ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷ ಡಾ. ಅನಿಲ್ ಖುರಾನಾ ನೇಮಕ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್‌

ಅಧ್ಯಕ್ಷರಾಗಲು ಹೋಮಿಯೋಪತಿ ಕ್ಷೇತ್ರದಲ್ಲಿ ಕನಿಷ್ಠ 20 ವರ್ಷದ ಸೇವಾನುಭವ ಹೊಂದಿರಬೇಕು. ಆ 20 ವರ್ಷಗಳಲ್ಲಿ 10 ವರ್ಷ ಹೋಮಿಯೋಪತಿ ಮತ್ತದರ ಶಿಕ್ಷಣಕ್ಕೆ ಸಂಬಂಧಿಸಿದ ಅಭಿವೃದ್ಧಿಗೆ ಶ್ರಮಿಸಿರಬೇಕು ಎಂದು ಕಾಯಿದೆ ಹೇಳುತ್ತದೆ ಎಂದ ನ್ಯಾಯಾಲಯ.
Karntaka HC and Justice N S Sanjay Gowda
Karntaka HC and Justice N S Sanjay Gowda

ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷರನ್ನಾಗಿ ಡಾ. ಅನಿಲ್ ಖುರಾನಾ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ 2021ರ ಜುಲೈ 5ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದ್ದು, ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.

ಡಾ. ಅನಿಲ್ ಖುರಾನಾ ಅವರನ್ನು ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಆಯುಷ್ ಇಲಾಖೆಯ ನಿವೃತ್ತ ನಿರ್ದೇಶಕ ಡಾ. ಅಮರಗೌಡ ಎಲ್. ಪಾಟೀಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್ ಎಸ್ ಸಂಜಯಗೌಡ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಆಯೋಗದ ಅಧ್ಯಕ್ಷರಾಗಲು ಹೋಮಿಯೋಪತಿ ಕ್ಷೇತ್ರದಲ್ಲಿ ಕನಿಷ್ಠ 20 ವರ್ಷದ ಸೇವಾನುಭವ ಹೊಂದಿರಬೇಕು. ಆ 20 ವರ್ಷಗಳಲ್ಲಿ ಕನಿಷ್ಠ 10 ವರ್ಷಗಳ ಕಾಲ ಹೋಮಿಯೋಪತಿ ಮತ್ತದರ ಶಿಕ್ಷಣಕ್ಕೆ ಸಂಬಂಧಿಸಿದ ಅಭಿವೃದ್ಧಿ, ಬೆಳವಣಿಗೆ, ಆರೋಗ್ಯ ಸೇವೆ ಒದಗಿಸುವ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರಬೇಕು ಎಂದು ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಕಾಯಿದೆ-2020ರ ಸೆಕ್ಷನ್ 4(2) ಹೇಳುತ್ತದೆ. ಕಾಯಿದೆ ಅನ್ವಯ ಡಾ. ಖುರಾನಾ ಅಂತಹ ಸೇವಾನುಭವ ಹೊಂದಿಲ್ಲ ಮತ್ತು ಇಲಾಖಾ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿಲ್ಲ. ಹೀಗಾಗಿ, ಅವರ ನೇಮಕಾತಿ ಕಾಯಿದೆಗೆ ವಿರುದ್ಧವಾಗಿದೆ ಎಂದಿರುವ ನ್ಯಾಯಾಲಯವು ನೇಮಕಾತಿ ರದ್ದುಪಡಿಸಿದೆ.

ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷರ ನೇಮಕಾತಿಗೆ ಕಾಯಿದೆ ಪ್ರಕಾರ ಹೊಸದಾಗಿ ಪ್ರಕ್ರಿಯೆ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಇದೇ ವೇಳೆ ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಮೆಡಿಕಲ್ ಅಸೆಸ್‌ಮೆಂಟ್ ಆ್ಯಂಡ್ ರೇಟಿಂಗ್ ಬೋರ್ಡ್‌ನ ಅಧ್ಯಕ್ಷರನ್ನಾಗಿ ಡಾ. ಕೆ ಆರ್ ಜನಾರ್ದನ ನಾಯರ್ ಅವರನ್ನು ನೇಮಕ ಮಾಡಿದ್ದನ್ನು ಪ್ರಶ್ನಿಸಿ ಡಾ. ಅಮರಗೌಡ ಎಲ್. ಪಾಟೀಲ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಯನ್ನು ವಜಾಗೊಳಿಸಿರುವ ಪೀಠವು ಡಾ. ನಾಯರ್ ನೇಮಕಾತಿ ಕ್ರಮಬದ್ಧವಾಗಿದೆ ಎಂದಿದೆ.

Related Stories

No stories found.
Kannada Bar & Bench
kannada.barandbench.com