ರಾಹುಲ್ ಗಾಂಧಿ ಅವರನ್ನು ದರೋಡೆಕೋರ ಎಂದು ಬಿಂಬಿಸಿದ್ದ ವಿಡಿಯೋ ತೆಗೆದುಹಾಕಲು ಆಜ್ ತಕ್‌ಗೆ ಎನ್‌ಬಿಡಿಎಸ್ಎ ನಿರ್ದೇಶನ

ಭವಿಷ್ಯದ ಪ್ರಸಾರಗಳಲ್ಲಿ ಇಂತಹ ಕಾಲ್ಪನಿಕ ವಿಡಿಯೋಗಳನ್ನು ಪ್ರಸಾರ ಮಾಡುವಾಗಿ ಎಚ್ಚರಿಕೆ ವಹಿಸಬೇಕು ಎಂದು ಎನ್‌ಬಿಡಿಎಸ್ಎ ಪ್ರಸಾರಕರಿಗೆ ಸಲಹೆ ನೀಡಿದೆ.
Rahul Gandhi and Aaj Tak
Rahul Gandhi and Aaj Tak Rahul Gandhi (Facebook)

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದರೋಡೆಕೋರ ಎಂದು ಬಿಂಬಿಸುವ ಕಾಲ್ಪನಿಕ ವಿಡಿಯೋವನ್ನು ತೆಗೆದುಹಾಕುವಂತೆ ಸುದ್ದಿ ಪ್ರಸಾರ ಮತ್ತು ಡಿಜಿಟಲ್‌ ಗುಣಮಟ್ಟ ಪ್ರಾಧಿಕಾರವು (ಎನ್‌ಬಿಡಿಎಸ್‌ಎ) ಗುರುವಾರ ಹಿಂದಿ ಸುದ್ದಿ ವಾಹಿನಿ ಆಜ್ ತಕ್‌ಗೆ ನಿರ್ದೇಶಿಸಿದೆ.

ಕಾಲ್ಪನಿಕ ವಿಡಿಯೋವು ಉತ್ತಮ ಅಭಿರುಚಿ ಹೊಂದಿಲ್ಲ, ಅದನ್ನು ತೆಗೆದುಹಾಕಬೇಕು. ಆ ವಿಡಿಯೋವನ್ನು ತನ್ನ ಚಾನೆಲ್, ಯೂಟ್ಯೂಬ್ ಮತ್ತು ಇತರ ಆನ್‌ಲೈನ್‌ ವೇದಿಕೆಗಳಿಂದ ತೆಗೆದುಹಾಕಬೇಕು ಎಂದು ಎನ್‌ಬಿಡಿಎಸ್‌ಎ ಆದೇಶಿಸಿದೆ.

"ಚಾನೆಲ್‌ನ ವೆಬ್‌ಸೈಟ್‌ ಅಥವಾ ಯೂಟ್ಯೂಬ್‌ನಲ್ಲಿ ಆ ವಿಡಿಯೋ ಲಭ್ಯವಿದ್ದರೆ ವಿಡಿಯೋವನ್ನು ತೆಗೆದುಹಾಕುವುದುರ ಜೊತೆಗೆ ಈ ಕುರಿತು ಆದೇಶಿಸಿದ 7 ದಿನಗಳಲ್ಲಿ ಎನ್‌ಬಿಡಿಎಸ್‌ಎಗೆ ಲಿಖಿತವಾಗಿ ದೃಢೀಕರಿಸಬೇಕು. ಎಲ್ಲಾ ಹೈಪರ್‌ ಲಿಂಕ್‌ಗಳನ್ನು ತೆಗೆದುಹಾಕುವುದು ಸೂಕ್ತವಾಗಿದೆ" ಎಂದು ಎನ್‌ಬಿಡಿಎಸ್‌ಎ ನಿರ್ದೇಶಿಸಿದೆ.

ಈ ವಿಡಿಯೋವನ್ನು ಮಾರ್ಚ್ 24, 2023ರಂದು 'ಬ್ಲ್ಯಾಕ್ ಅಂಡ್ ವೈಟ್' ಎಂಬ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗಿತ್ತು.

'ಎಲ್ಲ ಕಳ್ಳರಿಗೂ ಮೋದಿ ಉಪನಾಮವಿದೆ' ಎಂಬ ಹೇಳಿಕೆಗಾಗಿ ಮಾನಹಾನಿ ಮಾಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರನ್ನು ಸೂರತ್ ನ್ಯಾಯಾಲಯವು ಮಾರ್ಚ್ 23, 2023 ರಂದು ದೋಷಿ ಎಂದು ಘೋಷಿಸಿದ ನಂತರ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗಿತ್ತು.

ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಭದ್ರಾವತಿ ವೆಂಕಟ ಅವರು ಮಾರ್ಚ್ 31, 2023 ರಂದು ಎನ್‌ಬಿಡಿಎಸ್‌ಎಗೆ ದೂರು ಸಲ್ಲಿಸಿದ್ದು, ಈ ವಿಡಿಯೋವನ್ನು ಆರಂಭದಲ್ಲಿ ಆಜ್ ತಕ್‌ನ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ ಮತ್ತು ನಂತರ ಚಾನೆಲ್‌ನ ಸಲಹಾ ಸಂಪಾದಕ ಆಯೋಜಿಸುವ 'ಬ್ಲ್ಯಾಕ್ ಅಂಡ್ ವೈಟ್' ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

ನೀರವ್ ಮೋದಿ ಮಾಡಿದ ಅಪರಾಧಗಳನ್ನು ಗಾಂಧಿ ಆಕ್ಷೇಪಿಸುತ್ತಿದ್ದಾರೆ ಮತ್ತು ಭಾರತ ಸರ್ಕಾರದಿಂದ ಉತ್ತರದಾಯಿತ್ವವನ್ನು ಬಯಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ತಿಳಿದಿದ್ದರೂ ಆಜ್ ತಕ್ ನಿರೂಪಕ ದುರುದ್ದೇಶಪೂರಿತವಾಗಿ ಗಾಂಧಿಯನ್ನು ದರೋಡೆ ಎಸಗಿ ಬಂಧಿಸಲ್ಪಟ್ಟ ವ್ಯಕ್ತಿಗೆ ಹೋಲಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ರಾಹುಲ್ ಗಾಂಧಿ ಯಾವುದೋ ಗಂಭೀರ ಅಪರಾಧ ಎಸಗಿದ್ದಾರೆ ಎಂಬ ಭಾವನೆಯನ್ನು ಸಾರ್ವಜನಿಕರಿಗೆ ಮೂಡಿಸಲು ಈ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ ಎಂದು ಆಕ್ಷೇಪಿಸಲಾಗಿತ್ತು.

[ಆದೇಶ ಓದಿ]

Attachment
PDF
Order.pdf
Preview

Related Stories

No stories found.
Kannada Bar & Bench
kannada.barandbench.com