ಕೇಶ ಸೌಂದರ್ಯಕ್ಕೆ ಎರವಾದ ಕೆಟ್ಟ ‘ಕೇಶ ವಿನ್ಯಾಸ‌’: ರೂಪದರ್ಶಿಗೆ ರೂ. 2 ಕೋಟಿ ಪರಿಹಾರ ನೀಡಲು ಗ್ರಾಹಕ ಆಯೋಗದ ಆದೇಶ

ಪ್ರಕರಣದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ತೋರುವ ಮೂಲಕ ಐಟಿಸಿ ಮೌರ್ಯ ಹೊಟೆಲ್‌ ಸಮೂಹವು ದೋಷಿಯಾಗಿದ್ದು ರೂಪದರ್ಶಿಯ ತಲೆಯ ಚರ್ಮದ ಉರಿತ, ಕೆರೆತಕ್ಕೆ ಕಾರಣವಾಗಿರುವುದನ್ನು ಆಯೋಗವು ಮನಗಂಡಿತು.
ಕೇಶ ಸೌಂದರ್ಯಕ್ಕೆ ಎರವಾದ ಕೆಟ್ಟ ‘ಕೇಶ ವಿನ್ಯಾಸ‌’: ರೂಪದರ್ಶಿಗೆ ರೂ. 2 ಕೋಟಿ ಪರಿಹಾರ ನೀಡಲು ಗ್ರಾಹಕ ಆಯೋಗದ ಆದೇಶ

ಕೆಟ್ಟ ಕೇಶ ವಿನ್ಯಾಸ ಹಾಗೂ ಕೇಶ ಶುಶ್ರೂಷೆಗಳು ಮಾನಸಿಕ ಆಘಾತಕ್ಕೆ ಕಾರಣವಾಗುವುದಲ್ಲದೆ, ಉತ್ತಮ ಉದ್ಯೋಗಾವಕಾಶಗಳಿಗೆ ಎರವಾಗುತ್ತವೆ. ಹಾಗಾಗಿ, ಅಂತಹ ಕ್ರಿಯೆಗಳು ಸೌಂದರ್ಯವರ್ಧಕ ಸಲೂನ್‌ಗಳ ನಿರ್ಲಕ್ಷ್ಯವನ್ನು ಎತ್ತಿತೋರುತ್ತವೆ ಎಂದು ಇತ್ತೀಚಿನ ಪ್ರಕರಣವೊಂದರಲ್ಲಿ ಅಭಿಪ್ರಾಯಪಟ್ಟಿರುವ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು (ಎನ್‌ಸಿಡಿಆರ್‌ಸಿ) ರೂ.2 ಕೋಟಿ ಪರಿಹಾರವನ್ನು ಮಹಿಳಾ ಗ್ರಾಹಕರೊಬ್ಬರಿಗೆ ನೀಡುವಂತೆ ಐಟಿಸಿ ಹೊಟೆಲ್‌ ಸಮೂಹಕ್ಕೆ ಆದೇಶಿಸಿದೆ. ತನ್ನ ಸಲೂನ್‌ ಮೂಲಕ ಕೇಶ ಸೇವೆಯನ್ನು ನೀಡುವಲ್ಲಿ ಲೋಪವೆಸಗಿದ ಪಂಚತಾರಾ ಹೊಟೆಲ್‌ ಐಟಿಸಿ ಮೌರ್ಯಗೆ ರೂಪದರ್ಶಿ ಆಶ್ನಾ ರಾಯ್ ಅವರಿಗೆ ಪರಿಹಾರ ನೀಡುವಂತೆ ಅಯೋಗ ಸೂಚಿಸಿದೆ [ಆಶ್ನಾ ರಾಯ್‌ ವರ್ಸಸ್‌ ಐಟಿಸಿ ಹೊಟೆಲ್‌ ಸಮೂಹ].

ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ನ್ಯಾ. ಆರ್‌ ಕೆ ಅಗರ್‌ವಾಲ್ ಮತ್ತು ಸದಸ್ಯ ಡಾ. ಎಸ್‌ ಎಂ ಕಾನಿಟ್ಕರ್‌ ಅವರಿದ್ದ ಪೀಠವು ಮಹಿಳೆಯರು ತಮ್ಮ ಕೇಶದ ವಿಷಯದಲ್ಲಿ ಅತ್ಯಂತ “ಜಾಗರೂಕತೆ ಮತ್ತು ಎಚ್ಚರ”ದಿಂದ ಇರುತ್ತಾರೆ. “ತಮ್ಮ ಕೇಶರಾಶಿಯನ್ನು ಉತ್ತಮವಾಗಿರಿಸಿಕೊಳ್ಳಲು ಸಾಕಷ್ಟು ಹಣವನ್ನು ವ್ಯಯಿಸುತ್ತಾರೆ. ತಮ್ಮ ತಲೆಗೂದಲೊಂದಿಗೆ ಅವರಿಗೆ ಭಾವುಕ ನಂಟಿರುತ್ತದೆ,” ಎಂದು ಅಭಿಪ್ರಾಯಪಟ್ಟಿತು.

ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠವು ಅರ್ಜಿದಾರೆಯಾದ ಆಶ್ನಾ ರಾಯ್ ಅವರು ಓರ್ವ ರೂಪದರ್ಶಿಯಾಗಿದ್ದು ತಮ್ಮ ಉದ್ದನೆಯ, ಉತ್ತಮ ಕೇಶದ ಕಾರಣಕ್ಕಾಗಿ ವಿಎಲ್‌ಸಿಸಿ ಮತ್ತು ಪ್ಯಾಂಟೀನ್‌ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದನ್ನು ವಿಶೇಷವಾಗಿ ಗಮನಿಸಿತು. “ಅರ್ಜಿದಾರೆಯ ನಿರ್ದೇಶನಗಳಿಗೆ ವಿರುದ್ಧವಾಗಿ ಎರಡನೆಯ ಪಕ್ಷಕಾರರು (ಐಟಿಸಿ ಹೊಟೆಲ್ ಸಮೂಹ) ನಡೆದುಕೊಂಡಿರುವುದರಿಂದ ಆಕೆಯು ತನ್ನ ನಿರೀಕ್ಷಿತ ಯೋಜನೆಗಳನ್ನು ಕಳೆದುಕೊಳ್ಳುವಂತಾಯಿತು, ಗಂಭೀರ ಪ್ರಮಾಣದ ನಷ್ಟವನ್ನು ಅನುಭವಿಸುವಂತಾಯಿತು. ಇದು ಆಕೆಯ ಜೀವನ ಶೈಲಿಗೆ ಎರವಾಗಿ, ಮುಂಚೂಣಿ ರೂಪದರ್ಶಿಯಾಗುವ ಕನಸಿಗೆ ಅಡ್ಡಿಯಾಯಿತು,” ಎಂದು ಆಯೋಗವು ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಇದಲ್ಲದೆ, ಐಟಿಸಿ ಹೊಟೆಲ್‌ ಸಮೂಹವು ರೂಪದರ್ಶಿಯ ಕೇಶ ಶುಶ್ರೂಷೆಯನ್ನು ಮಾಡುವ ವೇಳೆ ವೈದ್ಯಕೀಯ ನಿರ್ಲಕ್ಷ್ಯ ತೋರುವ ಮುಖೇನ ದೋಷಿಯಾಗಿದೆ ಎಂದೂ ಸಹ ಆಯೋಗ ಹೇಳಿದೆ. “ಆಕೆಯ ತಲೆಯ ಚರ್ಮ ಸುಟ್ಟಿದೆ, ಈಗಲೂ ಸಹ ಆಕೆ ಎರಡನೇ ಪಕ್ಷಕಾರರ (ಐಟಿಸಿ ಹೊಟೆಲ್ ಸಮೂಹ) ತಪ್ಪಿನಿಂದಾಗಿ ಅಲರ್ಜಿ, ತುರಿಕೆ ಅನುಭವಿಸುತ್ತಿದ್ದಾರೆ,” ಎಂದು ಕೋರ್ಟ್‌ ತನ್ನ ಆದೇಶದಲ್ಲಿ ದಾಖಲಿಸಿದೆ. ಅಂತಿಮವಾಗಿ ಆಯೋಗವು ರೂ 2 ಕೋಟಿ ಪರಿಹಾರವನ್ನು ರೂಪದರ್ಶನಿ ಆಶ್ನಾ ರಾಯ್‌ ಅವರಿಗೆ ನೀಡುವಂತೆ ಐಟಿಸಿ ಹೊಟೆಲ್‌ ಸಮೂಹಕ್ಕೆ ಆದೇಶಿಸಿತು.

