ಧಾರ್ಮಿಕ ಹಬ್ಬವಾದ ನವರಾತ್ರಿಯು ಶಕ್ತಿಯ ಆರಾಧನೆಯ ಉತ್ಸವವಾಗಿದ್ದು ಇದಕ್ಕೆ ಏಕಾಗ್ರತೆಯ ಅಗತ್ಯವಿರುತ್ತದೆ, ಗದ್ದಲದಲ್ಲಿ ಇದು ಸಾಧ್ಯವಿಲ್ಲ. ಹಾಗಾಗಿ ಗರ್ಬಾ, ದಾಂಡಿಯಾ ಇತ್ಯಾದಿ ನೃತ್ಯಗಳನ್ನು ಪ್ರದರ್ಶಿಸಲು ಆಧುನಿಕ ಧ್ವನಿ ವ್ಯವಸ್ಥೆಗಳಾದ ಡಿಜೆ, ಧ್ವನಿವರ್ಧಕ ಮುಂತಾದವುಗಳ ಅಗತ್ಯವಿಲ್ಲ ಎಂದು ಇತ್ತೀಚೆಗೆ ಬಾಂಬೆ ಹೈಕೋರ್ಟ್ ಹೇಳಿದೆ [ಪವನ್ ಶಾಮ್‌ಸುಂದರ್ ವರ್ಸಸ್ ಮಹಾರಾಷ್ಟ್ರ ಸರ್ಕಾರ].
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸುನಿಲ್ ಶುಕ್ರೆ ಮತ್ತು ನ್ಯಾ. ಗೋವಿಂದ್ ಸನಪ್ ಅವರಿದ್ದ ವಿಭಾಗೀಯ ಪೀಠವು ಶಕ್ತಿಯ ಆರಾಧನೆ ಮಾಡುವ ಒಂಬತ್ತು ದಿವಸಗಳ ಹಬ್ಬವನ್ನು ಗದ್ದಲದಲ್ಲಿ ಭಕ್ತರು ನಡೆಸಲಾಗದು, ಅದೇ ರೀತಿ ಭಕ್ತರೇ ಗದ್ದಲ ಉಂಟು ಮಾಡಿದರೂ ಇದು ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟಿತು.
ಮುಂದುವರೆದು, "ಧಾರ್ಮಿಕ ಆಚರಣೆಯ ಭಾಗವಾಗಿರುವ ದಾಂಡಿಯಾ, ಗರ್ಬಾಗಳನ್ನು ಶುದ್ಧ ಸಾಂಪ್ರದಾಯಿಕ ಹಾಗೂ ಧಾರ್ಮಿಕ ವಿಧಾನಗಳಲ್ಲಿ ಇಂದಿಗೂ ಕೈಗೊಳ್ಳಬಹುದಾಗಿದೆ. ಇದಕ್ಕೆ ಆಧುನಿಕ ಉಪಕರಣಗಳಾದ ಧ್ವನಿ ವ್ಯವಸ್ಥೆ, ಧ್ವನಿವರ್ಧಕ, ಡಿಜೆ ಸೌಂಡ್‌ಗಳ ಅಗತ್ಯವಿಲ್ಲ," ಎಂದಿತು.
ದೇಹ ಮತ್ತು ಮನಸ್ಸಿನ ಎಲ್ಲ ಶಕ್ತಿಯನ್ನೂ ಏಕಾಗ್ರಗೊಳಿಸದೆ ಶಕ್ತಿಯ ಆರಾಧನೆ ಸಾಧ್ಯವಿಲ್ಲ. ಆತ್ಯಂತಿಕ ಸತ್ಯವನ್ನು ಕಾಣಲು ತನ್ನ ಅಸ್ತಿತ್ವವನ್ನೇ ಕರಗಿಸಿಕೊಳ್ಳಬೇಕಾಗುತ್ತದೆ. ಇದು ಅದ್ವೈತದ ಸ್ಥಿತಿ, ಶಾಂತಿ, ಪರಮಾನಂದದ ಸ್ಥಿತಿ ಎಂದು ನ್ಯಾಯಾಲಯ ನವರಾತ್ರಿ ಆಚರಣೆಯ ಮಹತ್ವವನ್ನು ಹೇಳಿತು.
ನವರಾತ್ರಿಯನ್ನು ಅತೀವ ಶ್ರದ್ಧೆಯಿಂದ ಅಚರಿಸಲು ಹೇಳಿದ ಪೀಠವು ಭಕ್ತರು ತಮ್ಮ ನಡೆಯಿಂದಾಗಿ ಹಬ್ಬದ ಶಿಸ್ತು ಮತ್ತು ಪಾವಿತ್ರ್ಯತೆಗೆ ಧಕ್ಕೆ ಉಂಟಾಗದೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಭಕ್ತರು ತ್ಯಾಗ ಮಾಡಬೇಕಿರುವುದು ಅಶಿಸ್ತು ಮತ್ತು ಅವಿವೇಚನೆಯನ್ನು ಎಂದು ಕಿವಿಮಾತು ಹೇಳಿತು.
ಅಂತಿಮವಾಗಿ, ದಾಂಡಿಯಾ ಮತ್ತು ಗರ್ಬಾ ನೃತ್ಯಾಚರಣೆಗಳನ್ನು ಆಧುನಿಕ ಧ್ವನಿವ್ಯವಸ್ಥೆ, ಗದ್ದಲಗಳಿಲ್ಲದೆ ಶುದ್ಧ ಸಾಂಪ್ರದಾಯಿಕತೆ ಹಾಗೂ ಧಾರ್ಮಿಕತೆಯಿಂದ ಸಂಘಟಿಸುವಂತೆ ಸಂಘಟಕರಿಗೆ ಸೂಚಿಸಿತು.