ಮೆಟಾದೊಂದಿಗೆ ದತ್ತಾಂಶ ಹಂಚಿಕೊಳ್ಳದಂತೆ ವಾಟ್ಸಾಪ್‌ಗೆ ನಿರ್ಬಂಧಿಸಿದ್ದ ಸಿಸಿಐ ಆದೇಶಕ್ಕೆ ಎನ್‌ಸಿಎಲ್‌ಎಟಿ ತಡೆ
ತನ್ನ ವೇದಿಕೆಗಳಲ್ಲಿ ಸಂಗ್ರಹಿಸಿದ ದತ್ತಾಂಶವನ್ನು ಮೆಟಾ ಕಂಪನಿ ಅಥವಾ ಅದರ ಉತ್ಪನ್ನಗಳೊಂದಿಗೆ ಐದು ವರ್ಷಗಳವರೆಗೆ ಹಂಚಿಕೊಳ್ಳದಂತೆ ವಾಟ್ಸಾಪ್‌ಗೆ ನಿರ್ದೇಶನ ನೀಡಿದ್ದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಆದೇಶಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಗುರುವಾರ ತಡೆ ನೀಡಿದೆ.
ವೇದಿಕೆ ಉಚಿತವಾಗಿರುವುದರಿಂದ 5 ವರ್ಷಗಳ ನಿಷೇಧ ವಾಟ್ಸಾಪ್ ವ್ಯವಹಾರ ಮಾದರಿಯ ಕುಸಿತಕ್ಕೆ ಕಾರಣವಾಗಬಹುದು. ನಿಷೇಧಕ್ಕೆ ತಡೆ ನೀಡುವ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ ಎಂಬುದಾಗಿ ಮಂಡಳಿ ಅಧ್ಯಕ್ಷ ನ್ಯಾ. ಅಶೋಕ್ ಭೂಷಣ್ ಮತ್ತು ತಾಂತ್ರಿಕ ಸದಸ್ಯ ಅರುಣ್ ಬರೋಕಾ ಅವರು ತಿಳಿಸಿದರು.
ಅಲ್ಲದೆ ದಂಡದ ಶೇ 50ರಷ್ಟು ಮೊತ್ತವನ್ನು ವಾಟ್ಸಾಪ್ ಇಲ್ಲವೇ ಮೆಟಾ ಠೇವಣಿ ಇಡುವಂತೆ ಸೂಚಿಸಿದ ನ್ಯಾಯಮಂಡಳಿ ₹213.14 ಕೋಟಿ ದಂಡ ವಿಧಿಸಿದ್ದ ಸಿಸಿಐ ಆದೇಶಕ್ಕೆ ತಡೆಹಿಡಿಯಿತು.
ವಾಟ್ಸಾಪ್ ಗೌಪ್ಯತಾ ನೀತಿ ಸಂಬಂಧ ತನ್ನ ಪ್ರಬಲ ಸ್ಥಾನ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಸಿಸಿಐ ಮೆಟಾಗೆ ₹213.14 ಕೋಟಿ ದಂಡ ವಿಧಿಸಿತ್ತು. ಕೆಲ ನಿರ್ಬಂಧ ಆದೇಶಗಳನ್ನು ಮೆಟಾ ಮತ್ತು ವಾಟ್ಸಾಪ್‌ಗೆ ನೀಡಿದ ಸಿಸಿಐ ನಿರ್ದಿಷ್ಟ ನಡವಳಿಕೆ ಪರಿಹಾರಗಳನ್ನು ನಿಗದಿತ ಗಡುವಿನೊಳಗೆ ಜಾರಿಗೊಳಿಸಲು ನಿರ್ದೇಶಿಸಿತ್ತು.
ಸೇವಾ ನಿಯಮಾವಳಿ ಮತ್ತು ಗೌಪ್ಯತಾ ನೀತಿ ನವೀಕರಣದ ವಿಚಾರವನ್ನು ವಾಟ್ಸಾಪ್ ಜನವರಿ 2021ರಲ್ಲಿ ತನ್ನ ಬಳಕೆದಾರರಿಗೆ ತಿಳಿಸಿತ್ತು. ಫೆಬ್ರವರಿ 8, 2021ರಿಂದ ಅದು ಜಾರಿಗೆ ಬಂದಿತ್ತು. ಫೇಸ್‌ಬುಕ್‌ನೊಂದಿಗೆ ಮಾಹಿತಿ ಹಂಚಿಕೊಳ್ಳುವುದರಿಂದ ವಾಟ್ಸಾಪ್ ಬಳಕೆದಾರರನ್ನು ಹೊರಗಿಟ್ಟಿದ್ದ 2016 ನೀತಿಗಿಂತ ಭಿನ್ನವಾಗಿ 2021ರ ನೀತಿ ದತ್ತಾಂಶ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಿತ್ತು. ವಾಟ್ಸಾಪ್ ಬಳಕೆ ಮುಂದುವರೆಸಬೇಕಾದಲ್ಲಿ ದತ್ತಾಂಶ ಹಂಚಿಕೊಳ್ಳುವ ನಿಯಮವನ್ನು ಬಳಕೆದಾರರು ಒಪ್ಪಿಕೊಳ್ಳಬೇಕಿತ್ತು.
ಈ ವಿಚಾರವಾಗಿ ತನಿಖೆ ಆರಂಭಿಸಿದ್ದ ಸಿಸಿಐ ಭಾರತದ ಮಾರುಕಟ್ಟೆಯಲ್ಲಿ ಮೆಟಾಗೆ ಪ್ರಬಲ ಸ್ಥಾನವಿದ್ದು ಅದು ದತ್ತಾಂಶ ಹಂಚಿಕೆ ಕಡ್ಡಾಯಗೊಳಿಸಿರುವುದು ಬಳಕೆದಾರರ ಸ್ವಾಯತ್ತತೆಯನ್ನು ದುರ್ಬಲಗೊಳಿಸಿದ್ದು ಮೆಟಾ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿರುವುದನ್ನು ಸೂಚಿಸುತ್ತದೆ ಎಂದಿತ್ತು.