ಹಿನ್ನೆಲೆ:

ಅರ್ಜಿದಾರೆ ರೂಪದರ್ಶಿಯಾದ ಆಶ್ನಾ ರಾಯ್‌ ನವದೆಹಲಿಯಲ್ಲಿರುವ ಐಟಿಸಿ ಮೌರ್ಯ ಹೊಟೆಲ್‌ನ ಸಲೂನ್‌ಗೆ ಏಪ್ರಿಲ್‌ 12, 2018 ರಂದು ಕೇಶ ವಿನ್ಯಾಸಕ್ಕಾಗಿ ಭೇಟಿ ಇತ್ತರು. ಆಕೆ, ಆನಂತರದ ವಾರದಲ್ಲಿ ಸಂದರ್ಶನ ಸಮಿತಿಯೊಂದರ ಮುಂದೆ ಯೋಜನೆಯೊಂದರ ಸಲುವಾಗಿ ಕಾಣಿಸಿಕೊಳ್ಳಬೇಕಿದ್ದರಿಂದ ಕೇಶ ವಿನ್ಯಾಸ ಮಾಡಿಸಿಕೊಳ್ಳುವ ಅಗತ್ಯತೆ ಅವರಿಗಿತ್ತು. ಸಲೂನ್‌ನಲ್ಲಿ ತಾವು ಯಾವಾಗಲೂ ಕೇಶ ವಿನ್ಯಾಸ ಮಾಡಿಸಿಕೊಳ್ಳುತ್ತಿದ್ದ ಹೇರ್‌ಡ್ರೆಸರ್‌ಗಾಗಿ ಆಶ್ನಾ ಬೇಡಿಕೆ ಇರಿಸಿದರು. ಆದರೆ, ಆಕೆ ಲಭ್ಯವಿಲ್ಲದ ಕಾರಣಕ್ಕೆ ಮತ್ತೋರ್ವ ವಿನ್ಯಾಸಕಾರ್ತಿಯನ್ನು ಅವರಿಗೆ ನೀಡಲಾಯಿತು.

ಕೇಶ ವಿನ್ಯಾಸದ ವೇಳೆ ಆಶ್ನಾ ರಾಯ್‌ ಅವರ ಅಣತಿಗೆ ವಿರುದ್ಧವಾಗಿ ವಿನ್ಯಾಸಕಾರ್ತಿಯು ಅವರ ತಲೆಗೂದಲನ್ನು ಕತ್ತರಿಸಿದ್ದರು. ಉದ್ದವಿರುವ ತಲೆಗೂದಲನ್ನು ‘ಲಾಂಗ್‌ ಫ್ಲಿಕ್ಸ್/ಲೇಯರ್ಸ್’ ರೀತಿಯಲ್ಲಿ ಬರುವಂತೆ, ನಾಲ್ಕು ಇಂಚಷ್ಟೇ ಉದ್ದವನ್ನು ಕಡಿಮೆ ಮಾಡುವಂತೆ ಆಶ್ನಾ ಸೂಚಿಸಿದ್ದರು. ಆಶ್ನಾ ಕನ್ನಡಕವನ್ನು ಧರಿಸುತ್ತಿದ್ದ ಕಾರಣಕ್ಕೆ ಹಾಗೂ ದೃಷ್ಟಿ ದೋಷವನ್ನು ಹೊಂದಿದ್ದರಿಂದ ಒಮ್ಮೆ ಕೇಶ ವಿನ್ಯಾಸಕ್ಕೆ ಕೂತು ತಲೆತಗ್ಗಿಸಿದ ನಂತರ ಅವರಿಗೆ ತಲೆ ಮೇಲೆ ಎತ್ತಿ ತಮ್ಮ ಕೇಶ ವಿನ್ಯಾಸವನ್ನು ಗಮನಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇತ್ತ ವಿನ್ಯಾಸವನ್ನು ಮಾಡಿದ ವಿನ್ಯಾಸಕಾರ್ತಿಯು ಕೇವಲ ನಾಲ್ಕು ಇಂಚು ಕೂದಲನ್ನು ಮಾತ್ರವೇ ಉಳಿಸಿ ಉಳಿದ ತಲೆಕೂದಲನ್ನು ಕತ್ತರಿಸಿದ್ದಳು. ಇದರಿಂದ ಆಶ್ನಾ ತೀವ್ರ ಆಘಾತಕ್ಕೆ ಒಳಗಾದರು. ಆಶ್ನಾ ಹೇಳಿದ್ದ ವಿನ್ಯಾಸಕ್ಕೆ ಬದಲಾಗಿ, ವಿನ್ಯಾಸಕಾರ್ತಿಯು ತುಂಡುಗೂದಲಿನ ‘ಲಂಡನ್‌ ಹೇರ್‌ಕಟ್‌’ ವಿನ್ಯಾಸವನ್ನು ಮಾಡಿದ್ದರು.

