ಮಾದಕ ವಸ್ತು ಪ್ರಕರಣ: ಶಾರೂಖ್‌ ಪುತ್ರ ಆರ್ಯನ್‌ ಸೇರಿ 6 ಮಂದಿಯನ್ನು ದೋಷ ಮುಕ್ತಗೊಳಿಸಿದ ಎನ್‌ಸಿಬಿ

ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್‌) ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಧೀಶರ ಮುಂದೆ ಎನ್‌ಸಿಬಿಯು ಇಂದು ಆರೋಪ ಪಟ್ಟಿ ಸಲ್ಲಿಸಿದೆ.
Aryan Khan and NCB
Aryan Khan and NCB

ವಿಲಾಸಿ ಹಡಗಿನಲ್ಲಿ ಮಾದಕ ವಸ್ತು ದೊರೆತ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಸೇರಿದಂತೆ ಆರು ಮಂದಿಯ ವಿರುದ್ಧ ಸಾಕ್ಷ್ಯ ಕೊರತೆಯ ಹಿನ್ನೆಲೆಯಲ್ಲಿ ಅವರಿಗೆ ಮಾದಕವಸ್ತು ನಿಯಂತ್ರಣ ಘಟಕವು (ಎನ್‌ಸಿಬಿ) ಪ್ರಕರಣದಿಂದ ದೋಷ ಮುಕ್ತಗೊಳಿಸಿದೆ.

ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್‌) ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಧೀಶರ ಮುಂದೆ ಎನ್‌ಸಿಬಿಯು ಇಂದು ಆರೋಪ ಪಟ್ಟಿ ಸಲ್ಲಿಸಿದ್ದು, ಆರ್ಯನ್‌ ಸಹಿತ ಅರು ಆರೋಪಿಗಳಿಗೆ ಕ್ಲೀನ್‌ ಚಿಟ್‌ ನೀಡಿದೆ.

ವಿಶೇಷ ತನಿಖಾ ತಂಡವು (ಎಸ್‌ಐಟಿ) ಆರೋಪ ಪಟ್ಟಿಯಲ್ಲಿ 20 ಮಂದಿಯ ಪೈಕಿ 14 ಆರೋಪಿಗಳನ್ನು ಉಲ್ಲೇಖಿಸಿದ್ದು, ಆರ್ಯನ್‌ ಖಾನ್‌ ಸೇರಿದಂತೆ ಆರು ಮಂದಿಯ ವಿರುದ್ದ ಸಾಕ್ಷ್ಯ ಕೊರತೆಯ ಹಿನ್ನೆಲೆಯಲ್ಲಿ ಪ್ರಕ್ರಿಯೆ ಮುಂದುವರಿಸುತ್ತಿಲ್ಲ ಎಂದು ಹೇಳಿದೆ.

ಆರ್ಯನ್‌ ಅಲ್ಲದೆ ಅವಿನ್‌ ಶಾಹು, ಗೋಪಾಲ್‌ಜಿ ಆನಂದ್‌, ಸಮೀರ್‌ ಸೈಘನ್‌, ಭಾಸ್ಕರ್‌ ಅರೋಡಾ ಮತ್ತು ಮಾದವ್‌ ಸಿಂಘಾ ಅವರಿಗೆ ಕ್ಲೀನ್‌ ಚಿಟ್‌ ನೀಡಲಾಗಿದೆ.

“ಎಸ್‌ಐಟಿಯು ನ್ಯಾಯಯುತವಾಗಿ ತನಿಖೆ ನಡೆಸಿದ್ದು, 14 ಮಂದಿಯ ವಿರುದ್ಧ ಎನ್‌ಡಿಪಿಎಸ್‌ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ 14 ಮಂದಿಯ ವಿರುದ್ಧ ದೂರು ದಾಖಲಿಸಲಾಗಿದೆ. ಸಾಕ್ಷ್ಯ ಕೊರತೆಯ ಹಿನ್ನೆಲೆಯಲ್ಲಿ ಆರು ಮಂದಿಯ ವಿರುದ್ಧ ದೂರು ದಾಖಲಿಸಲಾಗಿಲ್ಲ” ಎಂದು ಎನ್‌ಸಿಬಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

“ದೂರು ದಾಖಲಿಸುವ ಪ್ರಶ್ನೆಯನ್ನು ನಿರ್ಧರಿಸುವಾಗ ಕಾನೂನು ತತ್ವಗಳನ್ನು ಸರಿಯಾಗಿ ಅನ್ವಯಿಸಿರುವುದಕ್ಕೆ ಸಂತೋಷವಾಗಿದೆ. ಸರಿಯಾದ ಕೆಲಸ ಮಾಡಲು ಎನ್‌ಸಿಬಿ ಧೈರ್ಯ ಮತ್ತು ವಸ್ತುನಿಷ್ಠತೆ ಅಳವಡಿಸಿಕೊಂಡಿರುವುದು ಸಂತಸದ ವಿಚಾರ. ಏಕೆಂದರೆ ಬಹುತೇಕ ಬಾರಿ ಒಮ್ಮೆ ಬಂಧನವಾದ ಬಳಿಕ ಪ್ರಕ್ರಿಯೆಯ ಮುಂದುವರಿಕೆಯಾಗಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗುತ್ತದೆ. ಹಾಗಾಗಿ, ಇಂಥ ಸನ್ನಿವೇಶಗಳು ನಮಗೆ ಬಂಧನ ಅಧಿಕಾರದ ಬಳಕೆಯ ಬಗ್ಗೆ ಆಲೋಚಿಸಲು ಪ್ರೇರೇಪಿಸುತ್ತವೆ” ಎಂದು ಆರ್ಯನ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಮಿತ್‌ ದೇಸಾಯಿ ಅವರು ಬಾರ್‌ ಅಂಡ್‌ ಬೆಂಚ್‌ಗೆ ಪ್ರತಿಕ್ರಿಯಿಸಿದರು.

ಮುಂಬೈನಿಂದ ಗೋವಾಗೆ ಪ್ರಯಾಣಿಸಿದ್ದ ವಿಲಾಸಿ ಹಡಗಿನ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿಯು 2021ರ ಅಕ್ಟೋಬರ್‌ 2ರಂದು ಆರ್ಯನ್‌ ಅವರನ್ನು ವಶಕ್ಕೆ ಪಡೆದಿತ್ತು. 13 ಗ್ರಾಂ ಕೊಕೇನ್‌, 5 ಗ್ರಾಂ ಮೆಫೆಡ್ರೋನ್‌ ಎಂಡಿ, 21 ಗ್ರಾಂ ಚಾರಸ್‌ ಮತ್ತು 22 ಎಂಡಿಎಂಎ ಎಕ್ಸ್ಟೆಸಿ ಪಿಲ್ಸ್‌ಗಳನ್ನು ವಶಪಡಿಸಿಕೊಂಡಿದ್ದಾಗಿ ಎನ್‌ಸಿಬಿ ಹೇಳಿತ್ತು.

ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌, ಬಳಿಕ ವಿಶೇಷ ನ್ಯಾಯಾಲಯಗಳು ಆರ್ಯನ್‌ಗೆ ಜಾಮೀನು ನಿರಾಕರಿಸಿದ್ದವು. 2021ರ ಅಕ್ಟೋಬರ್‌ 28ರಂದು ಬಾಂಬೆ ಹೈಕೋರ್ಟ್‌ ಜಾಮೀನು ನೀಡಿತ್ತು.

Related Stories

No stories found.
Kannada Bar & Bench
kannada.barandbench.com