ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ಹೊರಡಿಸಿರುವ ಟ್ವಿಟರ್ ಖಾತೆಗಳ ನಿರ್ಬಂಧ ಪ್ರಶ್ನಿಸಿ ಟ್ವಿಟರ್ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿ ಕೇಂದ್ರ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿದೆ.
ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಹಾಗೂ ದೊಂಬಿ (ಲಿಂಚಿಂಗ್) ಮತ್ತು ಗುಂಪು ದೌರ್ಜನ್ಯ ನಿಯಂತ್ರಿಸುವ ಉದ್ದೇಶದಿಂದ ಕೆಲವು ಖಾತೆಗಳನ್ನು ನಿರ್ಬಂಧಿಸುವಂತೆ ಟ್ವಿಟರ್‌ಗೆ ನಿರ್ಬಂಧ ಆದೇಶ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ಮುಕ್ತ, ಸುರಕ್ಷಿತ, ನಂಬಿಕಸ್ಥ ಮತ್ತು ಹೊಣೆಗಾರಿಕೆ ಹೊಂದಿದ ಇಂಟರ್‌ನೆಟ್ ವ್ಯವಸ್ಥೆಯನ್ನು ಜನರಿಗೆ ನೀಡಲು ಸರ್ಕಾರ ಬದ್ಧವಾಗಿದ್ದು, ಮಾಹಿತಿ ನಿರ್ಬಂಧಿಸುವ ಸರ್ಕಾರದ ಅಧಿಕಾರವು ಸೀಮಿತ ವ್ಯಾಪ್ತಿ ಹೊಂದಿದೆ ಎಂದು ಒತ್ತಿ ಹೇಳಿದೆ.
ಸುಳ್ಳು ಸುದ್ದಿ ಮತ್ತು ಉದ್ದೇಶಪೂರ್ವಕ ಅಸಂಬದ್ಧ ಮಾಹಿತಿ ಹಂಚಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಟ್ವಿಟರ್‌ನಂಥ ವೇದಿಕೆಗಳು ಪರಿಣಾಮಕಾರಿ ಕ್ರಮಕೈಗೊಳ್ಳುತ್ತಿಲ್ಲ. “ದೇಶದ ಸಮಗ್ರತೆ ಮತ್ತು ಸಾರ್ವಭೌಮತೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯು ಹೆಚ್ಚಳವಾಗುತ್ತಿದೆ” ಎಂದು ಕೇಂದ್ರ ಸರ್ಕಾರ ಹೇಳಿದೆ.
ಇಂಥ ವೇದಿಕೆಗಳನ್ನು ದೇಶ ವಿರೋಧಿ ಮತ್ತು ವಿದೇಶದಲ್ಲಿರುವ ಶತ್ರುಗಳು ಭಾರತ ವಿರೋಧಿ ಅಪಪ್ರಚಾರಕ್ಕೆ ಬಳಕೆ ಮಾಡಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕತೆಯಲ್ಲಿ ಬಿರುಕು ಮೂಡಿಸುವುದು ಮತ್ತು ದೇಶದಲ್ಲಿ ಅಸ್ಥಿರತೆ ಉಂಟು ಮಾಡಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಆರಂಭಿಕ ಹಂತದಲ್ಲಿ ತಪ್ಪು ಮಾಹಿತಿಯನ್ನು ನಿರ್ಬಂಧಿಸುವುದು ಅತ್ಯಗತ್ಯ ಎಂದು ಕೇಂದ್ರ ಸರ್ಕಾರ ವಾದಿಸಿದೆ.
ಹಲವು ವರ್ಷಗಳ ಕಾಲ ಟ್ವಿಟರ್ ಸರ್ಕಾರದ ಆದೇಶವನ್ನು ಪಾಲಿಸಿಲ್ಲ. ಪದೇಪದೇ ಎಚ್ಚರಿಸಿದ ಬಳಿಕ ಮತ್ತು ಷೋಕಾಸ್ ನೋಟಿಸ್ ಜಾರಿ ಮಾಡಿದ ಬಳಿಕ ಕೇಂದ್ರ ಸರ್ಕಾರದ ನಿರ್ಬಂಧ ಆದೇಶವನ್ನು ಟ್ವಿಟರ್ ಪಾಲಿಸಿದೆ.
