ಕಾರು ತಯಾರಿಕೆ ವರ್ಷ ತಪ್ಪಾಗಿ ನಮೂದು: ₹18 ಲಕ್ಷ ಪರಿಹಾರ ನೀಡುವಂತೆ ಪೋರ್ಶ್ ಮಾರಾಟ ಮಳಿಗೆಗೆ ಎನ್‌ಸಿಡಿಆರ್‌ಸಿ ಆದೇಶ
ಗ್ರಾಹಕರೊಬ್ಬರಿಗೆ ಮಾರಾಟ ಮಾಡಿದ ಕಾರಿನ ತಯಾರಿಕೆ ವರ್ಷವನ್ನು ತಪ್ಪಾಗಿ ನಮೂದಿಸಿದ್ದಕ್ಕಾಗಿ ₹18 ಲಕ್ಷ ಪರಿಹಾರವನ್ನು ನೀಡುವಂತೆ ಗುರುಗ್ರಾಮದ ಪೋರ್ಶ್ ಕಾರು ಮಾರಾಟ ಘಟಕಕ್ಕೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ಸೋಮವಾರ ಆದೇಶಿಸಿದೆ [ಪ್ರವೀಣ್ ಕುಮಾರ್ ಮಿತ್ತಲ್ ಮತ್ತು ಪೋರ್ಶ್ ಇಂಡಿಯಾ].
ಪೋರ್ಶ್ 2013 ರಲ್ಲಿ ತಯಾರಿಸಿದ ಕಾರನ್ನು 2014 ರಲ್ಲಿ ತಯಾರಿಸಿದ್ದು ಮಾರಾಟ ಮಾಡಿರುವುದು ಸೇವೆಯ ನ್ಯೂನತೆ ಮತ್ತು ಅನ್ಯಾಯದ ವ್ಯಾಪಾರಾಭ್ಯಾಸಕ್ಕೆ ಸಮವಾಗಿದ್ದು, ಇದು ಖರೀದಿದಾರರಿಗೆ ಪರಿಹಾರ ನೀಡಲು ಹೊಣೆಗಾರನಾಗಿಸುತ್ತದೆ ಎಂದು ನ್ಯಾಯಮೂರ್ತಿ ರಾಮ್ ಸೂರತ್ ರಾಮ್ ಮೌರ್ಯ ಮತ್ತು ಸದಸ್ಯ ಡಾ ಇಂದರ್‌ಜಿತ್ ಸಿಂಗ್ ಅವರಿದ್ದ ಆಯೋಗ ತಿಳಿಸಿದೆ.
ಕಾರು ತಯಾರಿಸಿದ ವರ್ಷವನ್ನು ತಪ್ಪಾಗಿ ನಮೂದಿಸಿ ತನಗೆ ಪೋರ್ಷ್ ಕಂಪೆನಿಯ ಕೇಯ್ನ್ ಕಾರನ್ನು ₹80 ಲಕ್ಷಕ್ಕೆ ಮಾರಾಟ ಮಾಡಿದ್ದರು. ತಾನು ಕಾರನ್ನು ಮರುಮಾರಾಟ ಮಾಡಲು ಹೊರಾಟಗ ಈ ವಿಚಾರ ಬೆಳಕಿಗೆ ಬಂತು. ಕಾರು ಖರೀದಿಸಲು ಬಂದಿದ್ದವರು ಇದು 2013ರಲ್ಲಿ ತಯಾರಿಸಿದ ಕಾರು 2014ರಲ್ಲಿ ತಯಾರಿಸಿದ್ದಲ್ಲ ಎಂದು ಹೇಳಿದರು.
