ನವಾಬ್‌ ಮಲಿಕ್‌ ಟೀಕೆಗಳು ಎನ್‌ಸಿಬಿ ಮತ್ತು ವಾಂಖೆಡೆ ಅವರ ಸ್ಥೈರ್ಯಗೆಡಿಸಬಹುದು: ಬಾಂಬೆ ಹೈಕೋರ್ಟ್‌ನಲ್ಲಿ ಪಿಐಎಲ್

ಉದ್ಯಮಿ ಹಾಗೂ ಮೌಲಾನಾ ಆಗಿರುವ ಮುಂಬೈ ನಿವಾಸಿಯೊಬ್ಬರು ಪಿಐಎಲ್ ಸಲ್ಲಿಸಿದ್ದಾರೆ. ಅರ್ಜಿದಾರರು ಮಾದಕವಸ್ತು ವ್ಯಸನಿಗಳ ಪುನರ್ವಸತಿಗೆ ಶ್ರಮಿಸುತ್ತಿದ್ದಾರೆ.
ನವಾಬ್‌ ಮಲಿಕ್‌ ಟೀಕೆಗಳು ಎನ್‌ಸಿಬಿ ಮತ್ತು ವಾಂಖೆಡೆ ಅವರ ಸ್ಥೈರ್ಯಗೆಡಿಸಬಹುದು: ಬಾಂಬೆ ಹೈಕೋರ್ಟ್‌ನಲ್ಲಿ ಪಿಐಎಲ್

ಮಾದಕವಸ್ತು ನಿಯಂತ್ರಣ ದಳ ಮತ್ತು ಅದರ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ಹಾಗೂ ಅವರ ಕುಟುಂಬಸ್ಥರ ಸ್ಥೈರ್ಯಗೆಡಿಸುವಂತಹ ಯಾವುದೇ ಹೇಳಿಕೆಗಳನ್ನು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖಂಡ ನವಾಬ್ ಮಲಿಕ್ ಅವರು ನೀಡದಂತೆ ನಿರ್ಬಂಧಿಸಲು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದು ಬಾಂಬೆ ಹೈಕೋರ್ಟ್‌ ಮುಂದೆ ದಾಖಲಾಗಿದೆ.

ಉದ್ಯಮಿ ಹಾಗೂ ಮೌಲಾನಾ ಆಗಿರುವ ಮುಂಬೈ ನಿವಾಸಿಯೊಬ್ಬರು ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿದ್ದಾರೆ. ಅರ್ಜಿದಾರರು ಮಾದಕವಸ್ತು ವ್ಯಸನಿಗಳ ಪುನರ್ವಸತಿಗೆ ಶ್ರಮಿಸುತ್ತಿದ್ದಾರೆ. ಅರ್ಜಿಯನ್ನು ವಕೀಲ ಅಶೋಕ್ ಸರೋಗಿ ಅವರ ಮೂಲಕ ಸಲ್ಲಿಸಲಾಗಿದೆ.

ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಫಿಯಾಗಳು ಡ್ರಗ್ಸ್‌ ದಂಧೆ ನಡೆಸುತ್ತಿರುವ ಸಂದರ್ಭದಲ್ಲಿ ಎನ್‌ ಸಿಬಿಯಂತಹ ಸಂಸ್ಥೆಗಳು ಮಾಕವಸ್ತುಗಳ ಸೇವನೆಗೆ ಲಗಾಮು ಹಾಕುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನದಲ್ಲಿ ತೊಡಗಿವೆ ಎಂದು ಅರ್ಜಿದಾರರು ತಮ್ಮ ಮನವಿಯಲ್ಲಿ ಹೇಳಿದ್ದಾರೆ.