ನಿರ್ಬಂಧ ಆದೇಶಗಳು ತಮ್ಮ ಮೌಲ್ಯ ಕಳೆದುಕೊಳ್ಳುವವರೆಗೆ ಮತ್ತು ಐಟಿ ಕಾಯಿದೆ ಸೆಕ್ಷನ್ 69ಎ ಅಡಿ ಪ್ರಸ್ತಾಪಿಸಿದ ವಿಚಾರವು ವೈರಲ್ ಆಗಿ ಇತರೆ ವೇದಿಕೆಗಳಿಗೂ ವ್ಯಾಪಿಸುವವರೆಗೂ ಯಾವುದೇ ಕ್ರಮಕೈಗೊಳ್ಳದೇ ಟ್ವಿಟರ್ ಉದ್ದೇಶಪೂರ್ವಕವಾಗಿ ಸರ್ಕಾರದ ಆದೇಶವನ್ನು ಪಾಲಿಸಿಲ್ಲ ಅಥವಾ ವಿಳಂಬ ಮಾಡಿದೆ ಎಂದು ಆಕ್ಷೇಪಿಸಲಾಗಿದೆ.
ಮೊದಲಿಗೆ ಆದೇಶ ಪಾಲಿಸದೇ ವಿಳಂಬ ಮಾಡುವ ನೀತಿ ಅನುಸರಿಸಿದ ಟ್ವಿಟರ್, ಷೋಕಾಸ್ ನೋಟಿಸ್ ನೀಡಿದ ಬಳಿಕ ತಕ್ಷಣ ಆದೇಶ ಪಾಲಿಸಿದೆ. ಕೊನೆಗೆ ನ್ಯಾಯಿಕ ರಕ್ಷಣೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ ಎಂದು ಕೇಂದ್ರ ಸರ್ಕಾರ ವಾದಿಸಿದೆ.
ಪ್ರಸ್ತಾಪಿಸಲಾದ ಆಕ್ಷೇಪಾರ್ಹ ವಿಚಾರಗಳು ರಾಷ್ಟ್ರೀಯ ಹಿತಾಸಕ್ತಿ ಅಥವಾ ಸಾರ್ವಜನಿಕ ಸುವ್ಯವಸ್ಥೆ, ಭಾರತ ವಿರೋಧಿ, ದೇಶದ್ರೋಹಿ ಮತ್ತು ದೌರ್ಜನ್ಯಕ್ಕೆ ಎಡೆಮಾಡಿಕೊಡಬಹುದಾದ ಧಾರ್ಮಿಕ ವಿಚಾರಗಳನ್ನು ಒಳಗೊಂಡಿವೆ. ಹೀಗಾಗಿ, ಬ್ಲಾಕ್ ಮಾಡದೆ ನೋಟಿಸ್ ನೀಡುವ ಮೂಲಕ ಬಳಕೆದಾರರಿಗೆ ಇದನ್ನು ತಿಳಿಸುವುದು ಮತ್ತಷ್ಟು ಕೆಟ್ಟದ್ದಕ್ಕೆ ನಾಂದಿ ಹಾಡುತ್ತದೆ. ಇದರಿಂದ ಬಳಕೆದಾರರು ಅನಾಮಧೇಯರಾಗಿ ಹೆಚ್ಚು ಇಂಥ ಆಕ್ಷೇಪಾರ್ಹ ಮಾಹಿತಿ ಹಂಚಿಕೆ ಮಾಡಬಹುದು ಎಂದು ಸರ್ಕಾರ ವಿವರಿಸಿದೆ.
