ಡಿಸೆಂಬರ್ 9ರಂದು ರಾಷ್ಟ್ರೀಯ ಲೋಕ ಅದಾಲತ್

ಪರಸ್ಪರ ಸಂಧಾನದ ಮೂಲಕ ಉಭಯ ಪಕ್ಷಕಾರರು ಒಪ್ಪಿ ತಮ್ಮ ವ್ಯಾಜ್ಯಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು. ವಾಜ್ಯ ಪೂರ್ವ ಮತ್ತು ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗುತ್ತದೆ.
Lok adalat
Lok adalat
Published on

ವ್ಯಾಜ್ಯ ಮುಕ್ತ ಸಮಾಜದ ಮೂಲಕ ಸೌಹಾರ್ದಯುತ ಸಮಾಜ ನಿರ್ಮಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಡಿಸೆಂಬರ್ 9ರಂದು ರಾಜ್ಯ ವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜನೆ ಮಾಡಿದೆ. ಇದು ಈ ವರ್ಷದ ನಾಲ್ಕನೇ ಲೋಕ ಅದಾಲತ್ (ಜನತಾ ನ್ಯಾಯಾಲಯ) ಆಗಿದೆ.

ಕರ್ನಾಟಕ ಹೈಕೋರ್ಟ್‌ನ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರ ಸಭಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಲೋಕ ಅದಾಲತ್ ವಿವರಗಳನ್ನು ನೂತನ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್‌ ಅವರು ನೀಡಿದರು.

ಪರಸ್ಪರ ಸಂಧಾನದ ಮೂಲಕ ಉಭಯ ಪಕ್ಷಕಾರರು ಒಪ್ಪಿ ತಮ್ಮ ವ್ಯಾಜ್ಯಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು. ವಾಜ್ಯ ಪೂರ್ವ ಮತ್ತು ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗುತ್ತದೆ. ಇದರಿಂದ ನ್ಯಾಯಾಲಯಗಳ ಮೇಲಿನ ಕಾರ್ಯಾಭಾರ ಕಡಿಮೆ ಮಾಡಬಹುದು. ನ್ಯಾಯಾಲಯದ ಅಮೂಲ್ಯ ಸಮಯ ಉಳಿತಾಯ ಮಾಡಬಹುದು. ಸರ್ಕಾರ ಮತ್ತು ಕಕ್ಷಿದಾರರ ಆರ್ಥಿಕ ಹೊರೆ ಕಡಿಮೆ ಆಗಲಿದೆ ಎಂದು ನ್ಯಾ. ದಿನೇಶ್ ಕುಮಾರ್ ತಿಳಿಸಿದರು.

2.60 ಲಕ್ಷ ಪ್ರಕರಣಗಳ ಗುರುತು: ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ 19.93 ಲಕ್ಷ ಪ್ರಕರಣಗಳ ಪೈಕಿ 2.60 ಲಕ್ಷ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಪ್ರಕರಣಗಳನ್ನು ಗುರುತಿಸುವ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದ್ದು, ಈ ಸಂಖ್ಯೆ ಇನ್ನೂ ಏರಿಕೆಯಾಗಬಹುದು. ಡಿ.9ರಂದು ಹೈಕೋರ್ಟ್‌ನ ಬೆಂಗಳೂರು, ಧಾರವಾಡ, ಕಲಬುರ್ಗಿ ಪೀಠಗಳು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಏಕ ಕಾಲಕ್ಕೆ ಸಾವಿರಕ್ಕೂ ಅಧಿಕ ಪೀಠಗಳಲ್ಲಿ ಲೋಕ ಅದಾಲತ್ ಕಲಾಪಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಯಾವೆಲ್ಲ ಪ್ರಕರಣಗಳನ್ನು ತರಬಹುದು?: ಪ್ರಮುಖವಾಗಿ ಚೆಕ್‌ ಅಮಾನ್ಯ, ಬ್ಯಾಂಕ್ ವಸೂಲಾತಿ, ಉದ್ಯೋಗ, ಕಾರ್ಮಿಕರು, ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಆಸ್ತಿ ಪಾಲು, ವೈವಾಹಿಕ ಪ್ರಕರಣಗಳು ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾವೆ ಹೂಡುವ ಮೊದಲೇ ಪರಸ್ಪರ ಸಂಧಾನದ ಮೂಲಕ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಬಹುದು ಎಂದರು.

ಇದಲ್ಲದೆ, ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿಯಾಗಬಲ್ಲ ಅಪರಾಧಿಕ ಮತ್ತು ಸಿವಿಲ್ ಪ್ರಕರಣಗಳು, ಅಪಘಾತ ಪ್ರಕರಣಗಳು, ವಿಮೆ, ಪರಿಹಾರ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ವೇತನ, ಭತ್ಯೆ, ಪಿಂಚಣಿ, ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಕರಣಗಳು, ಬಾಡಿಗೆ ಅನುಭೋಗದ ಹಕ್ಕುಗಳಂತಹ ಸಿವಿಲ್ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್, ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮತ್ತಿತರರು ಇದ್ದರು.

Kannada Bar & Bench
kannada.barandbench.com