
ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಪಾಲಾರ್ ನದಿಗೆ ಸಂಸ್ಕರಿಸದ ತ್ಯಾಜ್ಯ ನೀರು ಮತ್ತು ಕೊಳಚೆ ನೀರು ಹರಿಸುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಕಳವಳ ವ್ಯಕ್ತಪಡಿಸಿದ್ದು ಈ ರೀತಿ ಪರಿಸರ ನಾಶ ಮಾಡಿದರೆ ಅನಿವಾರ್ಯವಾಗಿ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ [ವೆಲ್ಲೂರು ಜಿಲ್ಲಾ ಪರಿಸರ ಮೇಲ್ವಿಚಾರಣಾ ಸಮಿತಿ ಮತ್ತು ಜಿಲ್ಲಾಧಿಕಾರಿ, ವೆಲ್ಲೂರು ಜಿಲ್ಲಾಧಿಕಾರಿ ಇನ್ನಿತರರ ನಡುವಣ ಪ್ರಕರಣ].
ಪ್ರತಿದಿನ ಸಾವಿರಾರು ಲೀಟರ್ ಕೊಳಚೆ ನೀರನ್ನು ನದಿಗೆ ಹರಿಸುವುದರಿಂದ ನದಿ ತೀವ್ರವಾಗಿ ಕಲುಷಿತಗೊಳ್ಳುತ್ತದೆ ಎಂದು ನ್ಯಾಯಮೂರ್ತಿ ಜೆ ಬಿ ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್ ಮಹಾದೇವನ್ ಅವರಿದ್ದ ಪೀಠ ಕಳವಳ ವ್ಯಕ್ತಪಡಿಸಿತು.
ಕುಡಿಯುವ ನೀರಿಗಾಗಿ ಇನ್ನೂ ಅನೇಕರು ನದಿಗಳನ್ನೇ ಅವಲಂಬಿಸಿರುವ ನಮ್ಮ ದೇಶದಲ್ಲಿ, ಹೀಗೆ ಮಾಲಿನ್ಯ ಉಂಟುಮಾಡುವುದು ಆತಂಕಕಾರಿ ಎಂದು ಅವಲೋಕಿಸಿದ ಪೀಠವು, ಪ್ರಕೃತಿ ನಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿತು.
“ಎಲ್ಲರೂ ಅಸಹನೀಯ ಚಿತ್ರವೊಂದನ್ನು ಬರೆದಿದ್ದೀರಿ. ಊಹಿಸಿ ನೋಡಿ- ಸಾವಿರಾರು ಲೀಟರ್ ಕೊಳಚೆ ನೀರನ್ನು ನದಿಗೆ ಪಂಪ್ ಮಾಡಲಾಗುತ್ತಿದೆ. ನದಿಯ ಸ್ಥಿತಿ ಏನಾಗಬೇಡ? ನಮ್ಮ ದೇಶದಲ್ಲಿ ಜನರು ಈಗಲೂ ನೀರು ತರಲು ನದಿಗೆ ಹೋಗುತ್ತಾರೆ ಎಂದು ನಮಗೆ ಗೊತ್ತು. ಎಲ್ಲರಿಗೂ ಕೊಳವೆ ನೀರಿನ ಸಂಪರ್ಕ ಇರುವುದಿಲ್ಲ. ನಾವು ಹೇಳುತ್ತೇವೆ ಕೇಳಿ, ಪ್ರಕೃತಿ ನಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಉಪದೇಶ ಮಾಡುತ್ತಿಲ್ಲ, ಇದು ಹೃದಯದ ಮಾತು” ಎಂದು ನ್ಯಾಯಾಲಯ ವಿವರಿಸಿತು.
ಜನವರಿ 30ರಂದು ನೀಡಿದ್ದ ನಿರ್ದೇಶನಗಳ ಜಾರಿ ಕುರಿತಂತೆ ವಿವಿಧ ಜಿಲ್ಲೆಗಳ ಮೂವರು ಜಿಲ್ಲಾಧಿಕಾರಿಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಸೇರಿದಂತೆ ಎಲ್ಲಾ ಕಕ್ಷಿದಾರರ ವಾದಗಳನ್ನು ನ್ಯಾಯಾಲಯ ಪರಿಗಣಿಸಿತು.
ಜನವರಿ 30ರಂದು ನೀಡಿದ್ದ ತೀರ್ಪಿನಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು, ಪರಿಸರ ತಜ್ಞರು ಮತ್ತು ಪೀಡಿತ ಸಮುದಾಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ಆದೇಶಿಸಿತ್ತು. ಪರಿಸರ ನಾಶ ಸಂಪೂರ್ಣ ತಡೆಯಲು ಪರಿಹಾರ ಕ್ರಮಗಳನ್ನು ಜಾರಿಗೆ ತರಲಾಗಿದೆಯೇ ಎಂಬುದಕ್ಕಾಗಿ ವೆಲ್ಲೂರಿನಲ್ಲಿ ಪರಿಸರ ಹಾನಿಯ ಅಂದಾಜು ಮತ್ತು ಪರಿಸರ ಪುನರ್ ನಿರ್ಮಾಣ ಕ್ರಮಗಳನ್ನು ಕೈಗೊಳ್ಳುವಂತೆ ಸಮಿತಿಗೆ ಸೂಚಿಸಿತ್ತು.
ತುರ್ತು ಕ್ರಮವಾಗಿ ಸಾಮೂಹಿಕ ತ್ಯಾಜ್ಯ ಶುದ್ಧೀಕರಣ ಘಟಕಗಳು (ಸಿಇಟಿಪಿಗಳು) ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಮತ್ತು ಮಾಲಿನ್ಯ ನಿಯಂತ್ರಣ ಸಮಿತಿಯ ಕಾರ್ಯಕ್ಷಮತೆಯನ್ನು ಪರಿಶೀಲಿಸಬೇಕು ಎಂದು ಅದು ಹೇಳಿತು.
ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ತಮ್ಮ ವರದಿಯನ್ನು ಅರ್ಜಿದಾರರಿಗೆ ನೀಡಲು ಅದು ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 25, 2025ರಂದು ನಡೆಯಲಿದೆ.