ಮುಂದುವರೆದು, ನಟ ಸುಶಾಂತ್ ಸಿಂಗ್ ರಜಪೂತ್‌ ಸಾವಿನ ನಂತರ ಅನೇಕ ತನಿಖೆಗಳು ಆರಂಭಗೊಂಡವು. ಎನ್‌ಸಿಬಿ, ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮುಂತಾದ ಸಂಸ್ಥೆಗಳು ಪ್ರಮುಖವಾಗಿ ತನಿಖೆ ಕೈಗೊಂಡವು. “ಇವುಗಳಲ್ಲೆಲ್ಲಾ ಸಮೀರ್ ವಾಂಖೆಡೆ ಎನ್ನುವ ಅಧಿಕಾರಿಯ ಉಸ್ತುವಾರಿಯಲ್ಲಿ ಎನ್‌ಸಿಬಿಯು ಹೆಚ್ಚು ಪರಿಣಾಮಕಾರಿಯಾಗಿ ಮೂಡಿದೆ,” ಎಂದು ಅರ್ಜಿದಾರರು ವಿವರಿಸಿದ್ದಾರೆ.

ಒಂದು ವೇಳೆ ನವಾಬ್‌ ಮಲಿಕ್‌ ಅವರಿಗೆ ವಾಂಖೆಡೆ ಅವರ ವಿರುದ್ಧ ಯಾವುದಾದರೂ ದೂರುಗಳಿದ್ದರೆ ಅದನ್ನು ಅವರು ಪರಿಹರಿಸಿಕೊಳ್ಳಲು ಕಾನೂನಾತ್ಮಕವಾಗಿ ಮುಂದಾಗಬೇಕು. ಅದರೆ, ಮಲಿಕ್ ಅವರು ವಾಂಖೆಡೆ ಮತ್ತು ಅವರ ತಂಗಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. “ವಾಕ್‌ ಸ್ವಾಂತ್ರ್ಯವನ್ನು ಮತ್ತೊಬ್ಬರ ಸ್ಥೈರ್ಯಗೆಡಿಸಲು ಬಳಸಿಕೊಳ್ಳಲಾಗದು” ಎಂದು ಅರ್ಜಿದಾರರು ಪ್ರಮುಖವಾಗಿ ಹೇಳಿದ್ದಾರೆ.

ನವಾಬ್‌ ಮಲಿಕ್ ಅವರ ಹೇಳಿಕೆಗಳು ವಿಲಾಸಿ ಹಡಗಿನಿಂದ ವಶಪಡಿಸಿಕೊಳ್ಳಲಾದ ಮಾದಕವಸ್ತು ಪ್ರಕರಣದ ತನಿಖೆ ಕೈಗೊಂಡಿರುವ ಸಮೀರ್ ವಾಂಖೆಡೆಯವರನ್ನು ಅಧೀರರನ್ನಾಗಿಸಲು ನೀಡಿದಂತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇದೇ ವೇಳೆ, ಮಾಧ್ಯಮಗಳಿಗೆ ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡುವ ಸ್ವಾತಂತ್ರ್ಯವಿದ್ದರೂ ಅದನ್ನು ಸಮಾಜ ಹಾಗೂ ದೇಶದ ಒಳಿತಿಗಾಗಿ ದುಡಿಯುತ್ತಿರುವ ಅಧಿಕಾರಿಯ ಸ್ಥೈರ್ಯಗೆಡಿಸಲು ಬಳಸಲಾಗದು ಎನ್ನಲಾಗಿದೆ.

ಪ್ರಕರಣವನ್ನು ವಕೀಲ ಅಶೋಕ್‌ ಸರೋಗಿ ಅವರು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಹಾಗೂ ನ್ಯಾ. ಎಂ ಎಸ್ ಕಾರ್ಣಿಕ್ ಅವರ ಪೀಠದ ಮುಂದೆ ಪ್ರಕರಣವನ್ನು ಪ್ರಸ್ತಾಪಿಸಿದರು. ಈ ವೇಳೆ ಪೀಠವು ಅವರನ್ನು ರಜಾಕಾಲೀನ ಪೀಠವನ್ನು ಎಡತಾಕುವಂತೆ ಇಲ್ಲವೇ ಕೋರ್ಟ್‌ಗಳು ಯಥಾಪ್ರಕಾರ ಕಾರ್ಯನಿರ್ವಹಿಸುವವರೆಗೆ ಕಾಯುವಂತೆ ಸೂಚಿಸಿತು.

Related Stories

No stories found.
Kannada Bar & Bench
kannada.barandbench.com