ್ತು.

ಆದರೆ ಅಕ್ಟೋಬರ್ 8 ರಂದು ಪೊಲೀಸರು ಈ ಆದೇಶವನ್ನು ಪ್ರಶ್ನಿಸಿದರು. ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರೆದುರು ಪಟ್ಟಿ ಮಾಡಲಾಯಿತು.

Also Read
ನ್ಯಾಷನಲ್ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣ: ರಾಹುಲ್, ಸೋನಿಯಾ ಗಾಂಧಿಗೆ ದೆಹಲಿ ನ್ಯಾಯಾಲಯ ನೋಟಿಸ್

ಪೊಲೀಸರ ಪರವಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ಅತುಲ್ ಶ್ರೀವಾಸ್ತವ ವಾದ ಮಂಡಿಸಿದರು. ಮ್ಯಾಜಿಸ್ಟ್ರೇಟ್ ಆದೇಶಗಳು ಯಾವುದೇ ಕಾನೂನು ನಿಬಂಧನೆಗಳನ್ನು ಉಲ್ಲೇಖಿಸಿಲ್ಲ. ಇದು ಬಹುಶಃ ನ್ಯಾಯಾಂಗ ಅತಿಕ್ರಮಣದ ಪ್ರಕರಣ ಎಂದು ವಾದಿಸಿದರು.

ಇಒಡಬ್ಲ್ಯೂ ಪರ ಹಾಜರಾದ ಸರ್ಕಾರಿ ವಿಶೇಷ  ಅಭಿಯೋಜಕ ಜೊಹೆಬ್ ಹೊಸೇನ್ ಅವರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನಿರ್ದೇಶನಗಳು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದ್ದು  ಯಾವುದೇ ಆರೋಪಿಗಳು ಎಫ್‌ಐಆರ್‌ ಪ್ರತಿ ಒದಗಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿಲ್ಲ ಎಂದು ಹೇಳಿದರು. ಈ ವಾದಗಳನ್ನು ಆಲಿಸಿದ ನಂತರ, ಸೆಷನ್ಸ್ ನ್ಯಾಯಾಧೀಶರು ಮ್ಯಾಜಿಸ್ಟ್ರೇಟ್ ಆದೇಶಕ್ಕೆ ತಡೆ ನೀಡಿದರು. ಪ್ರಕರಣದ ಮುಂದಿನ ವಿಚಾರಣೆ  ಡಿಸೆಂಬರ್ 15ರಂದು ನಡೆಯಲಿದೆ.

Kannada Bar & Bench
kannada.barandbench.com