ಚಂಡೀಗಢ ಎನ್‌ಸಿಎಲ್‌ಟಿ ಪೀಠದ ಸದಸ್ಯರ ನಡುವೆ ವಾಗ್ವಾದ: ಎಲ್ಲಾ ಪ್ರಕರಣ ಹಿಂಪಡೆದ ನ್ಯಾಯಮಂಡಳಿ ಅಧ್ಯಕ್ಷರು

ಈ ಬೆಳವಣಿಗೆಯನ್ನು ನ್ಯಾಯಮಂಡಳಿಯ ರಿಜಿಸ್ಟ್ರಾರ್ ಫೆಬ್ರವರಿ 3ರಂದು ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಎನ್‌ಸಿಎಲ್‌ಟಿ ಚಂಡೀಗಢ
ಎನ್‌ಸಿಎಲ್‌ಟಿ ಚಂಡೀಗಢ ಫೇಸ್ ಬುಕ್
Published on

ಚಂಡೀಗಢದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ನ್ಯಾಯಾಂಗ ಮತ್ತು ತಾಂತ್ರಿಕ ಸದಸ್ಯರು ಪರಸ್ಪರ ತೀವ್ರ ವಾಗ್ವಾದದಲ್ಲಿ ತೊಡಗಿದ ದೃಶ್ಯಾವಳಿ ವೈರಲ್‌ ಆದ ಹಿನ್ನೆಲೆಯಲ್ಲಿ ನ್ಯಾಯಮಂಡಳಿಯ ಅಧ್ಯಕ್ಷರು ಪೀಠದ ಎಲ್ಲಾ ಪ್ರಕರಣಗಳನ್ನು ಹಿಂಪಡೆದು ಅದನ್ನು ಬೇರೊಂದು ಪೀಠಕ್ಕೆ ವರ್ಗಾಯಿಸಿದ್ದಾರೆ.

ಈ ಬೆಳವಣಿಗೆಯನ್ನು ನ್ಯಾಯಮಂಡಳಿಯ ರಿಜಿಸ್ಟ್ರಾರ್ ಫೆಬ್ರವರಿ 3ರಂದು ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ನ್ಯಾಯಪೀಠದ ಬಾಕಿ ಇರುವ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಧಿಕರಣದ ಇತರ ಪೀಠಕ್ಕೆ ವರ್ಗಾಯಿಸಲಾಗಿದೆ. ಆದರೆ ತೀರ್ಪು ಕಾಯ್ದಿರಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆದಷ್ಟು ಬೇಗ ಆದೇಶ ಪ್ರಕಟಿಸುವಂತೆ ಪೀಠಕ್ಕೆ ಸೂಚಿಸಲಾಗಿದೆ.

ಜನವರಿಯಲ್ಲಿ ನಡೆದ ವಿಚಾರಣೆಯೊಂದರ ವೇಳೆ ಪ್ರಕರಣಗಳನ್ನು ನಡೆಸುವ ರೀತಿ ಬಗ್ಗೆ ನ್ಯಾಯಾಂಗ ಸದಸ್ಯ ಡಾ. ಪಟಿಬಂಡ್ಲಾ ಸತ್ಯನಾರಾಯಣ ಪ್ರಸಾದ್ ಮತ್ತು ತಾಂತ್ರಿಕ ಸದಸ್ಯ ಉಮೇಶ್ ಕುಮಾರ್ ಶುಕ್ಲಾ ಅವರ ನಡುವೆ ನಡೆದಿದ್ದ ಮಾತಿನ ಚಕಮಕಿ ಕುರಿತ ಮೂರು ನಿಮಿಷಗಳ ವೀಡಿಯೊ ವೈರಲ್‌ ಆಗಿತ್ತು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಮಾಜಿ ಕಾನೂನು ಸಲಹೆಗಾರರಾಗಿರುವ ಪ್ರಸಾದ್, ತಾನು ನ್ಯಾಯಾಲಯದ ನಿಯಂತ್ರಕ ಎಂಬುದಾಗಿ, ಶುಕ್ಲಾ ಅವರಿಗೆ ಕಟುವಾಗಿ ತಿಳಿಸಿದ್ದು ತಮ್ಮ ನಡೆಯನ್ನು ಸರಿಪಡಿಸಿಕೊಳ್ಳುವಂತೆ ಬುದ್ಧಿವಾದ ಹೇಳಿದ್ದರು. ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯಲ್ಲಿ ಶುಕ್ಲಾ ಅವರು ಈ ಹಿಂದೆ ಮುಖ್ಯ ಸಲಹೆಗಾರರಾಗಿದ್ದರು.

