ಸಿಸಿಐ ವಿಧಿಸಿದ್ದ ₹1,337 ಕೋಟಿ ದಂಡದಲ್ಲಿ ಶೇ.10ರಷ್ಟು ಠೇವಣಿ ಇರಿಸಲು ಗೂಗಲ್‌ಗೆ ಸೂಚಿಸಿದ ಎನ್‌ಸಿಎಲ್‌ಎಟಿ

ಆಂಡ್ರಾಯ್ಡ್ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಪ್ರಭಾವಿ ಸ್ಥಾನ ದುರುಪಯೋಗಿಸಿಕೊಂಡ ಕಾರಣಕ್ಕಾಗಿ ಗೂಗಲ್‌ಗೆ ಸಿಸಿಐ ಅಕ್ಟೋಬರ್ 2022ರಲ್ಲಿ ದಂಡ ವಿಧಿಸಿತ್ತು.
Competition Commission of India
Competition Commission of India
Published on

ಭಾರತೀಯ ಸ್ಪರ್ಧಾ ಆಯೋಗವು ತನಗೆ ವಿಧಿಸಿದ್ದ ₹ 1,337 ಕೋಟಿ ದಂಡದ ಆದೇಶದ ವಿರುದ್ಧ ಗೂಗಲ್‌ ಸಲ್ಲಿಸಿರುವ ಮನವಿ ಆಲಿಸುವ ಮುನ್ನ ದಂಡದ ಮೊತ್ತದ ಶೇ.10ರಷ್ಟು ಹಣ ಠೇವಣಿ ಇರಿಸುವಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ಗೂಗಲ್‌ಗೆ ಬುಧವಾರ ಆದೇಶಿಸಿದೆ [ಗೂಗಲ್‌ ಎಲ್‌ಎಲ್‌ಸಿ ಮತ್ತಿತರರು ಹಾಗೂ ಭಾರತೀಯ ಸ್ಪರ್ಧಾ ಆಯೋಗ ನಡುವಣ ಪ್ರಕರಣ].

ಆಂಡ್ರಾಯ್ಡ್‌ ಮೊಬೈಲ್‌ ಮಾರುಕಟ್ಟೆಯಲ್ಲಿ ತನ್ನ ಪ್ರಭಾವಿ ಸ್ಥಾನ ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಗೂಗಲ್‌ಗೆ ಭಾರತೀಯ ಸ್ಪರ್ಧಾ ಅಯೋಗವು (ಸಿಸಿಐ) ಅಕ್ಟೋಬರ್ 2022ರಲ್ಲಿ ದಂಡ ವಿಧಿಸಿತ್ತು. ಆದೇಶವನ್ನು ಗೂಗಲ್‌ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ (ಎನ್‌ಸಿಎಲ್‌ಎಟಿ) ಪ್ರಶ್ನಿಸಿತ್ತು.

ಯಾವುದೇ ಮಧ್ಯಂತರ ಆದೇಶ  ನೀಡಲು ಗುರುವಾರ ನಿರಾಕರಿಸಿದ ಎನ್‌ಸಿಎಲ್‌ಎಟಿಯ ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ರಾಕೇಶ್ ಕುಮಾರ್, ಮತ್ತು ತಾಂತ್ರಿಕ ಸದಸ್ಯ ಡಾ ಅಲೋಕ್ ಶ್ರೀವಾಸ್ತವ,  ಸಿಸಿಐ ಆದೇಶಕ್ಕೆ ತಡೆ ನೀಡಬೇಕು ಮತ್ತು ಮಧ್ಯಂತರ ಪರಿಹಾರ ಒದಗಿಸಬೇಕೆಂದು ಕೋರಿರುವ ಅರ್ಜಿಯನ್ನು ಫೆಬ್ರವರಿ 13ರಂದು ಆಲಿಸುವುದಾಗಿ ತಿಳಿಸಿತು.

Also Read
ಆಂಡ್ರಾಯ್ಡ್‌ ಮೊಬೈಲ್‌ ಮಾರುಕಟ್ಟೆಯಲ್ಲಿ ಸ್ಪರ್ಧಾ ವಿರೋಧಿ ಚಟುವಟಿಕೆ: ಗೂಗಲ್‌ಗೆ ₹1,337 ಕೋಟಿ ದಂಡ ವಿಧಿಸಿದ ಸಿಸಿಐ

ಗೂಗಲ್ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಅವರು ಯೂರೋಪಿಯನ್‌ ಕಮಿಷನ್‌ 2018ರಲ್ಲಿ ಆಂಡ್ರಾಯ್ಡ್‌ ಮೊಬೈಲ್‌ ಸಾಧನ ತಯಾರಕರ ಮೇಲೆ ಅಕ್ರಮ ನಿರ್ಬಂಧ ಹೇರಿದ ಆರೋಪಕ್ಕಾಗಿ ಗೂಗಲ್‌ಗೆ  4.1 ಶತಕೋಟಿ ಯುರೋಗಳಷ್ಟು ದಂಡ ವಿಧಿಸಿತ್ತು. ಸಿಸಿಐ ನೀಡಿರುವ ಆದೇಶ, ಯುರೋಪಿಯನ್ ಕಮಿಷನ್ ನೀಡಿದ್ದ ಆದೇಶದ ಯಥಾವತ್‌ ನಕಲಾಗಿದೆ ಎಂದು ದೂರಿದರು.

"ಅವರು (ಸಿಸಿಐ) ಯುರೋಪಿಯನ್ ಕಮಿಷನ್ ಆದೇಶವನ್ನು ಕಾಪಿ ಪೇಸ್ಟ್ ಮಾಡಿದ್ದಾರೆ. ಈ ಆದೇಶದ ಮೂಲಕ ಸಿಸಿಐ 2005ರಿಂದ ಅಂದರೆ  ಕಳೆದ 17 ವರ್ಷಗಳಿಂದ ಅಸ್ತಿತ್ವದಲ್ಲಿರುವ  ವ್ಯವಸ್ಥೆಯನ್ನು ಬದಲಾಯಿಸುತ್ತಿದ್ದಾರೆ" ಎಂದು ಆರೋಪಿಸಿದರು.

ಆದರೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಿಸಿಐ ಆದೇಶ ಬಂದಿರುವುದರಿಂದ ಮಧ್ಯಂತರ ಆದೇಶ ರವಾನಿಸುವ ಯಾವುದೇ ತುರ್ತು ಅಗತ್ಯವಿಲ್ಲ ಎಂದು ಎನ್‌ಸಿಎಲ್‌ಎಟಿ ಹೇಳಿದೆ. “ಮಧ್ಯಂತರ ಆದೇಶ ಮೀಡುವ ಮೊದಲು ಪ್ರಕರಣ ಅರ್ಥ ಮಾಡಿಕೊಳ್ಳಬೇಕಿದೆ. ದಾಖಲೆಗಳನ್ನು ನೋಡಬೇಕಿದೆ. ಅರ್ಧಗಂಟೆ ನಿಮ್ಮ ಮಾತು ಕೇಳಿ ಆದೇಶ ರವಾನಿಸುತ್ತೇವೆ ಎಂದು ಹೇಗೆ ನೀವು ನಿರೀಕ್ಷಿಸುತ್ತೀರಿ" ಎಂದ ನ್ಯಾಯಮಂಡಳಿ ಪ್ರಕರಣವನ್ನು ಫೆಬ್ರವರಿ 13ಕ್ಕೆ ಮುಂದೂಡಿತು.

Kannada Bar & Bench
kannada.barandbench.com