ಪ್ರತಿವಾದಿ ಕಾರು ಮಾರಾಟ ಮಳಿಗೆ ತನಗೆ ಮೋಸ ಮಾಡುವ ಸಲುವಾಗಿ ಕಾರಿಗೆ ಸಂಬಂಧಿಸಿದ ದಾಖಲೆಗಳನ್ನು ಸೃಷ್ಟಿಸಿದೆ. ಇದು ಅನ್ಯಾಯಾದ ವ್ಯಾಪಾರ ನಡೆಯಾಗಿದ್ದು ಗ್ರಾಹಕರ ಹಕ್ಕುಗಳಿಗೆ ವಿರುದ್ಧವಾಗಿದೆ. ಹಾಗಾಗಿ, ಕೇಯ್ನ್ ಬದಲಿಗೆ ಅದೇ ಮಾದರಿಯ ಬೇರೊಂದು ಕಾರನ್ನು ಮಾರಾಟಗಾರರು ತನಗೆ ನೀಡಬೇಕು. ಅದು ಸಾಧ್ಯವಾಗದೆ ಹೋದಲ್ಲಿ ಹಳೆಯ ಕಾರಿನ ಮೊತ್ತ ಹಾಗೂ ತಾನು ಅದಕ್ಕೆ ಮಾಡಿರುವ ಖರ್ಚನ್ನು ಸೇರಿಸಿ ಹಣವನ್ನು ಹಿಂತಿರುಗಿಸಬೇಕು. ಇದರ ಜೊತೆಗೆ ತಾನು ಅನುಭವಿಸಿದ ಮಾನಸಿಕ ಯಾತನೆಗಾಗಿ ₹ 1 ಕೋಟಿ ಪರಿಹಾರ ನೀಡುವಂತೆ ಅವರು ಕೋರಿದ್ದರು.
ಪೋರ್ಶ್ ಮಳಿಗೆ ಪ್ರಕಾರ, ಕಾರನ್ನು 2013ರಲ್ಲಿ ತಯಾರಿಸಲಾಗಿದೆ ಎಂದು ಅರ್ಜಿದಾರರಿಗೆ ತಿಳಿದಿತ್ತು. ಹಾಗಾಗಿಯೇ ಅವರಿಗೆ ರಿಯಾಯ್ತಿ ದರದಲ್ಲಿ ಕಾರು ಮಾರಾಟ ಮಾಡಲಾಗಿತ್ತು. ಅಲ್ಲದೆ ತನಗೆ ಆರ್‌ಟಿಒದಲ್ಲಿ ಗೊತ್ತಿರುವವರು ಇರುವುದರಿಂದ 2013ರ ಬದಲಿಗೆ 2014ರಲ್ಲೇ ಕಾರು ಖರೀದಿಯಾದಂತೆ ನೋಂದಾಯಿಸಿಕೊಳ್ಳುವುದಾಗಿ ಖರೀದಿದಾರ ಹೇಳಿದರು. ಹೀಗಾಗಿ ಖರೀದಿದಾರ ತಮ್ಮ ವಿರುದ್ಧ ದುರುದ್ದೇಶಪೂರಿತವಾಗಿ ದೂರು ದಾಖಲಿಸಿದ್ದಾರೆ. 2014ರಲ್ಲಿ ಕಾರನ್ನು ನೋಂದಾಯಿಸಲು ವಿಫಲವಾದ ಬಳಿಕ ಆಯೋಗದ ಮೊರೆ ಹೊಕ್ಕಿದ್ದಾರೆ ಎಂದು ಅದು ದೂರಿತು.
ಆದರೆ ಸಾಕ್ಷ್ಯಾಧಾರಗಳನ್ನು ಗಮನಿಸಿದ ನ್ಯಾಯಾಲಯ ದೂರುದಾರರು ಸಲ್ಲಿಸಿದ ದಾಖಲೆ ಮಾಹಿತಿ ಹಕ್ಕು ಕಾಯಿದೆಯಡಿ ಪಡೆದುಕೊಂಡಿರುವುದರಿಂದ ಅದು ಅಸಲಿ ಮತ್ತು ಪ್ರತಿವಾದಿ ಪೋರ್ಶ್ ಕಾರು ಮಾರಾಟ ಘಟಕ ಸಲ್ಲಿಸಿದ ದಾಖಲೆ ನಕಲಿ ಎಂದು ತಿರಸ್ಕರಿಸಿ ಸೇವಾ ದೋಷ ಮತ್ತು ಕಾರಿನ ವರ್ಷವನ್ನು ತಪ್ಪಾಗಿ ನಮೂದಿಸಿದ್ದಕ್ಕಾಗಿ ಗ್ರಾಹಕರಿಗೆ ₹18 ಲಕ್ಷ ಪರಿಹಾರ ನೀಡುವಂತೆ ಗುರುಗ್ರಾಮ ಪೋರ್ಶ್ ಕಾರು ಮಾರಾಟ ಕೇಂದ್ರಕ್ಕೆ ಆದೇಶಿಸಿತು.