ಇದು ಪ್ರತ್ಯೇಕ ಪ್ರಕರಣವಲ್ಲ. ತಾಂತ್ರಿಕ ಸದಸ್ಯರು ನ್ಯಾಯಾಂಗ ಸದಸ್ಯರ ವಿರುದ್ಧ ಈ ಹಿಂದೆಯೂ ವ್ಯತಿರಿಕ್ತವಾಗಿ ನಡೆದುಕೊಂಡಿದ್ದರು ಎಂದು ಮೂಲಗಳು ʼಬಾರ್‌ ಅಂಡ್‌ ಬೆಂಚ್‌ʼಗೆ ತಿಳಿಸಿದ್ದವು. ನ್ಯಾಯಾಂಗೇತರ ಹಿನ್ನೆಲೆ ಇರುವ ಶುಕ್ಲಾ ಅವರು ನ್ಯಾಯಾಂಗ ಪೀಠಕ್ಕೆ ಹೊಂದಿಕೊಳ್ಳುವ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ವಕೀಲ ಸಮುದಾಯ ಹೇಳಿತ್ತು.

ಪೀಠದಲ್ಲಿದ್ದಾಗ ಬೇರೆ ರೀತಿಯೇ ನಡೆದುಕೊಳ್ಳಬೇಕಾಗುತ್ತದೆ ಆಕ್ಷೇಪಗಳಿದ್ದಾಗ ಎಚ್ಚರಿಕೆ ಮತ್ತು ಸೂಕ್ಷ್ಮತೆಯಿಂದ ವರ್ತಿಸಬೇಕಾಗುತ್ತದೆ ಎಂದು ಚಂಡೀಗಢದ ಹಿರಿಯ ವಕೀಲರೊಬ್ಬರು ತಿಳಿಸಿದ್ದರು.

ಅಲ್ಲದೆ ಎನ್‌ಸಿಎಲ್‌ಟಿ ಚಂಡೀಗಢ ಪೀಠದಲ್ಲಿ ಎರಡು ನ್ಯಾಯಾಲಯಗಳಿದ್ದರೂ ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಪರಿಣಮ ಒಂದು ನ್ಯಾಯಾಲಯ ಬೆಳಗಿನ ಹೊತ್ತು ಪ್ರಕರಣ ಆಲಿಸಿದರೆ ಇನ್ನೊಂದು ನ್ಯಾಯಾಲಯ ಮಧ್ಯಾಹ್ನ ಕೆಲಸ ಮಾಡುತ್ತದೆ. ಇದು ಸಮಯದ ನಿರ್ಬಂಧ ಮತ್ತು ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ಮಾಡಬೇಕೆಂಬ ಇಂಗಿತ ಹುಟ್ಟುಹಾಕುತ್ತದೆ ಎಂದು ವಕೀಲರು ಅನಿಸಿಕೆ ಹಂಚಿಕೊಂಡಿದ್ದರು.

[ಚಂಡೀಗಢ ಎನ್‌ಸಿಎಲ್‌ಟಿ ರಿಜಿಸ್ಟ್ರಾರ್‌ ಅವರ ಆದೇಶ ಓದಲು ಇಲ್ಲಿ ಕ್ಲಿಕ್ಕಿಸಿ]

Attachment
PDF
NCLT Chandigarh Registrar order dated 03.02.2024.pdf
Preview
Kannada Bar & Bench
kannada.barandbench.com