ರಾಜ್ಯದ ಎಲ್ಲಾ ನ್ಯಾಯಾಲಯ ಸಂಕೀರ್ಣಗಳಲ್ಲಿ ನವೆಂಬರ್ 12ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ. ತಮ್ಮ ವಿವಾದಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ದಾವೆದಾರರು ಸಂಬಂಧಿತ ಕಾನೂನು ಸೇವೆಗಳ ಪ್ರಾಧಿಕಾರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.
ನ್ಯಾಯಾಲಯದಲ್ಲಿ ಬಾಕಿ ಪ್ರಕರಣಗಳಲ್ಲಿನ ದಾವೆದಾರರು ಹೈಕೋರ್ಟ್ ಕಾನೂನು ಸೇವಾ ಸಮಿತಿ, ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಬಹುದಾಗಿದೆ. ಇತ್ಯರ್ಥಕ್ಕೆ ಯೋಗ್ಯವಾಗಿ ಬಾಕಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಪ್ರಕರಣಗಳನ್ನೂ ಲೋಕ ಅದಾಲತ್‌ನಲ್ಲಿ ಪರಿಗಣಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (ಕೆಎಸ್‌ಎಲ್‌ಎಸ್‌ಎ) ನವೆಂಬರ್ 7ರಿಂದ 10ರವರೆಗೆ ನಡೆಸುವ ಸಂಧಾನ ಪೂರ್ವ ಸಭೆಯಲ್ಲಿ ಭಾಗವಹಿಸಬಹುದು ಎಂದು ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಜೈಶಂಕರ್ ಹೇಳಿದ್ದಾರೆ.
ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ, ಬ್ಯಾಂಕ್ ವಸೂಲಾತಿ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣ, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣ, ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಪ್ರಕರಣ, ಸಾಲ ವಸೂಲಾತಿ ನ್ಯಾಯ ಮಂಡಳಿ, ವೈವಾಹಿಕ/ಕೌಟುಂಬಿಕ ಪ್ರಕರಣ (ವಿಚ್ಚೇದನೆ ಹೊರತುಪಡಿಸಿ), ಚೆಕ್ಕು ಅಮಾನ್ಯವಾದ ಪ್ರಕರಣ, ಸಾಲ ವಸೂಲಾತಿ ನ್ಯಾಯ ಮಂಡಳಿ, ಮೋಟಾರು ಅಪಘಾತ ಪರಿಹಾರ ನ್ಯಾಯ ಮಂಡಳಿ, ಕಾರ್ಮಿಕ ವಿವಾದ, ವಿದ್ಯುತ್ ಹಾಗೂ ನೀರಿನ ಶುಲ್ಕ, ಭೂಸ್ವಾಧೀನ, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಮತ್ತು ಪಿಂಚಣಿ ಪ್ರಕರಣ, ರಾಜಿಯಾಗಬಲ್ಲ ಸಿವಿಲ್ ಪ್ರಕರಣ, ಖಾಯಂ ಜನತಾ ನ್ಯಾಯಾಲಯದಲ್ಲಿನ ಪ್ರಕರಣಗಳು ಲೋಕ ಅದಾಲತ್‌ನಲ್ಲಿ ಪರಿಗಣಿಸಲಾಗುತ್ತದೆ.