ಇತ್ತ ತನ್ನ ಈ ಅನಪೇಕ್ಷಿತ ಕೇಶ ವಿನ್ಯಾಸದಿಂದಾಗಿ ಆಶ್ನಾ ಹೊರಗೆ ಹೋಗುವುದನ್ನು ನಿಲ್ಲಿಸುವಂತಾಯಿತು. ಅವರ ಬಿಡುವಿಲ್ಲದ ದಿನಚರಿಯ ಜೀವನಶೈಲಿಗೆ ಇದು ಹೊಡೆತ ನೀಡಿತು. ತಪ್ಪೆಸಗಿದ ಹೊಟೆಲ್‌ ಸಿಬ್ಬಂದಿ, ವ್ಯವಸ್ಥಾಪಕರು ಮತ್ತು ಆಶ್ನಾ ನಡುವೆ ಹಲವು ಸುತ್ತಿನ ಮಾತುಕತೆ ನಡೆಯಿತು. ಈ ವೇಳೆ, ತನ್ನ ಕತ್ತರಿಸಿದ ತಲೆ ಕೂದಲನ್ನು ಸಹ ಹೊಟೆಲ್‌ ಮಾರಿಕೊಂಡಿರುವುದನ್ನು ಆಶ್ನಾ ಅರಿತರು.

ಆಶ್ನಾ ಅವರಿಗೆ ಉಚಿತವಾಗಿ ಕೇಶ ಶುಶ್ರೂಷೆ ನೀಡಲು ಹೊಟೆಲ್‌ ಮುಂದಾಯಿತು. ಅಂತಿಮವಾಗಿ ಇದಕ್ಕೆ ಒಪ್ಪಿದ ಆಶ್ನಾ ಕೇಶ ಶುಶ್ರೂಷೆಗೆ ಮುಂದಾದರು. ಆದರೆ, ಈ ಸಂದರ್ಭದಲ್ಲಿಯೂ ಸಹ ಸಲೂನ್ ಸಿಬ್ಬಂದಿಯಿಂದ ಮತ್ತೆ ವೈದ್ಯಕೀಯ ನಿರ್ಲಕ್ಷ್ಯ ಎದುರಾಗಿ ಆಶ್ನಾ ಅವರ ತಲೆಯ ಚರ್ಮ ರಾಸಾಯನಿಕಗಳಿಂದ ಸುಟ್ಟು, ಉರಿ, ತುರಿಕೆಗೆ ಕಾರಣವಾಯಿತು. ಅಂತಿಮವಾಗಿ, ಹೊಟೆಲ್‌ ಮತ್ತು ಆಶ್ನಾ ನಡುವೆ ತೀವ್ರ ತರಹದ ಮನಸ್ತಾಪ ಮೂಡಿ ಆಶ್ನಾ ರಾಷ್ಟ್ರೀಯ ಗ್ರಾಹಕ ವ್ಯಾಹ್ಯಗಳ ಪರಿಹಾರ ಆಯೋಗದ ಮುಂದೆ ತನ್ನ ರೂಪದರ್ಶಿ ವೃತ್ತಿಯೊಂದಿಗೆ ಚೆಲ್ಲಾಟವಾಡಿದ ಹೊಟೆಲ್‌ ವಿರುದ್ಧ ಮೊಕದ್ದಮೆ ಹೂಡಿದರು. ಇದೀಗ ಪರಿಹಾರ ನೀಡುವಂತೆ ಐಟಿಸಿ ಹೊಟೆಲ್ ಸಮೂಹಕ್ಕೆ ನ್ಯಾಯಾಲಯ ಆದೇಶಿಸಿದೆ.

Related Stories

No stories found.
Kannada Bar & Bench
kannada.barandbench.com