ಒಬಾಮಾ ಟೀಕಿಸುವಾಗ ತುಕ್ಡೇ ತುಕ್ಡೇ ಗ್ಯಾಂಗ್‌, ಖಾಲಿಸ್ತಾನಿ, ಪಾಕಿಸ್ತಾನಿ ಪದ ಬಳಕೆ: ಆಜ್‌ ತಕ್‌ಗೆ ₹75 ಸಾವಿರ ದಂಡ

ಜನಾಂಗೀಯ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ವಿಫಲವಾದರೆ ಭಾರತವು ವಿಭಜನೆಗೊಳ್ಳುವ ಸಾಧ್ಯತೆ ಇದೆ ಎಂದು 2023ರ ಸಿಎನ್‌ಎನ್‌ ಸಂದರ್ಶನದಲ್ಲಿ ಒಬಾಮಾ ಹೇಳಿದ್ದರು.
Sudhir Chaudhary, AajTak
Sudhir Chaudhary, AajTak Sudhir Chaudhary (X)

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಹೇಳಿಕೆಯನ್ನು ವರದಿಗಾರಿಕೆಯ ವೇಳೆ ವಸ್ತುನಿಷ್ಠತೆ ಹಾಗೂ ತಟಸ್ಥತೆಯ ತತ್ವಗಳನ್ನು ಉಲ್ಲಂಘಿಸಿ ಟೀಕಿಸಿದ್ದಕ್ಕಾಗಿ ಆಜ್ ತಕ್ ಸುದ್ದಿ ವಾಹಿನಿಗೆ ₹ 75,000 ದಂಡ ವಿಧಿಸಿ ಸುದ್ದಿ ಪ್ರಸರಣ ಮತ್ತು ಡಿಜಿಟಲ್‌ ಗುಣಮಟ್ಟ ಪ್ರಾಧಿಕಾರ (ಎನ್‌ಬಿಡಿಎಸ್‌ಎ) ಆದೇಶಿಸಿದೆ.

ಜನಾಂಗೀಯ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ವಿಫಲವಾದರೆ ಭಾರತವು ವಿಭಜನೆಗೊಳ್ಳುವ ಸಾಧ್ಯತೆ ಇದೆ ಎಂದು 2023ರ ಸಿಎನ್‌ಎನ್‌ ಸಂದರ್ಶನದಲ್ಲಿ ಒಬಾಮಾ ಹೇಳಿದ್ದರು.

ಒಬಾಮಾ ಅವರ ಹೇಳಿಕೆಯನ್ನು ಟೀಕಿಸುವಾಗ ನಿರೂಪಕ ಸುಧೀರ್‌ ಚೌಧರಿ ಅವರು ಒಬಾಮಾ ಹೇಳಿಕೆಯನ್ನು ಪ್ರತ್ಯೇಕತಾವಾದಿಗಳು ಮತ್ತು ಉಗ್ರ ಸಂಘಟನೆಗಳ ಜೊತೆ ತುಲನೆ ಮಾಡಿ ತುಕ್ಡೇ ತುಕ್ಡೇ ಗ್ಯಾಂಗ್‌, ಪಂಜಾಬ್‌ನಲ್ಲಿ ಖಾಲಿಸ್ತಾನಿ ಮತ್ತು ಪಾಕಿಸ್ತಾನಿ ಬೆಂಬಲಿಗರು ಎಂದು ಅಸಂಬಂಧಿತ ಸಂಕಥನ ಸೃಷ್ಟಿಸಿದ್ದಾರೆ ಎಂದು ಎನ್‌ಬಿಡಿಎಸ್‌ಎ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಎ ಕೆ ಸಿಕ್ರಿ ಹೇಳಿದ್ದಾರೆ.

“ತುಕ್ಡೇ ತುಕ್ಡೇ ಗ್ಯಾಂಕ್‌, ಪಂಜಾಬ್‌ನಲ್ಲಿ ಖಾಲಿಸ್ತಾನಿ ಮತ್ತು ಪಾಕಿಸ್ತಾನಿ ಬೆಂಬಲಿಗರು ಎಂದು ಆಕ್ಷೇಪಾರ್ಹವಾದ ಪದಗಳನ್ನು ಬಳಕೆ ಮಾಡಲಾಗಿದೆ. ಒಬಾಮಾ ಅವರ ಹೇಳಿಕೆಗೆ ಸೀಮಿತವಾಗಿ ಚರ್ಚೆ ಮಾಡುವ ಬದಲು ವಿವಾದಾತ್ಮಕ ವಿಷಯವನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ವಸ್ತುನಿಷ್ಠವಾಗಿ ಪ್ರಸ್ತುತಪಡಿಸಲು ನಿರೂಪಕರು ವಿಫಲರಾಗಿದ್ದಾರೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಒಬಾಮಾ ಹೇಳಿಕೆಯನ್ನು ಪ್ರತ್ಯೇಕತಾವಾದಿ ಸಂಘಟನೆಗಳು ಮತ್ತು ತೀವ್ರಗಾಮಿ ಸಂಘಟನೆಗಳ ಜೊತೆಗೆ ಸೇರಿಸಿ ತಪ್ಪಾಗಿ ನಿರೂಪಿಸಲಾಗಿದೆ ಎಂದು ಎನ್‌ಬಿಡಿಎಸ್‌ಎ ಹೇಳಿದೆ. ಈ ಮೂಲಕ ವರದಿಗಾರಿಕೆ ವೇಳೆ ಇರಬೇಕಾದ ವಸ್ತುನಿಷ್ಠತೆ ಮತ್ತು ತಟಸ್ಥತೆ ತತ್ವ ಉಲ್ಲಂಘಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ʼಬ್ಲಾಕ್‌ ಅಂಡ್‌ ವೈಟ್‌ʼ ಹೆಸರಿನಲ್ಲಿ ಆಜ್‌ ತಕ್‌ 2023ರ ಜೂನ್‌ 26ರಂದು ನಡೆಸಿದ್ದ ಕಾರ್ಯಕ್ರಮದ ವಿರುದ್ಧ ಉತ್ಕರ್ಷ್‌ ಮಿಶ್ರಾ ಎಂಬುವರು ನೀಡಿದ್ದ ದೂರನ್ನು ಆಧರಿಸಿ ಈ ಆದೇಶ ಮಾಡಲಾಗಿದೆ.

Related Stories

No stories found.
Kannada Bar & Bench
kannada.barandbench.com