ಜಾಗತಿಕ ಮಟ್ಟದಲ್ಲಿ ಟ್ವಿಟರ್ ತನ್ನ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ವಿಚಾರಗಳನ್ನು (ಕಂಟೆಂಟ್) ನೋಟಿಸ್ ನೀಡುವುದಕ್ಕೂ ಮುನ್ನವೇ ಅಮಾನತು ಮಾಡುತ್ತದೆ. ಇಲ್ಲಿ ಉಲ್ಲಂಘನೆಯನ್ನು ಸರಿಪಡಿಸಲಾಗಲಿ ಅಥವಾ ಸರಿಪಡಿಸಿಕೊಳ್ಳಲು ಅವಕಾಶವನ್ನಾಗಲಿ ನೀಡುವುದಿಲ್ಲ. ಆ ಮೂಲಕ ಟ್ವಿಟರ್ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ತಗಾದೆ ಎತ್ತಿದೆ.
ಸೂಕ್ಷ್ಮ ವಿಚಾರಗಳು ಹಾಗೂ ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಅಭಿಪ್ರಾಯ ಹಂಚಿಕೊಳ್ಳಲಾಗುತ್ತದೆ. ನ್ಯಾಯಸಮ್ಮತ ಅಭಿಪ್ರಾಯಕ್ಕೆ ಪ್ರಜಾಪ್ರಭುತ್ವದಲ್ಲಿ ಒಪ್ಪಿಗೆ ಇದ್ದರೂ ವ್ಯಂಗ್ಯದ ರೂಪದಲ್ಲಿನ ಟ್ವೀಟ್‌ಗಳು ಮತ್ತು ಮಾಹಿತಿಗಳು ಟ್ವಿಟರ್‌ನಲ್ಲಿ ವ್ಯಾಪಕವಗಿವೆ. “ಇತರೆ ಸಾಮಾಜಿಕ ಮಾಧ್ಯಮಗಳಿಗೆ ಹೋಲಿಕೆ ಮಾಡಿದರೆ ಸೀಮಿತ ಪದ ಮಿತಿ ಹೊಂದಿರುವ ಟ್ವಿಟರ್ ವ್ಯಾಪಕವಾಗಿ ತಪ್ಪು ಮಾಹಿತಿ ಪಸರಿಸಿರುವ ಶಕ್ತಿ ಹೊಂದಿದೆ” ಎಂದು ಕೇಂದ್ರ ವಾದಿಸಿದೆ.
ಭಾರತದ ಕಾನೂನಿನ ಪ್ರಕಾರ ಟ್ವಿಟರ್ ಸಾಮಾನ್ಯ ಅಥವಾ ಕೃತಕ ವ್ಯಕ್ತಿಯಲ್ಲ. ಹೀಗಾಗಿ, ಸಂವಿಧಾನದ 19, 14 ಅಥವಾ 21ನೇ ವಿಧಿಯಡಿ ಹಕ್ಕು ಕ್ಲೇಮ್ ಮಾಡಲಾಗದು. ಟ್ವಿಟರ್‌ನ ಅರ್ಜಿಯು ʼಒಂದು ಅವಕಾಶ ನೋಡುವ ಅಥವಾ ಪ್ರತಿಷ್ಠೆಯ ವಿಜೃಂಭಣೆಯ ದಾವೆʼಯಾಗಿದ್ದು, ನೇರವಾಗಿ ಉದ್ದೇಶವನ್ನು ಸಾಧಿಸಲಾಗದಿದ್ದರಿಂದ ಪರೋಕ್ಷವಾಗಿ ಉದ್ದೇಶ ಈಡೇರಿಸಿಕೊಳ್ಳಲು ರಹಸ್ಯವಾಗಿ ನ್ಯಾಯಾಲಯದ ವ್ಯಾಪ್ತಿ ಬಳಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಅಫಿಡವಿಟ್‌ನಲ್ಲಿ ಆಕ್ಷೇಪಿಸಿದೆ.